World Arthritis Day ಸಂಧಿವಾತದ ತಡೆಗಟ್ಟುವಿಕೆ ಹಾಗೂ ನಿರ್ವಹಣೆಗೆ ಸರಿಯಾದ ವ್ಯಾಯಾಮ ಅವಶ್ಯಕ ಎಂದು ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆ ಉಪಾಧ್ಯಕ್ಷ, ಮೂಳೆ ಕೀಲು ತಜ್ಞ ಡಾ. ರಾಮಚಂದ್ರ ಬಾದಾಮಿ ಹೇಳಿದರು.
ವಿಶ್ವ ಸಂಧಿವಾತದ ದಿನದ ಪ್ರಯುಕ್ತ ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆ ವತಿಯಿಂದ ಪರಿಹಾರ ಆಧಾರ ಆರೈಕೆ ಕೇಂದ್ರದಲ್ಲಿ ಆಯೋಜಿಸಿದ್ದ ಸಂಧಿವಾತ ಕುರಿತ ಜಾಗೃತಿ ಉಪನ್ಯಾಸ ಮತ್ತು ಸರಳ ವ್ಯಾಯಾಮಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಧಿವಾತದ ಸಾಮಾನ್ಯ ಲಕ್ಷಣಗಳಾದ ಸಂಧಿಗಳ ನೋವು, ಊತ, ಗಟ್ಟಿತನ, ಸಂಧಿಯ ಚಲನೆಗೆ ಆಗುವ ಅಡಚಣೆ ಇತ್ಯಾದಿ ಕುರಿತು ಮಾಹಿತಿ ಹೊಂದಬೇಕು. ತೂಕ ನಿಯಂತ್ರಣ, ಸಮತೋಲಿತ ಆಹಾರ ಮತ್ತು ನಿಯಮಿತ ವೈದ್ಯಕೀಯ ತಪಾಸಣೆ ಮಹತ್ವ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆ ಅಧ್ಯಕ್ಷ ಡಾ. ಕೆ.ಆರ್.ರವೀಶ್ ಮಾತನಾಡಿ, ಪ್ರತಿ ವರ್ಷ ಅಕ್ಟೋಬರ್ 12ರಂದು ವಿಶ್ವ ಸಂಧಿವಾತ ದಿನ ಆಚರಿಸಲಾಗುತ್ತದೆ. ಸಂಧಿವಾತ ಹಾಗೂ ಇತರ ಸಂಧಿ ಸಂಬಂಧಿತ ರೋಗಗಳ ಬಗ್ಗೆ ಸಾರ್ವಜನಿಕರು ಅರಿವು ಮೂಡಿಸಿಕೊಳ್ಳಬೇಕು. ತ್ವರಿತ ಪತ್ತೆ, ಸರಿಯಾದ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
World Arthritis Day ಸಂಧಿಗಳನ್ನು ಚುರುಕುಗೊಳಿಸುವ ಸರಳ ವ್ಯಾಯಾಮಗಳನ್ನು ಪ್ರಾತ್ಯಕ್ಷಿಕೆ ಮೂಲಕ ಡಾ. ರಾಮಚಂದ್ರ ಬಾದಾಮಿ ತೋರಿಸಿಕೊಟ್ಟರು. ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆ ಕಾರ್ಯದರ್ಶಿ ಡಾ. ಕೆ.ಎಸ್.ಶುಭ್ರತಾ, ಖಜಾಂಚಿ ಡಾ. ಶಶಿಧರ ಹೆಚ್ ಎಲ್, ಪರಿಹಾರ ಆಧಾರ ಆರೈಕೆ ಕೇಂದ್ರದ ಮುಖ್ಯಸ್ಥ ರಾಘವೇಂದ್ರ ಭಟ್, ಆರೈಕೆ ಕೇಂದ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು.
