Bharat Scouts and Guides ಮಕ್ಕಳಿಗೆ ಮಾರ್ಗದರ್ಶನ ನೀಡುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರ ಸೇವೆ ಅನನ್ಯ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಸ್ಥಳೀಯ ಸಂಸ್ಥೆ ವತಿಯಿಂದ ಜಿಲ್ಲಾ ಸ್ಕೌಟ್ ಭವನದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣ ಮಾಡುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರು ಮಹತ್ತರ ಪಾತ್ರ ವಹಿಸುತ್ತಾರೆ. ಮಕ್ಕಳು ಉನ್ನತ ಸಾಧನೆ ಮಾಡುವಲ್ಲಿ ಪ್ರೋತ್ಸಾಹಿಸುತ್ತಾರೆ. ಅಂತಹ ಶಿಕ್ಷಕರ ಗುರುತಿಸಿ ಗೌರವಿಸುವುದು ಶ್ಲಾಘನೀಯ ಕಾರ್ಯ ಎಂದು ತಿಳಿಸಿದರು.
ಶ್ರೀ ಆದಿಚುಂಚನಗಿರಿ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಮತ್ತು ಸ್ಕೌಟ್ ಶಿಕ್ಷಕರಾಗಿ ಹಲವಾರು ವರ್ಷ ಸೇವೆ ಸಲ್ಲಿಸಿ ಇತ್ತೀಚಿಗೆ ನಿವೃತ್ತರಾದ ಎಸ್.ಎಂ.ವೀರಭದ್ರಗೌಡ ಅವರನ್ನು ಸನ್ಮಾನಿಸಲಾಯಿತು.
ವೀರಭದ್ರಗೌಡರು ದೈಹಿಕ ಶಿಕ್ಷಕರಾಗಿ ರಾಜ್ಯ, ರಾಷ್ಟ್ರ ಮಟ್ಟದ ವಾಲಿಬಾಲ್, ಖೋಖೋ, ಕಬಡ್ಡಿ ಮುಂತಾದ ಸ್ಪರ್ಧೆಗಳ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಶಾಲೆಯಲ್ಲಿ ಸ್ಕೌಟ್ ಮಕ್ಕಳಿಗೆ ಕವಾಯತು ತರಬೇತಿ, ಜಿಲ್ಲಾ ಪುರಸ್ಕಾರ ತರಬೇತಿ ನೀಡಿ ಮಕ್ಕಳ ಸರ್ವಾಂಗೀಣ ಬೆಳೆವಣಿಗೆಗೆ ಮಾರ್ಗದರ್ಶಕರಾಗಿದ್ದರು.
2024ರಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸ್ಕೌಟ್ ತಂಡಕ್ಕೆ ದ್ವಿತೀಯ ಸ್ಥಾನ ಬರುವಲ್ಲಿ ವೀರಭದ್ರಗೌಡ ಅವರ ಕೊಡುಗೆ ಅಪಾರವಾಗಿದೆ.
ನೂತನ ಜಿಲ್ಲಾ ಗೈಡ್ ಆಯುಕ್ತೆಯಾಗಿ ರಾಜ್ಯ ಸಂಸ್ಥೆ ವತಿಯಿಂದ ನಿಯುಕ್ತಿಗೊಂಡಿರುವ ಲಕ್ಷ್ಮೀ ರವಿ ಅವರನ್ನು ಅಭಿನಂದಿಸಲಾಯಿತು. ಹಿರಿಯ ಸ್ಕೌಟರ್ ವೈ.ಆರ್.ವೀರೇಶಪ್ಪ ಅಧ್ಯಕ್ಷತೆ ವಹಿಸಿದ್ದರು.
Bharat Scouts and Guides ಜಿಲ್ಲಾ ರೋವರ್ ಆಯುಕ್ತ ಕೆ.ರವಿ, ಜಿಲ್ಲಾ ಸ್ಕೌಟ್ ಆಯುಕ್ತ ಎಸ್.ಜಿ.ಆನಂದ್, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ, ಸಹಾಯಕ ಜಿಲ್ಲಾ ಆಯುಕ್ತ ಹೆಚ್.ಪರಮೇಶ್ವರ, ಶ್ರೀನಿವಾಸ್ ವರ್ಮಾ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಘನಶ್ಯಾಮ್ ಗಿರಿಮಾಜಿ, ಅಶ್ವಿನಿ ದೊರೈ, ದೊರೈ, ನಗರದ ವಿವಿಧ ಶಾಲಾ ಕಾಲೇಜಿನ ಶಿಕ್ಷಕ, ಶಿಕ್ಷಕಿಯರು, ಉಪನ್ಯಾಸಕರು, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ಅವಲಕ್ಕಿ, ಯುವ ಸಮಿತಿ ಸದಸ್ಯರು ಭಾಗವಹಿಸಿದ್ದರು.
