Rotary Club Shimoga ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೇರೆಪಿಸುವಲ್ಲಿ ಇಂಟರಾಕ್ಟ್ ಕ್ಲಬ್ ನೆರವಾಗುತ್ತದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಅಧ್ಯಕ್ಷ ಕೆ.ಎಸ್.ವಿಶ್ವನಾಥ ನಾಯಕ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಸಂಸ್ಥೆ ವತಿಯಿಂದ ಮಲವಗೊಪ್ಪದ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಇಂಟರಾಕ್ಟ್ ಕ್ಲಬ್ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ನಮ್ಮ ಕ್ಲಬ್ ಸದಾ ಬೆಂಬಲವಾಗಿ ನಿಂತಿದೆ. ಇಂಟರಾಕ್ಟ್ ಕ್ಲಬ್ ಮೂಲಕ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯ ಎಂದು ತಿಳಿಸಿದರು.
ಎರಡು ವರ್ಷಗಳ ಹಿಂದೆ ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಇಂಟರಾಕ್ಟ್ ಕ್ಲಬ್ ಅನ್ನು ಪ್ರಾರಂಭಿಸಿ ಮಕ್ಕಳ ವೈಯಕ್ತಿಕ ಅಭಿವೃದ್ಧಿಗೆ ಅವಕಾಶ ಕಲ್ಪಿಸಿದೆ. ಇಂಟರಾಕ್ಟ್ ಕ್ಲಬ್ ಮುಖಾಂತರ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದರು.
Rotary Club Shimoga ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ, ವಲಯ ಸೇನಾನಿ ಎಸ್.ಪಿ.ಶಂಕರ್, ರೋಟರಿ ಕ್ಲಬ್ ರಿವರ್ ಸೈಡ್ ಕಾರ್ಯದರ್ಶಿ ನಿತಿನ್ ಯಾದವ್, ಮುಖ್ಯಶಿಕ್ಷಕಿ ಲೀನಾ ರಾಬರ್ಟ್ ಹಾಗೂ ಶಾಲಾ ಅಧ್ಯಕ್ಷ ನಿಂಗರಾಜು ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಹಾಗೂ ಟೀಚರ್ ಕೋಆರ್ಡಿನೇಟರ್‌ಗಳಿಗೆ ಪದವಿ ಪ್ರದಾನ ನೆರವೇರಿಸಲಾಯಿತು.
ಇಂಟರಾಕ್ಟ್ ಕ್ಲಬ್‌ನ ಪದವಿ ಪ್ರದಾನ ಕಾರ್ಯಕ್ರಮ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು. ಶಾಲೆಯ ಆವರಣದಲ್ಲಿ 25ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.
