Rotary Club Shivamogga ಗ್ರಾಮೀಣ ನೆಲದ ಮೂಲ ಸಂಸ್ಕೃತಿಯಾದ ಜನಪದ ಕಲೆ ಮತ್ತು ಕ್ರೀಡೆಗಳ ಉಳಿವಿಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್.ಇ. ಜ್ಞಾನೇಶ್ ಹೇಳಿದರು.
ಶಿವಮೊಗ್ಗ ಪಟ್ಟಣದ ಮುರುಘಾಮಠದ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್, ರೋಟರಿ ಕ್ಲಬ್ ಮತ್ತು ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆ ವತಿಯಿಂದ ಶ್ರೀ ಕೃಷ್ಣಜನ್ಮಾಷ್ಟಮಿ ಹಾಗೂ ಗೌರಿ ಗಣೇಶ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಪೆಟ್ಲು ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಕ್ರೀಡೆಗಳು ಸಾಂಪ್ರದಾಯಿಕ ಜೀವನದ ಅವಿಭಾಜ್ಯ ಅಂಗವಾಗಿದ್ದು, ಆಧುನಿಕತೆಯ ಪ್ರಭಾವದಲ್ಲಿ ಮಲೆನಾಡಿನ ಅಪ್ಪಟ್ಟ ಗ್ರಾಮೀಣ ಕ್ರೀಡೆ ಪೆಟ್ಲು ಕಣ್ಮರೆಯಾಗುತ್ತಿದೆ. ಇದನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ನಾಡಿನ ಸಾಂಸ್ಕೃತಿಕ ಪರಂಪರೆಯ ರಕ್ಷಣೆಗೆ ಪ್ರತಿಯೊಬ್ಬರು ಕಟಿಬದ್ಧರಾಗಿರಬೇಕು ಎಂದ ಅವರು, ಒಂದು ಕಾಲದಲ್ಲಿ ಜುಮ್ಮನಕಾಯಿ, ಪೆಟ್ಲುಕಾಯಿ ಎನ್ನುವ ವಿವಿಧ ಸಣ್ಣ ಕಾಯಿಗಳನ್ನು ಬಳಸಿ ಪಟ್ ಎಂದು ಬಂದೂಕಿನಂತೆ ಹೊಡೆಯುವಂತೆ ಪೆಟ್ಲು ಮೂಲಕ ಹೊಡೆಯುತ್ತಾ ಸಡಗರದಿಂದ ಗ್ರಾಮದ ತುಂಬಾ ಓಡಾಡುವುದೇ ಒಂದು ಆನಂದಮಯವಾಗಿತ್ತು ಎಂದು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.
ಸಾನ್ನಿಧ್ಯ ವಹಿಸಿದ್ದ ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರುಘಾಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಮಾತನಾಡಿ, ಹಬ್ಬ ಹರಿದಿನಗಳು ಅನೇಕ ವೈಶಿಷ್ಟತೆಗಳನ್ನು ಹೊಂದಿವೆ. ಪ್ರಸ್ತುತ ಕಾಲಘಟ್ಟದಲ್ಲಿ ಯುವಜನತೆ ಸೇರಿದಂತೆ ಮಕ್ಕಳು ಸಹ ಮೊಬೈಲ್ ಗೀಳು ಬೆಳೆಸಿಕೊಂಡಿದ್ದಾರೆ. ಅದರಿಂದ ಹೊರಬಂದು ಗ್ರಾಮೀಣ ಕ್ರೀಡೆಗಳಲ್ಲಿ ತೊಡಗಿಕೊಳ್ಳಬೇಕು. ಇದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಗ್ರಾಮೀಣ ಪ್ರದೇಶದ ಕ್ರೀಡೆಗಳನ್ನು ಉಳಿಸುವ ನಿಟ್ಟಿನಲ್ಲಿ ಕಸಾಪ ಮತ್ತು ರೋಟರಿ ಕ್ಲಬ್ ಹಾಗೂ ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಯವರು ಉತ್ತಮ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
Rotary Club Shivamogga ರೋಟರಿ ಕ್ಲಬ್ ಅಧ್ಯಕ್ಷ ಮಹಾಂತೇಶ್ ಬಹುಮಾನ ವಿತರಿಸಿದರು. ಕಸಾಪ ತಾಲೂಕು ಅಧ್ಯಕ್ಷ ಎನ್. ಷಣ್ಮುಖಾಚಾರ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ನಾಮನಿರ್ದೇಶನ ಸದಸ್ಯ ಪರಶುರಾಮ ಸಣ್ಣಬೈಲ್, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ನಾಗರಾಜ ಗುತ್ತಿ, ಕಾರ್ಯದರ್ಶಿ ಕೃಷ್ಣಪ್ಪ ಓಟೂರು, ತಾಲೂಕು ಸುಗಮ ಸಂಗೀತ ಪರಿಷತ್ ಅಧ್ಯಕ್ಷ ಎಚ್. ಗುರುಮೂರ್ತಿ, ಪರಿಸರ ಜಾಗೃತಿ ಟ್ರಸ್ಟ್ ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಯ ಎಸ್.ಆರ್. ಮಧುರಾಮ್, ಕಸಾಪ ಕೋಶಾಧ್ಯಕ್ಷ ಮೋಹನ್ ಸುರಭಿ, ಗೌರವ ಕಾರ್ಯದರ್ಶಿ ಲಿಂಗರಾಜ ಗೌಡ, ರೇವಣಪ್ಪ ಬಿದರಗೇರಿ, ಮಾಲತೇಶ ಮಾಸ್ತರ್, ಡಿ. ಶಿವಯೋಗಿ, ರೂಪಾ ಮಧುಕೇಶ್ವರ್, ವಾಸಂತಿ ನಾವುಡಾ, ವಿನಯ ಪ್ರಶಾಂತ್, ಭಾರತಿ ಭಂಡಾರಿ, ಸೇರಿದಂತೆ ಇತರರಿದ್ದರು.
