Saturday, December 6, 2025
Saturday, December 6, 2025

DC Shivamogga ಜಿಲ್ಲಾ ಪ್ರವಾಸೋದ್ಯಮ ವಿಕಾಸಕ್ಕೆ ವಿವಿಧ ಪ್ರೋತ್ಸಾಹನ ಯೋಜನೆ ಘೋಷಿಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

Date:

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಇನ್ನಷ್ಟು ಬಲಗೊಳಿಸುವ ಹಾಗೂ ದೇಶದ ಜನರನ್ನು ಜಿಲ್ಲೆಗೆ ಆಕರ್ಷಿಸುವಂತೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತದ ವತಿಯಿಂದ ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಪ್ರಯತ್ನದ ಭಾಗವಾಗಿ, ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಹಲವು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.

ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಸೆಪ್ಟಂಬರ್‌ 22ರಂದು ದೇಶದಾದ್ಯಂತ ಆಚರಿಸಲಾಗುತ್ತಿರುವ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ನಗರದ ಛಾಯಾಗ್ರಾಹಕರ ಸಂಘ, ಹವ್ಯಾಸಿ ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ರಾಜ್ಯದ ಹೃದಯಭಾಗದಲ್ಲಿರುವ ಶಿವಮೊಗ್ಗ ಜಿಲ್ಲೆ ನೈಸರ್ಗಿಕ ಸೌಂದರ್ಯ, ಸಾಂಸ್ಕೃತಿಕ ಪರಂಪರೆ ಮತ್ತು ಕ್ರೀಡೆ-ಸಾಹಸಕ್ಕೆ ಮಹತ್ವ ಪಡೆದುಕೊಂಡಿದೆ. ವಿಶ್ವವಿಖ್ಯಾತ ಜೋಗ-ಜಲಪಾತದಿಂದ ಆಗುಂಬೆಯ ಸೂರ್ಯಾಸ್ತದವರೆಗಿನ ಅನೇಕ ವಿಷಯಗಳಿಗೆ ಸದಾ ಜೀವಂತವಾಗಿದೆ. ಇಲ್ಲಿನ ಹಲವು ಉಸಿರು ಬಿಗಿಹಿಡಿಯುವ ಕಡಿದಾದ ಕಣಿವೆಗಳು, ಮೈಜುಮ್ಮೆನಿಸುವಂತ ದೃಶ್ಯಗಳು, ರೋಮಾಂಚಕ ಸಾಹಸ-ಕ್ರೀಡೆಗಳಿಗೆ ಜಿಲ್ಲೆ ಸದಾ ನೆನಪಿನಲ್ಲಿ ಉಳಿಯಲಿದೆ ಎಂದರು.

ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು, ಮಂದಿರ-ಮಸೀದಿ-ಚರ್ಚುಗಳು, ಐತಿಹಾಸಿಕ ಸ್ಥಳಗಳು, ಕವಿ-ಕಲಾವಿದರು, ಸಾಹಿತ್ಯ, ನೃತ್ಯ ಸಂಗೀತ ಕ್ಷೇತ್ರದ ಸಾಧಕರು, ನದಿ-ನಾಲೆ-ಜಲಪಾತಗಳು, ತಪ್ಪಲು ಪ್ರದೇಶಗಳು ಮತ್ತಿತರ ವಿವರಗಳನ್ನು ಸಚಿತ್ರವಾಗಿ ಸಾಮಾಜಿಕ ಜಾಲತಾಣಗಳು ಮತ್ತಿತರ ಪ್ರಸಾರ ಮಾಧ್ಯಮಗಳನ್ನು ಬಳಸಿಕೊಂಡು ಜಗತ್ತಿನಾದ್ಯಂತ ಜಿಲ್ಲೆಯನ್ನು ಪರಿಚಯಿಸಲು ಉದ್ದೇಶಿಸಲಾಗಿದೆ ಎಂದರು.

ಈ ಕಾರ್ಯದಿಂದಾಗಿ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ವಿಕಾಸಕ್ಕೆ ಇರಬಹುದಾದ ಬಾಗಿಲುಗಳು ಸಹಜವಾಗಿ ತೆರೆದುಕೊಳ್ಳಲಿವೆ. ಮಾತ್ರವಲ್ಲ ಹಲವು ಕ್ಷೇತ್ರಗಳಲ್ಲಿನ ವ್ಯವಹಾರ, ವಾಣಿಜ್ಯ ವಹಿವಾಟುಗಳಿಗೆ ಅವಕಾಶ ದೊರೆಯಲಿದೆ. ಅಷ್ಟೇ ಅಲ್ಲದೇ ನಿರುದ್ಯೋಗಿಗಳ ಉದ್ಯೋಗದ ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರ ಲಭಿಸಲಿದೆ ಎಂಬ ಆಶಯ ಹೊಂದಿರುವುದಾಗಿ ಅವರು ತಿಳಿಸಿದರು.

ಅಲ್ಲದೇ ಜಿಲ್ಲೆಯಾದ್ಯಂತ ಆಯ್ದ 60ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಪ್ರಚಾರ ಫಲಕಗಳನ್ನು ಅಳವಡಿಸಲಾಗುವುದು. ಜಿಲ್ಲೆಯ ಅಧಿಕೃತ, ನಂಬಿಕಾರ್ಹ, ಮಾಹಿತಿಯುಕ್ತ ವೆಬ್‌ಸೈಟ್‌ನ್ನು ಆರಂಭಿಸಿ, ಜಿಲ್ಲೆಯ ಛಾಯಾಚಿತ್ರ ಸಹಿತ ಸಮಗ್ರ ಮಾಹಿತಿ, ಐತಿಹಾಸಿಕ ಸ್ಥಳಗಳು, ಸ್ಥಳ ಐತಿಹ್ಯಗಳು, ವ್ಯಕ್ತಿಚಿತ್ರಗಳು, ವನ್ಯಜೀವಿಗಳು, ಸ್ಟೇಹೋಂ, ವಸತಿ ಗೃಹಗಳು, ಊಟೋಪಹಾರ, ಮತ್ತಿತರ ವಿಶೇಷತೆಗಳು, ನದಿ-ನಾಲೆ ಜಲಪಾತಗಳು, ತಪ್ಪಲು ಪ್ರದೇಶಗಳು, ಸ್ಥಳದಿಂದ ಸ್ಥಳಕ್ಕೆ ಇರುವ ದೂರ, ಕಾಲಮಾನಕ್ಕನುಗುಣವಾಗಿ ಬದಲಾಗುವ ವಿಶೇಷಗಳನ್ನೊಳಗೊಂಡಂತೆ ಮಾಹಿತಿಯನ್ನು ಒದಗಿಸಲಾಗುವುದು ಎಂದ ಅವರು, ಈ ಜಾಲತಾಣದಲ್ಲಿ ಅತ್ಯಪರೂಪದ ಜಿಲ್ಲೆಯ ವಿಶೇಷಗಳಿರುವ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದರು. ಇದರೊಂದಿಗೆ ಕಾಫೀ ಟೇಬಲ್‌ ಬುಕ್‌ನ್ನು ಪ್ರಕಟಿಸಲಾಗುವುದು ಎಂದರು.

ಈ ಎಲ್ಲವುಗಳ ವ್ಯವಸ್ಥಿತ ಆಯೋಜನೆಗೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಹಲವು ಸಮಿತಿಗಳನ್ನು ರಚಿಸಲಾಗುವುದು. ಅಲ್ಲದೇ ಪ್ರವಾಸೋದ್ಯಮದಲ್ಲಿ ಆಸಕ್ತರಿರುವವರು ನೀಡುವ ಅಮೂಲ್ಯ ಸಲಹೆಗಳನ್ನು ನೀಡಲು ಮುಕ್ತ ಅವಕಾಶ ನೀಡಲಾಗಿದೆ ಎಂದರು.

DC Shivamogga ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌ ಅವರು ಮಾತನಾಡಿ, ವಿವಿಧ ವಿಭಾಗಗಳಲ್ಲಿ ಆಯೋಜಿಸಲಾಗುವ ಸ್ಪರ್ಧೆಗಳನ್ನು ಸೆಪ್ಟಂಬರ್‌ 11ರೊಳಗಾಗಿ ಪೂರ್ಣಗೊಳಿಸಲಾಗುವುದು. ಸ್ಪರ್ಧೆಗಳಲ್ಲಿ ಪ್ರಮುಖವಾಗಿ ಜಿಲ್ಲೆಯಲ್ಲಿನ ವಿಶೇಷತೆಗಳನ್ನೊಳಗೊಂಡಂತೆ ವಿಡಿಯೋಗ್ರಫಿ ಸ್ಪರ್ಧೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನ 40,000/-, ದ್ವಿತೀಯ ಬಹುಮಾನ 30,000/- ಹಾಗೂ ತೃತೀಯ ಬಹುಮಾನ 20,000/-ರೂ.ಗಳ ನಗದು ಬಹುಮಾನ ನೀಡಲಾಗುವುದು. ಅಲ್ಲದೇ 25,000/-ರೂ.ಗಳ ವಿಶೇಷ ಬಹುಮಾನ ನೀಡಲಾಗುವುದು.

ಫೋಟೋಗ್ರಫಿ ಸ್ಪರ್ಧೆ ಮತ್ತು ರೀಲ್ಸ್‌ ಸ್ಪರ್ಧೆ : ಪ್ರತ್ಯೇಕವಾಗಿರುವ ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅನುಕ್ರಮವಾಗಿ 8,000/-, 5,000/- ಮತ್ತು 3,000/-ರೂ.ಗಳ ನಗದು ಪುರಸ್ಕಾರ ನೀಡಲಾಗುವುದು. ಅಲ್ಲದೇ 10,000/-ರೂ.ಗಳ ವಿಶೇಷ ಬಹುಮಾನ ನೀಡಲಾಗುವುದು.

ಲಾಂಛನ ವಿನ್ಯಾಸ ಸ್ಪರ್ಧೆ(LOGO) : ಜಿಲ್ಲೆಯ ಮಹತ್ವದ ಹಲವು ವಿಶೇಷತೆಗಳನ್ನು ಬಿಂಬಿಸುವಂತೆ ಅತ್ಯುತ್ತಮ ರೀತಿಯಲ್ಲಿ ಲಾಂಛನ ವಿನ್ಯಾಸಗೊಳಿಸುವ ವಿನ್ಯಾಸಕಾರರಿಗೆ 30,000/-ರೂ.ಗಳ ಬಹುಮಾನ ನೀಡಲಾಗುವುದು.

ಘೋಷವಾಕ್ಯ ಸ್ಪರ್ಧೆ (TAGLINE) : ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ, ಎಲ್ಲರನ್ನೂ ಆಕರ್ಷಿಸುವ ರೀತಿಯಲ್ಲಿ ಜಿಲ್ಲೆಯನ್ನು ಇಲ್ಲಿನ ಮಹತ್ವಗಳನ್ನು ಪರಿಚಯಿಸುವ ಹಾಗೆ ಘೋಷವಾಕ್ಯ ರಚಿಸುವ ಓರ್ವರಿಗೆ ರೂ.5,000/-ಗಳ ನಗದು ಬಹುಮಾನ ನೀಡಲಾಗುವುದು ಎಂದರು.

ಸ್ಪರ್ಧೆಗಳಲ್ಲಿ ಭಾಗವಹಿಸುವವರು ತಮ್ಮ ಅನುಕೂಲಗಳಿಗೆ ಚಿತ್ರೀಕರಣ, ಛಾಯಾಚಿತ್ರ ಮಾಡುವವರಿಗೆ ಜಿಲ್ಲಾಡಳಿತದ ವತಿಯಿಂದ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ತಿಳಿಸಿರುವ ಅವರು, ಈ ಸ್ಪರ್ಧೆಗಳ ಕುರಿತಾದ ವಿವರಗಳನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಧರ್ಮಪ್ಪ, ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಅಮರೇಶ್, ಬಸವರಾಜ್‌, ಪ್ರಕಾಶ್‌, ನಾಗರಾಜ್‌, ಸತೀಶ್‌, ಶ್ರೀನಿವಾಸ್‌, ಸೋಮಶೇಖರ್‌, ಮಂಜುನಾಥ್‌, ಗುರುರಾಜ್‌ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...