Jagadguru Srividhusekhara Bharati ಜಗದ್ಗುರು ಶ್ರೀ ವಿಧುಶೇಖರ ಭಾರತಿಯವರು ಶರನ್ನವರಾತ್ರಿಯ ಉತ್ಸವದ ನಂತರ ಚಿಕ್ಕಮಗಳೂರಿಗೆ ಸಂಕ್ಷಿಪ್ತ ಧರ್ಮ ವಿಜಯ ಯಾತ್ರೆ ಬರಲಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಗುರುಭವನ ನಿರ್ಮಾಣ ಆಗಿದ್ದು ಶ್ರೀಗಳು ಅದನ್ನು ಉದ್ಘಾಟಿಸಲಿದ್ದಾರೆ. ನೂತನ ಗುರುಭವನದಲ್ಲೇ ಶ್ರೀ ಚಂದ್ರಮೌಳೀಶ್ವರ ಪೂಜೆ ನೆರವೇರಲಿದೆ. ತಾಲೂಕು ಕಛೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮಹಿಗಣಪತಿ ದೇವಸ್ಥಾನ ಕುಂಭಾಭಿಷೇಕ ಸಹ ಶ್ರೀಗಳು ನೆರವೇರಿಸಲಿದ್ದಾರೆ.
ಅಕ್ಟೋಬರ್ 12 ರಿಂದ ಡಿಸೆಂಬರ್ 3 ರ ತನಕ ಶ್ರೀಗಳು ಧರ್ಮ ವಿಜಯ ಯಾತ್ರೆಯಲ್ಲಿ ಕರ್ನಾಟಕ, ತೆಲಂಗಾಣ, ನೇಪಾಳ,ದೆಹಲಿ ಮುಂತಾದ ಕಡೆ ಸಂಚರಿಸಲಿದ್ದಾರೆ.
ಧರ್ಮಸ್ಥಳ,ಕಲ್ಲಡ್ಕ, ಗೋಕರ್ಣ,ಪಾಲಿಕೊಪ್ಪ ಯಾತ್ರೆಯ ನಂತರ ಅವರು ತೆಲಂಗಾಣ ಪ್ರವೇಶಿಸಲಿದ್ದಾರೆ.
ಶಂಶಾಬಾದ್, ಕೊಂಪೊಳ್ಳಿ, ಬಾಸರ, ವೇಮುಲವಾಡ ಮತ್ತು ಹೈದರಾಬಾದಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
Jagadguru Srividhusekhara Bharati ನವಂಬರ್ ನಾಲ್ಕರಂದು ಹೈದರಾಬಾದಿನಿಂದ ವಿಶೇಷ ವಿಮಾನದಲ್ಲಿ ನೇಪಾಳದ ಕಾಟ್ಮಂಡು ತಲುಪಲಿದ್ದಾರೆ. ಪಶುಪತಿನಾಥ ದೇವಾಲಯದಲ್ಲಿ ಅತಿ ರುದ್ರಯಾಗ ಸೇರಿದಂತೆ ಶ್ರೀಗಳ ಸಾನಿಧ್ಯದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ನವಂಬರ್ ಎಂಟರಂದು ಅವರು ನೇಪಾಳದಿಂದ ದೆಹಲಿ ತಲ್ಪಲಿದ್ದಾರೆ.
ದೆಹಲಿ,ವೃಂದಾವನ, ಮಥುರಾ ಭೇಟಿಯ ನಂತರ ಡಿಸೆಂ ಬರ್ 3 ರಂದು ಶೃಂಗೇರಿಗೆ ಮರುಪ್ರಯಾಣ ಮಾಡಲಿದ್ದಾರೆ. ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮೀಜಿಯವರು ನೇಪಾಳದ ಆಗಿನ ಮಹಾರಾಜರ ಆಹ್ವಾನದಂತೆ ನೇಪಾಳಕ್ಕೆ ಭೇಟಿ ನೀಡಿ ಪಶುಪತಿನಾಥನ ದರ್ಶನ ಮಾಡಿದ್ದರು. ಅವರ ಭೇಟಿಯ ಸಂಧರ್ಭ ಮಹಾರಾಜರು ಶಿಲಾ ಫಲಕ ದೇವಸ್ಥಾನದ ಆವರಣದಲ್ಲಿ ಸ್ಥಾಪಿಸಿದ್ದರು. ನೇಪಾಳದ ವಿಪ್ಲವ ಸನ್ನಿವೇಶದಲ್ಲಿ ಶೃಂಗೇರಿಯ ಜಗದ್ಗುರುಗಳು ಆ ದೇಶಕ್ಕೆ ಚಿತ್ತೈಸಿ ಪಶುಪತಿನಾಥನ ಪೂಜೆ ನೆರವೇರಿಸುವುದು ದೇಶ ಮತ್ತೆ ಶಾಂತ ಸ್ಥಿತಿಗೆ ಮರಳುವ ಸೂಜನೆ ಎಂದು ಅಲ್ಲಿನ ಜನ ನಂಬುತ್ತಾರೆ.
ಲೇಖನ ಕೃಪೆ: ಪ್ರಭಾಕರ ಕಾರಂತ.
