Sri Adichunchanagiri Education Trust ಮಗು ಮೊದಲು ತನ್ನಲ್ಲಿ ತಾನು ಆತ್ಮವಿಶ್ವಾಸ ಮೂಡಿಸಿಕೊಳ್ಳುವುದು ಅತ್ಯಾವಶ್ಯಕ. ತನ್ನ ಕಲಿಕೆ ತನ್ನ ಏಳಿಗೆ ಎಂಬ ಅರಿವು ಮೂಡಿದರೆ ಕಲಿಕೆಯ ಶ್ರಮ ಸಾರ್ಥಕವಾಗುತ್ತದೆ ಎಂದು ಶ್ರೀ ಆದಿಚುಂಚನಗಿರಿ ಶಾಖಾಮಠದ ಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಅವರು ಶಿವಮೊಗ್ಗ ನಗರದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಗುರುಕುಲ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಪ್ರಥಮ ಪಿಯುಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಖರ ಕಾರ್ಯಕ್ರಮದಲ್ಲಿ ಹಾಗೂ ಕಳೆದ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ಪರೀಕ್ಷೆಯ ಅಂಕಗಳಿಕೆಯೇ ಜೀವನವಲ್ಲ, ವ್ಯಾಸಂಗದ ಮೂಲಕ ಬದುಕಿನ ಪ್ರತಿ ಗಳಿಕೆಯನ್ನು ಪ್ರಜ್ಞಾಪೂರ್ವಕವಾಗಿ ಕಳೆಯಬೇಕು. ಮೊದಲು ನಮಗೆ ನಾವು ಬೆಳಕಾಗಬೇಕು, ನಮ್ಮ ಬದುಕು ಬೆಳಗುತ್ತಿದ್ದರೆ, ಬೇರೆಯವರಿಗೆ ಬೆಳಕು ಸಿಗುತ್ತದೆ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದೇ ರೀತಿಯ ಗ್ರಹಿಕ ಶಕ್ತಿ ಹಾಗೂ ಸಾಮರ್ಥ್ಯ ಇರಲು ಸಾಧ್ಯವಿಲ್ಲ. ಹಾಗಾಗಿ ಪೋಷಕರು ಮಕ್ಕಳ ಅಭಿರುಚಿಗೆ ತಕ್ಕ ಪ್ರೋತ್ಸಾಹ ನೀಡಿದರೆ ಅವರು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಶೈಕ್ಷಣಿಕ ಸಲಹೆಗಾರರಾದ ಶ್ರೀ ವಿಜಯವಾಮನ್ ಮಾತನಾಡುತ್ತಾ,
ತಂದೆ ತಾಯಿಗಳು ನಿಮ್ಮ ಎಲ್ಲಾ ಬೇಕು ಬೇಡಿಕೆಗಳನ್ನು ಈಡೇರಿಸುತ್ತಾರೆ. ಜೀವನದ ಸಂಧ್ಯಾ ಕಾಲದಲ್ಲಿ ನಿಮಗೆ ಬದುಕು ನೀಡಿದ ತಂದೆ ತಾಯಿಗಳ ರಕ್ಷಣೆ ಹಾಗೂ ಪೋಷಣೆ ನಿಮ್ಮ ಮೇಲಿರುತ್ತದೆ. ಅದನ್ನು ಚಾಚು ತಪ್ಪದೇ ಮಾಡುವುದು ನಿಮ್ಮ ಕರ್ತವ್ಯ ಕೂಡ ಆಗಿರುತ್ತದೆ. ಆದರೆ ಆಧುನಿಕ ಬದುಕಿನಿಂದಾಗಿ ಇಂದು ಎಷ್ಟೋ ತಂದೆ ತಾಯಿಗಳು ವೃದ್ದಾಶ್ರಮ ಸೇರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೇವಿನ ಬೀಜವನ್ನು ಬಿತ್ತಿ, ಮಾವಿನ ಫಸಲನ್ನು ನಿರೀಕ್ಷಿಸಲು ಸಾಧ್ಯವಿಲ್ಲವೋ ಅದೇ ರೀತಿ ವಿದ್ಯಾರ್ಥಿಗಳಿಗೆ ಒಳ್ಳೆಯ ಅಂಶಗಳನ್ನು ಬಿತ್ತದೇ ಅವರುಗಳನ್ನು ಒಳ್ಳೆಯವರನ್ನಾಗಿ ರೂಪಿಸುವುದು ಕೂಡ ಕಷ್ಟ ಸಾಧ್ಯ. ಆದ್ದರಿಂದ ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಒಳ್ಳೆಯ ಅಂಶಗಳನ್ನು ಒತ್ತಿ ಒತ್ತಿ ಹೇಳಬೇಕು. ಆ ಮೂಲಕ ವಿದ್ಯಾರ್ಥಿ ಸಮೂಹವನ್ನು ಉತ್ತಮ ಸತ್ಪ್ರಜೆಗಳಾಗಿ ರೂಪಸಿಬೇಕೆಂದು ಹೇಳಿದರು.
Sri Adichunchanagiri Education Trust ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಕೊಳಿಗೆ ವಾಸಪ್ಪಗೌಡ ,ಖ್ಯಾತ ವಾಗ್ಮಿಗಳಾದ ಶ್ರೀ ಆದರ್ಶ ಗೋಖಲೆ
ಶಿವಮೊಗ್ಗ ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗುರುರಾಜ್ಎಸ್. ವಿ., ಗುರುಪುರದ ಬಿಜಿಎಸ್ ಗುರುಕುಲ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್.ಹೆಚ್, ಮತ್ತು ಗಣ್ಯರು ಹಾಗೂ ವಿದ್ಯಾರ್ಥಿಗಳು,ಪೋಷಕರು ಉಪಸ್ಥಿತರಿದ್ದರು.
