Friday, December 5, 2025
Friday, December 5, 2025

Om birla ಚರ್ಚೆಯೇ ಪ್ರಜಾಪ್ರಭುತ್ವದ ಜೀವಾಳ- ಲೋಕಸಭಾಧ್ಯಕ್ಷ ಓಂಬಿರ್ಲಾ

Date:

Ombirla ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮ ಭಾರತ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಭಾರತದಲ್ಲಿ ಚರ್ಚೆ ಎಂದರೆ ಒಡಕು ಅಲ್ಲ, ಬದಲಿಗೆ ಪ್ರಜಾಪ್ರಭುತ್ವದ ಚೈತನ್ಯ. ಚರ್ಚೆಯು ವಿಶ್ವಾಸವನ್ನು ಬೆಳೆಸುತ್ತದೆ ಮತ್ತು ವಿಶ್ವಾಸವು ಜನರ ಆಕಾಂಕ್ಷೆಗಳನ್ನು ಈಡೇರಿಸುತ್ತದೆ. ಚರ್ಚೆಯೇ ಪ್ರಜಾಪ್ರಭುತ್ವದ ಜೀವಾಳ ಎಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಅಭಿಪ್ರಾಯ ಪಟ್ಟರು.

ಇಂದು ಬೆಂಗಳೂರಿನ ಐತಿಹಾಸಿಕ ವಿಧಾನ ಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಇಂದು ಹಮ್ಮಿಕೊಳ್ಳಲಾಗಿದ್ದ 11ನೇ ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (CPA) ಭಾರತ ವಲಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರದ ಲೋಕಸಭೆ, ರಾಜ್ಯಸಭೆ ಸೇರಿದಂತೆ ರಾಜ್ಯ ವಿಧಾನ ಮಂಡಲಗಳ ಸಭೆಗಳಲ್ಲಿ ಗುಣಾತ್ಮಕ ಚರ್ಚೆಗಳು ಮತ್ತು ಆರೋಗ್ಯಕರ ವಿಮರ್ಶೆಗಳು ಜನರಲ್ಲಿ ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನು ಬಲಪಡಿಸುತ್ತವೆ ಎಂಬುದನ್ನು ಪ್ರತಿಯೊಬ್ಬ ಜನಪ್ರತಿನಿಧಿ ಗೌರವಿಸಬೇಕು ಎಂದು ಹೇಳಿದರು.

ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಸಹ ವಿಚಾರಗಳ ಭಿನ್ನತೆಯಲ್ಲಿ ಒಗ್ಗಟ್ಟು ಇರಬೇಕು, ರಾಷ್ಟ್ರ, ರಾಜ್ಯ ಮತ್ತು ಜನರಿಗಾಗಿ ಉತ್ತಮ ನೀತಿಗಳನ್ನು ರೂಪಿಸಲು ಒಗ್ಗಟ್ಟಿನಿಂದ ಜನ ಪ್ರತಿನಿಧಿಗಳು ಕೆಲಸ ಮಾಡಬೇಕೆಂದು ಅವರು ಕರೆ ನೀಡಿದರು.

ಸಂಸದೀಯ ಕಲಾಪಗಳಲ್ಲಿ ಆಗಾಗ್ಗೆ ಉಂಟಾಗುವ ಅಡೆತಡೆಗಳಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ. ಒಳ್ಳೆಯ ಚರ್ಚೆಯ ನಡುವಿನ ಸ್ಥಗಿತಗಳು ಮತ್ತು ಮುಂದೂಡಿಕೆಗಳು ಪ್ರಜಾಪ್ರಭುತ್ವಕ್ಕೆ ಹಾನಿಕಾರಕ ಎಂದು ಎಚ್ಚರಿಸಿದರು. ಈ ಕುರಿತಂತೆ ಎಲ್ಲಾ ಪಕ್ಷಗಳು ಚಿಂತಿಸಬೇಕೆಂದು ಸಲಹೆ ನೀಡಿದರು.

ಕಡಿಮೆಯಾಗುತ್ತಿರುವ ಸಂಸದೀಯ ಕಲಾಪಗಳ ಸಂಖ್ಯೆ ಮತ್ತು ಚರ್ಚೆಗೆ ಸೀಮಿತ ಸಮಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಜನರ ಆಕಾಂಕ್ಷೆಗಳನ್ನು ಈಡೇರಿಸಲು ಹೆಚ್ಚಿನ ಕಲಾಪಗಳು ಮತ್ತು ದೀರ್ಘ ಚರ್ಚೆಗಳು ಸೇರಿದಂತೆ ಕಲಾಪಗಳ ವಿಸ್ತರಣೆಯ ಅಗತ್ಯವಿದೆ ಎಂದರು.
ಕಲಾಪಗಳಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಸೇರಿದಂತೆ ಡಿಜಿಟಲ್ ಪಾರ್ಲಿಮೆಂಟ್ ಮೂಲಕ ವಿವಿಧ ಭಾಷೆಗಳ ಜನಪ್ರತಿನಿಧಿಗಳು ಚರ್ಚೆಯಲ್ಲಿ ಸುಗಮವಾಗಿ ಪಾಲ್ಗೊಳ್ಳಲು ಮತ್ತು ಪ್ರತಿಕ್ರಿಯಿಸಲು ಅನುವಾಗುವಂತೆ ತಾಂತ್ರಿಕ ಉಪಕ್ರಮಗಳ ಮೂಲಕ ಭಾರತದ ಸಂಸದೀಯ ಪ್ರಕ್ರಿಯೆಯನ್ನು ಕನ್ನಡ, ತಮಿಳು, ತೆಲುಗು, ಮರಾಠಿ, ಅಸ್ಸಾಮೀಸ್ ಸೇರಿದಂತೆ 22 ಭಾರತೀಯ ಭಾಷೆಗಳಲ್ಲಿ ಸಂಸದೀಯ ಕಾರ್ಯಕಲಾಪಗಳು ಲಭ್ಯವಿವೆ.

Ombirla ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ 180ಕ್ಕೂ ಹೆಚ್ಚು ಸಂಸತ್ತುಗಳು ಮತ್ತು ವಿಧಾನಸಭೆಗಳ ಒಕ್ಕೂಟವಾಗಿದ್ದು, ಭಾರತವು CPA ಯ 9ನೇ ವಲಯವನ್ನು ರೂಪಿಸಿದೆ, ಇದರಲ್ಲಿ 31 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಖೆಗಳಿವೆ. ತಾವು CPA ಭಾರತ ವಲಯದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಸಭೆಯ ಉಪಾಧ್ಯಕ್ಷರಾದ ಹರಿವಂಶ್ ನಾರಾಯಣ ಸಿಂಗ್ ಮಾತನಾಡಿ ಕರ್ನಾಟಕ ರಾಜ್ಯ ಸಾಂಸ್ಕೃತಿಕ ವೈಭವಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಕಾಫಿ, ಚಿನ್ನ ಹಾಗೂ ರೇಷ್ಮೆ ಸೀರೆಗೆ ವಿಶ್ವವಿಖ್ಯಾತಿ ಗಳಿಸಿವೆ. ವಚನಕಾರ ಬಸವಣ್ಣ, ರಾಣಿ ಚೆನ್ನಮ್ಮ, ಸರ್ ಎಂ ವಿಶ್ವೇಶ್ವರಯ್ಯನವರಂತಹ ಮಹಾನ್ ಚೇತನಗಳು ಕರ್ನಾಟಕದ ಹಿರಿಮೆ ಹೆಚ್ಚಿಸಿದ್ದಾರೆ .ಭೂಸುಧಾರಣೆಯಂತಹ ಜನಪರ ಕಾಯ್ದೆಯನ್ನು ಜಾರಿಗೆ ತಂದ ಶ್ರೇಯಸ್ಸು ಕರ್ನಾಟಕಕ್ಕೆ ಸಲ್ಲುತ್ತದೆ ಎಂದರು.

ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ತರಬೇಕಾದ ಜವಾಬ್ದಾರಿ ನಮ್ಮಗಳ ಮೇಲಿದೆ,ಈ ನಿಟ್ಟಿನಲ್ಲಿ ಕಾಲಕ್ಕೆ ತಕ್ಕಂತೆ ಹೊಸ ಹೊಸ ಕಾಯ್ದೆಗಳನ್ನು ನಾವು ಜಾರಿಗೆ ತರಬೇಕಾಗಿದೆ. ಸದನದಲ್ಲಿ ಈ ಕುರಿತು ಹೆಚ್ಚಿನ ಚರ್ಚೆ ನಡೆಸಬೇಕಿದೆ. ವಿಪರ್ಯಾಸವೆಂದರೆ ಸದನದ ಬಹುತೇಕ ಸಮಯ ಬೇರೆ ಬೇರೆ ಕಾರಣಗಳಿಗೆ ವ್ಯರ್ಥ ವಾಗುವುದನ್ನು ನಾವು ಕಾಣುತ್ತಿದ್ದೇವೆ. ರಾಜಕೀಯ ಭಿನ್ನಾಭಿಪ್ರಾಯಗಳೇನೆ ಇರಲಿ ನಾವು ಜನಪರವಾದ, ದೇಶದ ಅಭಿವೃದ್ಧಿ, ಐಕ್ಯತೆ ಕುರಿತಾದ ವಿಷಯಗಳು ಬಂದಾಗ ಅವೆಲ್ಲವನ್ನು ಮರೆತು ಸಮ್ಮತಿ ಸೂಚಿಸಬೇಕಾಗಿದೆ ಎಂದು ಹೇಳಿದರು.

ಸದನದಲ್ಲಿ ಆರೋಗ್ಯಕರ ಸಂವಾದ ನಡೆಯಬೇಕು.ಆ ಮೂಲಕ ಜನರ ನಂಬಿಕೆಗೆ ಚ್ಯುತಿ ಬಾರದಂತೆ ಶಾಸಕರ ನಡವಳಿಕೆ ಇರಬೇಕು. ಹಾಗಾಗಿ ಈ ಎರಡು ದಿನಗಳ ಕಾರ್ಯಾಗಾರ ಅತ್ಯಂತ ಮಹತ್ವಪೂರ್ಣದ್ದಾಗಿದೆ. ಇಂದು ಇಡೀ ಜಗತ್ತು ಭಾರತವನ್ನು ಅತ್ಯಂತ ಗೌರವದಿಂದ ಕಾಣುತ್ತಿದೆ .ಆದ್ದರಿಂದ ನಾವು ಹೆಚ್ಚು ಜವಾಬ್ದಾರಿ ಹಾಗೂ ಜಾಗರೂಕತೆಯಿಂದ ವರ್ತಿಸಬೇಕೆಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ 11ನೇ ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ಭಾರತ ಕ್ಷೇತ್ರೀಯ ಸಮ್ಮೇಳನಕ್ಕೆ ನಮ್ಮ ಬೆಂಗಳೂರಿಗೆ ಎಲ್ಲರನ್ನೂ ಸ್ವಾಗತಿಸಲು ನನಗೆ ಸಂತೋಷವಾಗಿದೆ. ಸಾಮರಸ್ಯದ ಸಂಪ್ರದಾಯಗಳು, ಪ್ರಜಾಪ್ರಭುತ್ವದ ಚೈತನ್ಯ ಮತ್ತು ರೋಮಾಂಚಕ ನಾಗರಿಕ ಸಂಸ್ಕೃತಿಯಿಂದ ಕೂಡಿದ ಕರ್ನಾಟಕ, ಈ ಶಾಸಕರ ಮತ್ತು ಚಿಂತಕರ ಸಮಾವೇಶವನ್ನು ಆಯೋಜಿಸುವ ಗೌರವಕ್ಕೆ ಪಾತ್ರವಾಗಿರುವುದು ಹೆಮ್ಮೆಯ ಜವಬ್ದಾರಿಯಾಗಿದೆ ಎಂದರು.

ನಾವು ಇಲ್ಲಿ ಕೇವಲ ಶಾಸಕಾಂಗದ ಪ್ರತಿನಿಧಿಗಳಾಗಿ ಮಾತ್ರವಲ್ಲ, ಪ್ರಜಾಪ್ರಭುತ್ವದ ಕಾವಲುಗಾರರಾಗಿ, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ನಾವೆಲ್ಲ ಇಂದು ಈ ಸಮ್ಮೇಳನದ ಹೆಸರಲ್ಲಿ ಒಟ್ಟಿಗೆ ಸೇರಿದ್ದೇವೆ. ಡಾ. ಬಿ. ಆರ್. ಅಂಬೇಡ್ಕರ್ರವರು ನೆನಪಿಸಿದಂತೆ, ಪ್ರಜಾಪ್ರಭುತ್ವವು ಭಾರತಕ್ಕೆ ಹೊಸದಾಗಿ ಆಮದು ಮಾಡಿಕೊಂಡ ಉಡುಗೊರೆಯಲ್ಲ, ಬದಲಿಗೆ ನಮ್ಮ ನಾಗರಿಕತೆಯ ಚೈತನ್ಯದಲ್ಲಿ ಆಳವಾಗಿ ಬೇರೂರಿರುವ ತತ್ವವಾಗಿದೆ ಎಂದರು.

ಆಧುನಿಕ ಸಂಸತ್ತುಗಳು ಸ್ಥಾಪನೆಯಾಗುವ ಮೊದಲೇ, ಭಾರತದಲ್ಲಿ ಚರ್ಚೆ ಮತ್ತು ಸಾಮೂಹಿಕ ನಿರ್ಧಾರ ಕೈಗೊಳ್ಳುವ ಸಂಪ್ರದಾಯಗಳಿದ್ದವು—ಬುದ್ಧನ ಕಾಲದಲ್ಲಿ ಜನರ ಸಭೆಗಳಿಗೆ ಚಾಲನೆ ನೀಡಲಾಯಿತು. ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಪ್ರಜಾಪ್ರಭುತ್ವದ ಚರ್ಚೆಯ ಚೈತನ್ಯವು ಅಭಿವ್ಯಕ್ತಿಯಾಯಿತು. ಇದು ನಿಜವಾದ “ಜನರ ಸಂಸತ್” ಆಗಿತ್ತು.

ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (CPA) ಕೇವಲ ಒಂದು ಸಂಸ್ಥೆಯಲ್ಲ, ಬದಲಿಗೆ ಆಲೋಚನೆಗಳು, ಮೌಲ್ಯಗಳು ಎತ್ತಿ ಹಿಡಿಯುವ ಸಂಸ್ಥೆಯಾಗಿದೆ. ಭೌಗೋಳಿಕತೆ ಮತ್ತು ಇತಿಹಾಸವನ್ನು ಮೀರಿ, ಸಂಸದೀಯ ಪ್ರಜಾಪ್ರಭುತ್ವ, ಕಾನೂನಿನ ಆಡಳಿತ ಮತ್ತು ಮಾನವ ಘನತೆಗೆ ನಮ್ಮ ಬದ್ಧತೆಯ ಮೂಲಕ ನಮ್ಮನ್ನು ಒಗ್ಗೂಡಿಸುತ್ತದೆ. ಈ ಸಮ್ಮೇಳನದ ಧ್ಯೇಯವಾಕ್ಯ “ಶಾಸಕಾಂಗದ ಸದನಗಳಲ್ಲಿ ಚರ್ಚೆ ಮತ್ತು ವಿಚಾರವಿನಿಮಯ: ಜನರ ವಿಶ್ವಾಸವನ್ನು ಗಟ್ಟಿಗೊಳಿಸುವುದು ಮತ್ತು ಜನರ ಆಕಾಂಕ್ಷೆಗಳನ್ನು ಪೂರೈಸುವುದು” ಎಂಬುದು ಸಕಾಲಿಕವಾಗಿದೆ ಎಂದರು.

ಪ್ರಜಾಪ್ರಭುತ್ವವು ಬಾಹ್ಯ ಶತ್ರುಗಳಿಂದ ಕಡಿಮೆ ಅಪಾಯದಲ್ಲಿದೆ, ಆದರೆ ಒಳಗಿನವರಿಂದ ಹೆಚ್ಚಿನ ಅಪಾಯದಲ್ಲಿದೆ-ಚರ್ಚೆಯನ್ನು ಸರ್ವಾಧಿಕಾರದಿಂದ ಬದಲಾಯಿಸಿದಾಗ, ಸಂವಾದವು ಏಕಮುಖವಾದಾಗ ಮತ್ತು ಶಾಸಕಾಂಗಗಳು ಸಾಮಾನ್ಯ ಒಳಿತಿನ ಕ್ಷೇತ್ರವಾಗಿರದೆ ಪಕ್ಷಪಾತದ ಉಪಕರಣವಾಗಿ ಮಾರ್ಪಾಡಾಗುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಾಮಾಜಿಕ ಡಾರ್ವಿನ್ ವಾದದ ಅಪಾಯಕಾರಿ ಪ್ರವೃತ್ತಿ-ಕೇವಲ ಬಲಿಷ್ಠರೇ ಉಳಿಯಲು ಅರ್ಹರೆಂಬ ನಂಬಿಕೆಯು ಪ್ರಜಾಪ್ರಭುತ್ವದ ಸಮಾನತೆಯ ಭರವಸೆಯನ್ನು ಕ್ಷೀಣಿಸುತ್ತದೆ. ನಿಜವಾದ ಗಣರಾಜ್ಯವು ಬಲಿಷ್ಠರನ್ನು ಸಶಕ್ತಗೊಳಿಸುವ ರೀತಿಯಿಂದ ಅಲ್ಲ, ಬದಲಿಗೆ ದುರ್ಬಲರನ್ನು ಉನ್ನತಿಗೊಳಿಸುವ ರೀತಿಯಿಂದ ತೀರ್ಮಾನವಾಗುತ್ತದೆ.

ಕರ್ನಾಟಕದ ಮುಖ್ಯಮಂತ್ರಿಯಾಗಿ, ನಮ್ಮ ರಾಜ್ಯವು ಈ ಪ್ರಜಾಪ್ರಭುತ್ವದ ಚೈತನ್ಯವನ್ನು ಸಾಕಾರಗೊಳಿಸಿದೆ ಎಂದು ಹೇಳಲು ನನಗೆ ಹೆಮ್ಮೆಯಿದೆ. ಬಸವಣ್ಣನವರ ನೇತೃತ್ವದ ವಚನ ಚಳವಳಿಯಿಂದ ಸಮಾನತೆಯನ್ನು ಒತ್ತಾಯಿಸಿದ ದಿನಗಳಿಂದ, ಆಧುನಿಕ ಕರ್ನಾಟಕದ ಪ್ರಗತಿಪರ ಸುಧಾರಣೆಗಳವರೆಗೆ, ನಮ್ಮ ಸಮಾಜವು ಮುಕ್ತ ಸಂವಾದ ಮತ್ತು ನ್ಯಾಯವನ್ನು ಮೌಲ್ಯೀಕರಿಸಿದೆ.

ನಮ್ಮ ವಿಧಾನಸಭೆಯು ಸಾಮಾಜಿಕ ನ್ಯಾಯ, ಭಾಷಾಂಗ ಗುರುತು, ಅಥವಾ ಆರ್ಥಿಕ ಒಕ್ಕೂಟದ ಬಗ್ಗೆ ಐತಿಹಾಸಿಕ ಚರ್ಚೆಗಳಿಗೆ ವೇದಿಕೆಯಾಗಿದೆ. ನಾವು ಅಭಿವೃದ್ಧಿಯೊಂದಿಗೆ ಸಮಾನತೆಯನ್ನು, ಬೆಳವಣಿಗೆಯೊಂದಿಗೆ ಸುಸ್ಥಿರತೆಯನ್ನು ಮತ್ತು ಸಂಪ್ರದಾಯದೊಂದಿಗೆ ನಾವೀನ್ಯತೆಯನ್ನು ಸಮತೋಲನಗೊಳಿಸಲು ಶ್ರಮಿಸಿದ್ದೇವೆ.

ಈ ವೇದಿಕೆಯು ನಾಗರಿಕರು ಮತ್ತು ಅವರ ಪ್ರತಿನಿಧಿಗಳ ನಡುವಿನ ವಿಶ್ವಾಸವನ್ನು ಬಲಪಡಿಸುವ ಅಭ್ಯಾಸವನ್ನು ಉತ್ತೇಜಿಸಲಿ, ಜವಾಹರಲಾಲ್ ನೆಹರೂರವರ ಮಾತಿನಂತೆ, ಪ್ರಜಾಪ್ರಭುತ್ವವು “ಕೇವಲ ಆಡಳಿತದ ರೂಪವಲ್ಲ, ಜೀವನ ವಿಧಾನ”ವಾಗಿ ಮುಂದುವರಿಯಲಿ.

ಕರ್ನಾಟಕಕ್ಕೆ ಈ ಜವಾಬ್ದಾರಿಯನ್ನು ವಹಿಸಿಕೊಟ್ಟ ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ಈ ಸಮ್ಮೇಳನಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಕರ್ನಾಟಕ ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಅವರು ಕಾರ್ಯಕ್ರಮದ ಆರಂಭದಲ್ಲಿ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿ ಈ ಸಮ್ಮೇಳನವು ಸಂಸದರು, ಶಾಸಕಾಂಗ ನಾಯಕರು ಮತ್ತು ತಜ್ಞರನ್ನು ಒಗ್ಗೂಡಿಸುವ ವೇದಿಕೆಯಾಗಿದ್ದು, ಆಲೋಚನೆಗಳ ಹಂಚಿಕೆ, ಕಲಿಕೆ ಮತ್ತು ಆಡಳಿತದ ಉತ್ತಮ ಅಭ್ಯಾಸಗಳ ಚರ್ಚೆಗೆ ಅವಕಾಶ ನೀಡುತ್ತದೆ ಎಂದರು.

ಸಂಸದೀಯ ವ್ಯವಸ್ಥೆಯು ಜನಪ್ರಭುತ್ವದ ಅಡಿಪಾಯವಾಗಿದ್ದು, ಉತ್ತಮ ಆಡಳಿತವು ಜನರ ಕನಸುಗಳನ್ನು ಪ್ರತಿಬಿಂಬಿಸುತ್ತದೆ. ಈ ಸಮ್ಮೇಳನವು ಸಂಸದೀಯ ವ್ಯವಸ್ಥೆಯನ್ನು ಬಲಪಡಿಸುವುದು, ಸಂಸದರ ಕೌಶಲ್ಯಗಳನ್ನು ಹೆಚ್ಚಿಸುವುದು ಮತ್ತು ಪ್ರಜಾಪ್ರಭುತ್ವವನ್ನು ಹೆಚ್ಚು ಭಾಗವಹಿಸುವಂತೆ, ಜವಾಬ್ದಾರಿಯುತವಾಗಿ ಮಾಡುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.

ಕರ್ನಾಟಕ ವಿಧಾನಸಭೆಯ ಇತ್ತೀಚಿನ ಅಧಿವೇಶನದಲ್ಲಿ 39 ಬಿಲ್ಗಳಲ್ಲಿ 37 ಅಂಗೀಕರಿಸಲ್ಪಟ್ಟವು, ಇನ್ನೂಳಿದ 2 ಬಿಲ್ಗಳನ್ನು ಉಪ ಸಮಿತಿಗೆ ಕಳುಹಿಸಲ್ಪಟ್ಟವು; ಇದು ಸರಕಾರ ಮತ್ತು ವಿರೋಧ ಪಕ್ಷಗಳ ಸಹಕಾರದಿಂದ ಸಾಧ್ಯವಾಗಿದೆ ಎಂದು ಸ್ಮರಿಸಿದ ಅವರು, ಈ ಸಮ್ಮೇಳನದಲ್ಲಿ ಮುಖ್ಯವಾಗಿ “ವಿಧಾನಮಂಡಲಗಳಲ್ಲಿ ಚರ್ಚೆಗಳು: ಜನರ ವಿಶ್ವಾಸ ನಿರ್ಮಾಣ, ಆಕಾಂಕ್ಷೆಗಳ ಈಡೇರಿಕೆ”. ವಿಷಯದ ಮೇಲೆ ಚರ್ಚಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಸಮ್ಮೇಳನಕ್ಕೆ ಆಗಮಿಸಿರುವ ಅತಿಥಿಗಳಿಗೆ ಮೈಸೂರು ಪ್ರವಾಸ ಸೇರಿದಂತೆ ರಾಜ್ಯವನ್ನು ಪರಿಚಯಿಸುವ ವಿವಿಧ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾತನಾಡಿ ತಾವು ಬಸವೇಶ್ವರರ ಅನುಭವ ಮಂಟಪದಿಂದ ಪ್ರೇರಿಪಿತನಾಗಿ ಕರ್ನಾಟಕ ಶಾಸಕಾಂಗದಲ್ಲಿ ನಿರಂತರವಾಗಿ ಒಂದೇ ಕ್ಷೇತ್ರದಿಂದ ಕಳೆದ 45 ವರ್ಷಗಳಿಂದ ಆಯ್ಕೆಯಾಗಿ ಸೇವೆ ಒಬ್ಬ ಜವಬ್ದಾರಿಯುತ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರುವುದನ್ನು ಹಾಗೂ ಹಲವು ದಾಖಲೆಗಳಲ್ಲಿ ತಮ್ಮ ಹೆಸರು ಸೇರಿರುವುದನ್ನು ಸ್ಮರಿಸುತ್ತಾ ಸಭಾಪತಿಯಾಗಿ 3ನೇ ಬಾರಿ ಮತ್ತು ಒಬ್ಬ ಹಿರಿಯ ಸಂಸದೀಯ ಪಟುವಾಗಿ ಅಧಿವೇಶನದ ಸಂದರ್ಭದಲ್ಲಿ ಯುವ ಜನಪ್ರತಿನಿಧಿಗಳಿಗೆ ಮಾತನಾಡಲು ಹೆಚ್ಚಿನ ಅವಕಾಶ ನೀಡಿರುವುದು ಸಂತೃಪ್ತಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಸ್ತುತ ಸಮ್ಮೇಳನ ಸಂವಿಧಾನಾತ್ಮಕ, ಶಾಸನಾತ್ಮಕ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳೊಂದಿಗೆ ಸಂಸದೀಯ ಪ್ರಜಾಪ್ರಭುತ್ವವನ್ನು ಉತ್ತೇಜಿಸುವ ಉದ್ದೇಶದಿಂದ ರೂಪುಗೊಂಡಿದೆ. 1911ರಲ್ಲಿ ಸ್ಥಾಪಿತವಾದ ಇದು ಕಾಮನ್ವೆಲ್ತ್ನ ಅತ್ಯಂತ ಹಳೆಯ ಸಂಸ್ಥೆಯಾಗಿದ್ದು, ಸ್ವಯಂಪ್ರೇರಿತ ರಾಷ್ಟ್ರಗಳ ಸಂಘವಾಗಿದೆ. ಇದು ಲಿಂಗ, ಜಾತಿ, ಧರ್ಮ ಅಥವಾ ಸಂಸ್ಕೃತಿಯನ್ನು ಮೀರಿ ಕಾನೂನಿನ ಆಡಳಿತ, ವೈಯಕ್ತಿಕ ಹಕ್ಕುಗಳು ಮತ್ತು ಸಂಸದೀಯ ಪ್ರಜಾಪ್ರಭುತ್ವದ ಸಕಾರಾತ್ಮಕ ಆದರ್ಶಗಳನ್ನು ಉತ್ತೇಜಿಸುತ್ತದೆ ಎಂದರು.

ಸಂವಿಧಾನಾತ್ಮಕ ಮೌಲ್ಯಗಳನ್ನು ಎತ್ತಿಹಿಡಿದು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ. ಜನಪ್ರತಿನಿಧಿಗಳು ಸಭೆಯ ಒಳಗೆ ಮತ್ತು ಹೊರಗೆ ಮಾದರಿಯಾಗಿ ನಡೆದುಕೊಂಡು ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿರ್ವಹಿಸಬೇಕು. ಅದಿವೇಶನ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸಿ ಸದ್ಬಳಕೆ ಮಾಡಿಕೊಳ್ಳಬೇಕು. ಎಂದು ಸಲಹೆ ನೀಡಿದರು.

ಸಂಸತ್ ಅಥವಾ ರಾಜ್ಯ ಸಂಸದೀಯ ಸಭೆಗಳು ಪ್ರಜಾಪ್ರಭುತ್ವದ ಮುಖ್ಯ ಸಂಸ್ಥೆಗಳಾಗಿದ್ದು, ರಾಜಕೀಯ ಚರ್ಚೆ, ವಿಚಾರವಿನಿಮಯ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಮುಖ್ಯ ವೇದಿಕೆಗಳು. ಇವು ಸರ್ಕಾರದ ಯಂತ್ರವನ್ನು ಮಾರ್ಗದರ್ಶಿಸುತ್ತವೆ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಮಾರ್ಗವನ್ನು ರೂಪಿಸುತ್ತವೆ ಎಂದು ಹೇಳಿದರು.

ಆಗಸ್ಟ್ 2025ರಲ್ಲಿ ರಾಹುಲ್ ವಿ. ಕರದ್ ನೇತೃತ್ವದಲ್ಲಿ 130 ಭಾರತೀಯ ಸಂಸದರು ಮತ್ತು ಶಾಸಕರು ಅಮೇರಿಕಾದ ಬೋಸ್ಟನ್ನಲ್ಲಿ ನಡೆದ 50ನೇ ನ್ಯಾಷನಲ್ ಕಾನ್ಫರೆನ್ಸ್ ಆಫ್ ಸ್ಟೇಟ್ ಲೆಜಿಸ್ಲೇಚರ್ (ಎನ್ಸಿಎಸ್ಎಲ್)ಗೆ ಭೇಟಿ ನೀಡಿದರು. ಅಲ್ಲಿ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಳು ಹಾಗೂ ನಾಗರಿಕ ಕೇಂದ್ರಿತ ಸೇವೆಗಳನ್ನು ಅಧ್ಯಯನ ಮಾಡಿದರು. ಇದರ ಆಧಾರದಲ್ಲಿ ಭಾರತದಲ್ಲಿ ಸೂಕ್ತ ಶಾಸನಗಳನ್ನು ರೂಪಿಸಿ ಸರ್ಕಾರದ ಯಂತ್ರವನ್ನು ಮಾರ್ಗದರ್ಶಿಸಲು ಸಮ್ಮೇಳನದಲ್ಲಿ ಚರ್ಚೆಗಳನ್ನು ಹಮ್ಮಿಕೊಳ್ಳಬೇಕು ಎಂದು ಶಿಫಾರಸು ಮಾಡಿದರು.

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾತನಾಡಿ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಎಲ್ಲರಿಗೂ ಶುಭ ಹಾರೈಸಿ ಸಮ್ಮೇಳನ ಹಮ್ಮಿಕೊಂಡಿರುವ ಗುರಿಯೊಂದಿಗೆ ಯಶಸ್ವಿಯಾಗಲಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಮ್ಮೇಳನದ ಅಂಗವಾಗಿ ಅಂಚೆ ಇಲಾಖೆವತಿಯಿಂದ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು ಮತ್ತು ಅತಿಥಿಗಳನ್ನು ಕರ್ನಾಟಕದ ಪರಂಪರೆಯಂತೆ ಮೈಸೂರು ಪೇಟ ಮತ್ತು ಗಂಧದ ಹಾರ ಮತ್ತು ರೇಷ್ಮೆ ಶಾಲುಗಳಿಂದ ಸನ್ಮಾನಿಸಲಾಯಿತು.
ಸಮ್ಮೇಳನವು ಇಂದಿನಿಂದ ಮೂರು ದಿನಗಳ ಕಾಲ ಸೆ 13 ರ ವರೆಗೆ ನಗರದ ಖಾಸಗಿ ಹೊಟೇಲ್ ನಲ್ಲಿ ನಡೆಯಲಿದ್ದು, ದೇಶ-ವಿದೇಶಗಳ ಸಭಾಧ್ಯಕ್ಷರು ಮತ್ತು ಸಭಾಪತಿಗಳು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...