District Chamber of Commerce and Industry ಆದಾಯ ತೆರಿಗೆ ಇಲಾಖೆಯು ಕೈಗೊಂಡಿರುವ ಅನೇಕ ಸುಧಾರಣೆ ಕ್ರಮಗಳಿಂದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿರುವವರ ಸಂಖ್ಯೆ ಹೆಚ್ಚಾಗಿದ್ದು, ಆದಾಯ ತೆರಿಗೆ ಪಾವತಿಸುವವರ ಸಂಖ್ಯೆ ಇನ್ನು ಹೆಚ್ಚಾಗಬೇಕಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಆದಾಯ ತೆರಿಗೆ ಇಲಾಖೆ ಶಿವಮೊಗ್ಗ, ದಾವಣಗೆರೆ ವಿಭಾಗ, ಜಿಲ್ಲಾ ಚಾರ್ಟರ್ಡ್ ಅಕೌಂಟೆಂಟ್, ಜಿಲ್ಲಾ ತೆರಿಗೆ ಸಲಹೆಗಾರರ ಸಂಘಗಳ ಸಹಯೋಗದೊಂದಿಗೆ ಸಂಘದ ಶಾಂತಲಾ ಸ್ಪೇರ್ ಕಾಸ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಕೇಂದ್ರ ಬಜೆಟ್ 2025ರಲ್ಲಿ ಆದಾಯ ತೆರಿಗೆ, ಟಿಡಿಎಸ್ ಮತ್ತು ಟಿಸಿಎಸ್‌ನ ನಿಯಮಗಳಿಗೆ ಇತ್ತೀಚಿಗೆ ಆದ ಬದಲಾವಣೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಜನಸಂಖ್ಯೆಗೆ ಹೋಲಿಸಿದರೆ ಆದಾಯ ತೆರಿಗೆ ಪಾವತಿಸುವವರ ಸಂಖ್ಯೆ ಅತ್ಯಂತ ಕಡಿಮೆ ಇದೆ. ಆದಾಯ ತೆರಿಗೆ ಇಲಾಖೆಯು ಪ್ರಮುಖ ಜನಸ್ನೇಹಿ ಕಾರ್ಯಕ್ರಮ ಹಾಗೂ ದಶಕದಿಂದ ಆದ ತೆರಿಗೆ ಸುಧಾರಣೆಗಳಿಂದ ತೆರಿಗೆದಾರನಿಗೆ ಪ್ರಯೋಜನವಾಗಿದ್ದು, ಸರ್ಕಾರದ ಖಜಾನೆಗೆ ಹೆಚ್ಚಿನ ಪ್ರಮಾಣದಲ್ಲಿ ನೇರ ತೆರಿಗೆ ಬಂದಿದೆ. ಇದರಿಂದ ದೇಶದಲ್ಲಿ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮ ಹಾಗೂ ಮೂಲ ಸೌಕರ್ಯದ ಅಭಿವೃದ್ಧಿಯಾಗಿದೆ. ಇಂತಹ ಅರಿವು ಕಾರ್ಯಕ್ರಮಗಳಿಗೆ ಆದಾಯ ತೆರಿಗೆ ಇಲಾಖೆ ಜತೆಗೆ ಸಂಘ ಕೈಗೂಡಿಸುತ್ತದೆ ಎಂದರು.
ಬೆAಗಳೂರಿನ ಆದಾಯ ತೆರಿಗೆ (ಎಸಿಐಟಿ) ಹೆಚ್ಚುವರಿ ಆಯುಕ್ತ ಪಿ.ವಿಮಲ್ ರಾಜ್ ಮಾತನಾಡಿ, ನಾಗರಿಕರಲ್ಲಿ ಆದಾಯ ತೆರಿಗೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯ ಇದೆ. ಸಕಾಲದಲ್ಲಿ ಐಟಿ ರಿಟರ್ನ್ಸ್ ಸಲ್ಲಿಸುವುದರಿಂದ ಆಗುವ ಅನುಕೂಲಗಳು ಮತ್ತು ಅದನ್ನು ಸಲ್ಲಿಸದಿರುವುದರಿಂದಾಗುವ ಅನಾನುಕೂಲಗಳನ್ನು ವಿವರಿಸಿದರು.
ಶಿವಮೊಗ್ಗ ಆದಾಯ ತೆರಿಗೆ ಅಧಿಕಾರಿ ಕೆ.ಶ್ರೀನಿವಾಸರಾವ್ ಮಾತನಾಡಿ, ತೆರಿಗೆದಾರನು ಸರಿಯಾಗಿ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸುವ ಮೂಲಕ ವ್ಯಾಜ್ಯಗಳಿಗೆ ಒಳಪಡದೇ ಸರಿಯಾದ ದಾಖಲೆಗಳನ್ನು ಹೇಗೆ ನಿರ್ವಹಣೆ ಮಾಡಬಹುದು ಎನ್ನುವುದರ ಬಗ್ಗೆ ಪಿಪಿಟಿ ಮೂಲಕ ವಿವರವಾಗಿ ಮಾಹಿತಿ ನೀಡಿದರು.
ದಾವಣಗೆರೆ ಆದಾಯ ತೆರಿಗೆ ಅಧಿಕಾರಿ ಸುಬ್ಬರಾಜು ಮಾತನಾಡಿ, ಟಿಡಿಎಸ್ ಮತ್ತು ಟಿಸಿಎಸ್ ನಿಯಮಾವಳಿಗೆ ಇತ್ತೀಚಿಗೆ ಆದ ತಿದ್ದುಪಡಿಗೆಗಳ ಕುರಿತು ಪಿಪಿಟಿ ಮೂಲಕ ವಿವರಣೆ ನೀಡಿದರು.
District Chamber of Commerce and Industry ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಪ್ರೋಗ್ರಾಮ್ ಕಮಿಟಿ ಛೇರ್ಮನ್ ಸಿ.ಎ.ಶರತ್, ನಿರ್ದೇಶಕರಾದ ಗಣೇಶ್ ಎಂ.ಅಂಗಡಿ, ಎಸ್.ಎಸ್.ಉದಯ್ ಕುಮಾರ್, ವಿನೋದ್ ಕುಮಾರ್ ಜೈನ್, ಎಚ್.ಎಸ್.ನರೇಂದ್ರ, ಎಸ್.ಪಿ.ಶಂಕರ್, ಕೆ.ಎನ್.ರಾಜಶೇಖರ್, ರವಿಪ್ರಕಾಶ್ ಜನ್ನಿ, ಲಕ್ಷ್ಮೀ ಗೋಪಿನಾಥ್, ಬಿ.ಸುರೇಶ್ ಕುಮಾರ್, ಮಾಜಿ ಅಧ್ಯಕ್ಷರಾದ ಕೆ.ವಿ.ವಸಂತ್ ಕುಮಾರ್, ಶಿವಮೊಗ್ಗ ಜಿಲ್ಲಾ ಸಿಎ ಅಸೋಸಿಯೇಷನ್ ಅಧ್ಯಕ್ಷ ಎನ್.ಎಲ್.ಪ್ರಸಾದ್, ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಪದಾಧಿಕಾರಿಗಳು, ತೆರಿಗೆದಾರರು, ಸಂಯೋಜಿತ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ವಾಣಿಜ್ಯೋದ್ಯಮಿಗಳು, ಸನ್ನದು ಲೆಕ್ಕ ಪರಿಶೋಧಕರು, ತೆರಿಗೆ ಸಲಹೆಗಾರರು, ಆದಾಯ ತೆರಿಗೆ ಇಲಾಖೆಯ ಇತರೆ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.
