Friday, December 5, 2025
Friday, December 5, 2025

Klive Special Article ಪರಮ ಭಾಗವತರು ಶ್ರೀಜಗನ್ನಾಥದಾಸರು

Date:

ಲೇ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ

Klive Special Article ” ಹರಿಕಥಾಮೃತಸಾರ ಗುರುಗಳ/
ಕರುಣದಿಂದಾಪನಿತು ಪೇಳುವೆ/
ಪರಮಭಗವದ್ಭಕ್ತರಿದನಾದರದಿ
ಕೇಳುವುದು//
ಇದು ಶ್ರೀಜಗನ್ನಾಥದಾಸರು ರಚಿಸಿರುವ
“ಹರಿಕಥಾಮೃತಸಾರ”ಗ್ರಂಥದಲ್ಲಿರುವ
ಪದ್ಯದ ಸಾಲುಗಳು.
ಜಗನ್ನಾಥ ದಾಸರೆಂದರೆ ಮನಃಪಟಲದಲ್ಲಿ ಅಲೆಅಲೆಯಾಗಿ ತೇಲಿಬರುವುದು “ಶ್ರೀಹರಿ
ಕಥಾಮೃತಸಾರ”ದ ಪದ್ಯದ ಸಾಲುಗಳು. ಶ್ರೀಹರಿಕಥಾಮೃತಸಾರ ಮಧ್ವ ಸಿದ್ಧಾಂತ
ಕ್ಕೊಂದು ವಿದ್ವತ್ಪೂರ್ಣ ಕೈಗನ್ನಡಿ.ಇದರಲ್ಲಿ ಶ್ರೀಹರಿಯ ಅನಂತ ಕಲ್ಯಾಣಗುಣ ಪರಿಪೂರ್ಣತ್ವ,ಮೋಕ್ಷಸಾಧನೆಯ ವಿವರಗಳು.ಭಕ್ತಿಯ ಮಹತ್ವ,ಉಪಾಸನೆಯ ರೀತಿ ಮೊದಲಾದ ಪ್ರಮುಖ ತತ್ವಗಳನ್ನೆಲ್ಲಾ ಕಾವ್ಯಮಯವಾಗಿ ವಿವೇಚಿಸಲಾಗಿದೆ.
ಸಂಸ್ಕೃತದಲ್ಲಿರುವ ಈ ಸಿದ್ಧಾಂತಗಳನ್ನು ಕನ್ನಡಕ್ಕೆ ತರುವಲ್ಲಿ ಜಗನ್ನಾಥದಾಸರು ಅದ್ಭುತ ಕೌಶಲವನ್ನು ಮೆರೆದಿದ್ದಾರೆ.ಶ್ರೀಜಗನ್ನಾಥದಾಸರು 32 ಸಂಧಿಗಳುಳ್ಳ ಶ್ರೀಹರಿಕಥಾಮೃತಸಾರವನ್ನು
ಭಾಮಿನಿ ಷಟ್ಪದಿಯಲ್ಲಿ ರಚಿಸಿದ್ದಾರೆ.
ಇವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ಮಾನವಿ ಊರಿಗೆ ಹತ್ತಿರವಿರುವ ಬ್ಯಾಗವಟ್ಟಿ
ಎಂಬ ಸಣ್ಣ ಗ್ರಾಮದಲ್ಲಿ.
ಇವರು ತಿರುಪತಿ ತಿಮ್ಮಪ್ಪನ ಅನುಗ್ರಹದಿಂದ ಹುಟ್ಟಿದ್ದರಿಂದ ಶ್ರೀನಿವಾಸ ಎಂದು ಅವರ ತಂದೆತಾಯಿಗಳು ನಾಮಕರಣ ಮಾಡಿದರು.
ವೇದಾಭ್ಯಾಸವನ್ನು ಮಂತ್ರಾಲಯದ ಅಂದಿನ ಪೀಠಾಧಿಕಾರಿಗಳಾಗಿದ್ದ ಶ್ರೀವರದೇಂದ್ರತೀರ್ಥ
ಶ್ರೀಪಾದಂಗಳವರಲ್ಲಿ ಮಾಡಿದರು. ಶ್ರೀನಿವಾಸನ ವೇದಾಭ್ಯಾಸ ಮುಗಿದು ಶ್ರೀವರದೇಂದ್ರತೀರ್ಥ ಗುರುಗಳ ಆಶೀರ್ವಾದ ಪಡೆದು ಮಾನವಿಗೆ ಹಿಂತಿರುಗಿ ಗೃಹಸ್ಥಾಶ್ರಮಿಗಳಾಗಿ ಮನೆಯಲ್ಲೇ ಗುರುಕುಲವನ್ನು ಪ್ರಾರಂಭಮಾಡುತ್ತಾರೆ.
ಹೀಗಿರುವಾಗ ಒಂದು ದಿವಸ ಶ್ರೀವಿಜಯದಾಸರು ಸಂಚಾರಮಾಡುತ್ತಾ ಮಾನವಿಗೆ ಬರುತ್ತಾರೆ.
ವಿಜಯದಾಸರು ಯಾವ ಊರಿಗೇ ಬರಲಿ, ಅಲ್ಲಿ ತಂಗಿರುವಾಗ ಆ ಊರಿನ ಪಂಡಿತರು, ಬ್ರಾಹ್ಮಣರು,ವಿದ್ವಾಂಸರುಗಳನ್ನು ತಮ್ಮೊಡನೆ
ಭೋಜನಕ್ಕೆ ಆಹ್ವಾನಿಸುವ ಪದ್ಧತಿಯನ್ನಿಟ್ಟು ಕೊಂಡಿದ್ದರು.ಅದೇ ರೀತಿ ಅವರು ಶ್ರೀನಿವಾಸಾ
ಚಾರ್ಯರಿಗೂ ತಾವು ತಂಗಿದ್ದಪ್ರಾಣದೇವರ ದೇವಸ್ಥಾನಕ್ಕೆ ಭೋಜನಕ್ಕೆ ಬರುವಂತೆ ಆಹ್ವಾನಿಸುತ್ತಾರೆ.
ಶ್ರೀನಿವಾಸಾಚಾರ್ಯರು ವಿಜಯದಾಸರ ಆಹ್ವಾನವನ್ನು ತಿರಸ್ಕರಿಸಿ ತಮಗೆ ಉದರಶೂಲೆ ಬಂದಿರುವುದರಿಂದ ಭೋಜನಕ್ಕೆಬರುವುದಿಲ್ಲವೆಂತ ಹೇಳಿಕಳಿಸುತ್ತಾರೆ.ಇದನ್ನು ಕೇಳಿದ ವಿಜಯದಾಸರು ಹರಿಚಿತ್ತ ಎಂದು ಕೊಳ್ಳುತ್ತಾರೆ.
ಶ್ರೀನಿವಾಸಾಚಾರ್ಯರು ಸುಳ್ಳು ಹೇಳಿ ವಿಜಯದಾಸರ ಆಹ್ವಾನವನ್ನು ತಿರಸ್ಕರಿಸಿದ್ದರಿಂದ ಅವರಿಗೆ ನಿಜವಾಗಿಯೂ ಉದರಶೂಲೆ ಪ್ರಾರಂಭವಾಗುತ್ತದೆ.
Klive Special Article ದಿನೇ ದಿನೇ ಉದರಶೂಲೆ ಹೆಚ್ಚಾಗುತ್ತಾ ಹೋಗಿ ಯಾವ ಔಷಧೋಪಚಾರದಿಂದಲೂ
ಗುಣಕಾಣುವುದಿಲ್ಲ. ವ್ಯಾಧಿ ಪರಿಹಾರಕ್ಕಾಗಿ ಪ್ರಾಣದೇವರ ಸೇವೆ ಮಾಡುತ್ತಾರೆ. ಪ್ರಾಣದೇವರು ಮಂತ್ರಾಲಯ ದೊರೆಗಳ ಮೊರೆ ಹೋಗುವಂತೆ ಸೂಚಿಸುತ್ತಾರೆ.
ಮಂತ್ರಾಲಯಕ್ಕೆ ಬಂದು ಶ್ರೀರಾಯರ ಸೇವೆಯನ್ನು ಮಾಡುತ್ತಾರೆ.
ಶ್ರೀನಿವಾಸಾಚಾರ್ಯರು ಶ್ರೀರಾಯರ ಪ್ರಹ್ಲಾದಾವತಾರದಲ್ಲಿ ಅವರ ಅನುಜ ಸಹ್ಲಾದರ ಅವತಾರವೆಂದುಜ್ಞಾನಿಗಳುಹೇಳುತ್ತಾರೆ.
ಶ್ರೀರಾಯರುಅವರಿಗೆವ್ಯಾಧಿಉಲ್ಬಣವಾಗಿರುವುದು ಇವರು ವಿಜಯದಾಸರ ಆಹ್ವಾನವನ್ನು ತಿರಸ್ಕರಿಸಿದ್ದರಿಂದ ಮತ್ತು ಇದರ ಪರಿಹಾರಕ್ಕೆ ವಿಜಯದಾಸರ ಹತ್ತಿರವೇ ಹೋಗಲು ಸ್ವಪ್ನದಲ್ಲಿ ತಿಳಿಸುತ್ತಾರೆ. ತಿರುಪತಿಯಲ್ಲಿದ್ದ ವಿಜಯದಾಸರ ಹತ್ತಿರ
ವ್ಯಾಧಿಯಿಂದ ಕೃಶರಾಗಿದ್ದ ಶ್ರೀನಿವಾಸಾಚಾರ್ಯರು ಬರುತ್ತಾರೆ.ಅಪರೋಕ್ಷ ಜ್ಞಾನಿಗಳಾದ ವಿಜಯದಾಸರಿಗೆ ಎಲ್ಲವೂ ತಿಳಿದಿರುತ್ತದೆ.
ಶ್ರೀನಿವಾಸಾಚಾರ್ಯರು ವಿಜಯದಾಸರನ್ನು ನೋಡಿದವರೇ ಅವರ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ತಮ್ಮ ತಪ್ಪನ್ನುಕ್ಷಮಿಸುವಂತೆಯೂ ಮತ್ತು ವ್ಯಾಧಿಯನ್ನು ಪರಿಹರಿಸಬೇಕೆಂತ ಪ್ರಾರ್ಥಿಸಿಕೊಳ್ಳುತ್ತಾರೆ.
ಶ್ರೀವಿಜಯದಾಸರು ಅತ್ಯಂತ ಪ್ರೀತಿಯಿಂದ ಶ್ರೀನಿವಾಸಾಚಾರ್ಯರಿಗೆ ಧೈರ್ಯ ಹೇಳಿ ಅವರಿಗೆ ತಮ್ಮ ಶಿಷ್ಯರಾದ ಗೋಪಾಲದಾಸರ
ಬಳಿ ಹೋಗಲು ಹೇಳಿ,ಅವರಿಂದ ಈ ವ್ಯಾಧಿ ಪರಿಹಾರವಾಗುವುದೆಂದು ತಿಳಿಸುತ್ತಾರೆ.
ತಮ್ಮನ್ನು ಕಾಣಲು ಉತ್ತನೂರಿಗೆ ಬಂದ ಶ್ರೀನಿವಾಸಾಚಾರ್ಯರನ್ನು ಗೋಪಾಲದಾಸರು ಬಹಳ ಪ್ರೀತ್ಯಾದರಗಳಿಂದಬರಮಾಡಿಕೊಳ್ಳುತ್ತಾರೆ.
ಶ್ರೀಗೋಪಾಲದಾಸರು ಗಣೇಶನ ಅಂಶದವರು ಮತ್ತು ಅಪರೋಕ್ಷಜ್ಞಾನಿಗಳೂ ಹೌದು. ಇವರು ಶ್ರೀಧನ್ವಂತರಿದೇವರಿಗೆ ನಿವೇದಿಸಿದ ಎರಡು ಭಕ್ರಿ(ಜೋಳದ ರೊಟ್ಟಿ)ಯನ್ನು ಶ್ರೀಧನ್ವಂತರಿ ದೇವರನ್ನುಪ್ರಾರ್ಥಿಸಿ ಶ್ರೀನಿವಾಸಾಚಾರ್ಯರಿಗೆ ತಿನ್ನಲಿಕ್ಕೆ ಕೊಡುತ್ತಾರೆ. ಶ್ರೀನಿವಾಸಾಚಾರ್ಯರಿಗೆ ಕೆಲವು ದಿವಸಗಳಲ್ಲಿ ವ್ಯಾಧಿ ಸಂಪೂರ್ಣ ವಾಸಿಯಾಗಿ
ದೇಹದಲ್ಲಿ ಸ್ವಲ್ಪ ಶಕ್ತಿಯೂ ಬರುತ್ತದೆ.
ಶ್ರೀನಿವಾಸಾಚಾರ್ಯರು ಗೋಪಾಲದಾಸರಿಗೆ
ತಮಗೆ ಹರಿದಾಸ ದೀಕ್ಷೆ ನೀಡುವಂತೆಯೂ
ಮತ್ತು ಶಿಷ್ಯರಾಗಿ ಅವರ ಬಳಿಯಲ್ಲೇ ಇರಲು
ಅಪೇಕ್ಷಿಸುತ್ತಾರೆ. ಗೋಪಾಲದಾಸ ರುಗುರುಗಳಾದ ಶ್ರೀವಿಜಯದಾಸರ ಆಜ್ಞೆಯಂತೆ ತಮ್ಮ ಆಯುಷ್ಯದಲ್ಲಿ 40 ವರ್ಷಗಳನ್ನು ಶ್ರೀನಿವಾಸಾಚಾರ್ಯರಿಗೆ ಧಾರೆಯೆರೆಯುತ್ತಾರೆ.
ಶ್ರೀನಿವಾಸಾಚಾರ್ಯರಿಗೆ ಪಂಢರಾಪುರಕ್ಕೆ ಹೋಗಿ ಶ್ರೀವಿಠಲನ ಅನುಗ್ರಹ ಪಡೆಯುವಂತೆ ತಿಳಿಸಿ ಅವರನ್ನುಪಂಢರಾಪುರಕ್ಕೆ ಕಳಿಸಿಕೊಡುತ್ತಾರೆ. ಶ್ರೀನಿವಾಸಾಚಾರ್ಯರು ಪಂಢರಾಪುರದಲ್ಲಿ
ಚಂದ್ರಭಾಗಾ ನದಿಯಲ್ಲಿ ಸ್ನಾನಮಾಡುವಾಗ
“ಜಗನ್ನಾಥವಿಠಲ” ಎಂಬ ಶಿಲಾ ಫಲಕ ಇವರ ಕೈಗೆ ಸಿಗುತ್ತದೆ.ಇದುವಿಠಲನ ಅನುಗ್ರಹವೆಂದುಕೊಂಡು “ತಟಿತ್ಕೋಟಿ
ನಿಭ ಕಾಯ ಜಗನ್ನಾಥ ವಿಠಲಯ್ಯ ವಿಠಲಯ್ಯಾ”ಎಂಬ ದೇವರನಾಮವನ್ನು
ರಚಿಸಿ ಹಾಡುತ್ತಾರೆ.ಅಂದಿನಿಂದ ಜಗನ್ನಾಥ ದಾಸರಾಗಿ ಶ್ರೀವಿಠಲನ ಅನುಗ್ರಹದಿಂದಲೇ ದೀಕ್ಷೆಪಡೆದರು.
ಅಲ್ಲಿ ವಿಠಲನ ಸೇವೆಮಾಡಿದಾಗ ವಿಠಲನು ಪ್ರತ್ಯಕ್ಷನಾಗಿ ಬ್ರಾಹ್ಮಣ ವೇಷದಲ್ಲಿ ಅವರಿಗೆ ಸುರಗಿ ಹೂವಿನ ಮಾಲೆ ಮತ್ತು ಫೇಡೆಯ ಗಂಟನ್ನು ಕೊಡುತ್ತಾನೆ. ಹರಿದಾಸ ಸಾಹಿತ್ಯಕ್ಕೆ ಶ್ರೀಜಗನ್ನಾಥದಾಸರ ಕೊಡುಗೆ ಅಪಾರವಾಗಿದೆ.ಅನೇಕ ಕೀರ್ತನೆಗಳನ್ನೂ, ಸುಳಾದಿಗಳನ್ನೂ ರಚಿಸಿದ್ದಾರೆ.‌
ಸುವ್ವಾಲಿ ಪದಗಳನ್ನು ರಚಿಸಿರುವುದು ಇವರ ಮತ್ತೊಂದು ವೈಶಿಷ್ಟ್ಯ.
ಜಗನ್ನಾಥದಾಸರು ಹರಿ ಕಥಾಮೃತಸಾರವನ್ನು
ರಚಿಸತೊಡಗಿದಾಗ, 27 ಸಂಧಿಗಳನ್ನು ರಚಿಸಿದ ನಂತರ ಮುಂದುವರೆಯದೆ ನಿಂತು ಹೋಯಿತಂತೆ.
ಆಗ ಅವರ ಗುರುಗಳಾದ ಗೋಪಾಲದಾಸರಲ್ಲಿ ವಿಚಾರಿಸಿದಾಗ ಗಣಪತಿ ಸ್ತೋತ್ರವನ್ನು ಕೈಬಿಟ್ಟಿರುವುದರಿಂದ ಈ ರೀತಿಯಾಗಿದೆ ಎಂದು ಗೊತ್ತಾಗಿ 28 ನೆಯ ಸಂಧಿಯನ್ನು “ಶ್ರೀ ವಿಘ್ನೇಶ್ವರ ಸಂಧಿ” ಎಂದು ಹೆಸರಿಸಿ ಗಣಪತಿಗೆ ಅರ್ಪಿಸಿದ ನಂತರ ಗ್ರಂಥ ಪೂರ್ಣಗೊಂಡಿತು ಎಂತ ತಿಳಿಯುತ್ತದೆ.
ಶ್ರೀಜಗನ್ನಾಥದಾಸರು ಶಾಲಿವಾಹನ ಶಕೆ 1731 ನೇ ಶುಕ್ಲ ಸಂವತ್ಸರದ ಭಾದ್ರಪದ ಶುದ್ಧನವಮಿಯಂದು ಮಾನವಿಯಲ್ಲಿ ಹರಿ ಪದವನ್ನೈದಿದರು.
ಇಂತಹ ದೈವಾಂಶ ಸಂಭೂತರ ಆರಾಧನಾ ದಿನದಂದು ಅವರನ್ನು ಸ್ಮರಿಸಿ ಭಕ್ತಿಯ ನಮನಗಳನ್ನು ಅರ್ಪಿಸಿ,ಅವರ ಅನುಗ್ರಹಕ್ಕೆ
ಪಾತ್ರರಾಗೋಣ.


ಎನ್.ಜಯಭೀಮ್ ಜೊಯ್ಸ್

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...