Dr. H. B. Manjunatha ಜೀವ ಜಗತ್ತಿನ ಹಾಗೂ ಬ್ರಹ್ಮಾಂಡದ ಅದೆಷ್ಟೋ ರಹಸ್ಯ ಸತ್ಯ ಗಳನ್ನು ವಿಜ್ಞಾನ ಎಳೆ ಎಳೆಯಾಗಿ ಬಿಡಿಸಿ ತೋರಿಸಿದರೂ ಅಲೌಕಿಕವಾದ ಅನೇಕ ಸತ್ಯಗಳನ್ನು ಅರಿಯಲು ಅಧ್ಯಾತ್ಮದಿಂದ ಮಾತ್ರ ಸಾಧ್ಯ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.
ದಾವಣಗೆರೆ ನಗರ ಸಮೀಪದ ಹೊಸಕೊಂದುವಾಡದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಏರ್ಪಾಡಾಗಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಧಾರ್ಮಿಕ ಉಪನ್ಯಾಸ ನೀಡುತ್ತಾ ಭಾರತದ ಸನಾತನ ಆಧ್ಯಾತ್ಮಿಕ ಧಾರ್ಮಿಕ ಪರಂಪರೆಯ ಸಾಮೂಹಿಕ ಆಚರಣೆಗಳು ‘ನಾನು’ ಎನ್ನುವ ಅಹಂ ಭಾವವಿಲ್ಲದೆ ‘ನಾವು’ ಎನ್ನುವ ಹೃದಯ ವೈಶಾಲ್ಯವನ್ನು ಎತ್ತಿ ಹಿಡಿಯುವುದಾಗಿವೆ.
ವಿಶ್ವದ ಎಲ್ಲ ಮತಗಳಿಗೂ ಬದುಕಿನ ಸಮಾನ ಅವಕಾಶ ಕೊಟ್ಟಿರುವ ಭಾರತದ ಔದಾರ್ಯತೆಯ ನಮ್ಮ ಸನಾತನ ಮೌಲ್ಯಗಳು ವಿಶ್ವದಲ್ಲಿ ಶ್ರೇಷ್ಠವಾಗಿದೆ ಎಂದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಹೆಬ್ಬಾಳಿನ ವಿರಕ್ತಮಠದ ಶ್ರೀ ಮಹಾಂತರುದ್ರೇಶ್ವರ ಮಹಾ ಸ್ವಾಮಿಗಳು ಸತ್ಯನಿಷ್ಠತೆಗೆ ಪ್ರೇರಣೆ ನೀಡುವುದೇ ಶ್ರೀ ಸತ್ಯನಾರಾಯಣ ಪೂಜೆ, ಹೃದಯ ಶ್ರೀಮಂತಿಕೆಯು ಆರ್ಥಿಕ ಶ್ರೀಮಂತಿಕೆಗಿಂತ ಶ್ರೇಷ್ಠ, ಮಾನವ ಕುಲ ಕೋಟಿಗೆ ಒಳಿತು ಮಾಡುವ ಸನಾತನ ಧರ್ಮ ಉಳಿಯಬೇಕು. ಹಿಂದೂ ಧರ್ಮವು ಭಾರತ ದೇಶದ ಮಹಾನ್ ವೃಕ್ಷ, ಅದರ ರೆಂಬೆಕೊಂಬೆ ಕತ್ತರಿಸುವ ಹುನ್ನಾರಕ್ಕೆ ಯಾರೂ ಅವಕಾಶ ಕೊಡಬಾರದು, ಧರ್ಮರಕ್ಷಣೆ ಅವಶ್ಯ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಟ್ರಸ್ಟಿನ ಜಿಲ್ಲಾ ನಿರ್ದೇಶಕ ಎಂ ಲಕ್ಷ್ಮಣ್ ದುಶ್ಚಟ ದುರಭ್ಯಾಸಗಳೇ ಕುಟುಂಬಗಳ ಅವನತಿಗೆ ಕಾರಣ, ಹಣ ಇಲ್ಲದವ ಬಡವನಲ್ಲ, ಗುರಿ ಇಲ್ಲದವ ಬಡವನಾಗುತ್ತಾನೆ, ಒಳ್ಳೆಯ ಗುರಿಗಳು ಈಡೇರಲು ಪೂಜೆ ಪುನಸ್ಕಾರಗಳು ಅವಶ್ಯ ಎಂದರು.
ಧರ್ಮಸ್ಥಳ ಟ್ರಸ್ಟ್ ವತಿಯಿಂದ ಅರ್ಹ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಮಂಜೂರಾತಿ ಪತ್ರ ವಿಸ್ತರಿಸಲಾಯಿತು. ಪೂಜಾ ಸಮಿತಿ ಅಧ್ಯಕ್ಷ ಶಿವಕುಮಾರ ಅರುಂಡಿ ಅಧ್ಯಕ್ಷೀಯ ನುಡಿಗಳನಾಡಿದರು.
Dr. H. B. Manjunatha ಶಿವಲೀಲಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಅನ್ನಪೂರ್ಣ ಹಾಡಿದರೆ ಸ್ವಾಗತವನ್ನು ನವೀನ್ ಕೋರಿದರು. ದಾವಣಗೆರೆ ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಅಣಬೇರು ಮಂಜಣ್ಣ, ಸದಸ್ಯರುಗಳಾದ ಹಾಲೇಶ್, ಜಯಪ್ರಕಾಶ್ ಮಾಗಿ, ಮುಖ್ಯೋಪಾಧ್ಯಾಯ ಸಿದ್ದಪ್ಪ, ಗ್ರಾಮದ ಮಹೇಶ್ವರಪ್ಪ, ಹನುಮಂತಪ್ಪ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಸಹಾಯ ಸಂಘದ ರೇಖಾ ಮಮತಾ ರೇಣುಕಾ ರಾಧಾ ಅಮೃತ ಪಾರ್ವತಿ ಮುಂತಾದವರು ಭಾಗವಹಿಸಿದ್ದು ತಿಮ್ಮಪ್ಪ ವಂದನೆ ಸಲ್ಲಿಸಿದರು.
