Rotary Shimoga ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡುವುದು ಅವಶ್ಯಕ. ಇದಕ್ಕಾಗಿ ರಕ್ತದ ಗುಂಪಿನ ಅರಿವು ಇರಬೇಕು. ರಕ್ತದ ವರ್ಗೀಕರಣ ತಿಳಿದುಕೊಳ್ಳಬೇಕು ಎಂದು ರೋಟರಿ ಶಿವಮೊಗ್ಗ ಪೂರ್ವ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಕೆ.ಬಿ.ರವಿಶಂಕರ್ ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಹಾಗೂ ರೋಟರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರೋಟರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾ ಶಾಖೆ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದ ಗುಂಪು ತಪಾಸಣೆ ಹಾಗೂ ಮಾಹಿತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪ್ರತಿಯೊಬ್ಬರು ರಕ್ತದ ಗುಂಪು ಪರೀಕ್ಷಿಸಿಕೊಂಡು ದಾಖಲೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯ ಸರ್ಕಾರಿ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷೆ ಮಂಜುಳಾ ಮಾತನಾಡಿ, ವಿದ್ಯಾರ್ಥಿಗಳು ರಕ್ತದ ಗುಂಪನ್ನು ಸಕಾಲದಲ್ಲಿ ಪರೀಕ್ಷೆ ಮಾಡಿಸಿಕೊಳ್ಳದೆ ಏನಾದರೂ ಅವಘಡ ಸಂಭವಿಸಿದಾಗ ಪರೀಕ್ಷೆಗೆ ಒಳಗಾಗುವುದು ಸರಿಯಲ್ಲ. ರಕ್ತದ ಮಾಹಿತಿ ಹೊಂದಿರಬೇಕು ಎಂದರು.
Rotary Shimoga ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಕಾರ್ಯದರ್ಶಿ ಡಾ. ಧನಂಜಯ ರಾಂಪುರ ಮಾತನಾಡಿ, ರಕ್ತದ ಅವಶ್ಯಕತೆ ಹಾಗೂ ಮಹತ್ವದ ಕುರಿತು ಅರಿವು ಹೊಂದಿರುವುದು ಅವಶ್ಯ ಎಂದು ತಿಳಿಸಿದರು. 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಕ್ತದ ಗುಂಪು ಪರೀಕ್ಷಿಸಿ ಗುರುತಿನ ಪತ್ರ ನೀಡಲಾಯಿತು.
ರಾಮಚಂದ್ರ ಎಸ್.ಸಿ., ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ ಸಂಘದ ಕಾರ್ಯದರ್ಶಿ ಶರ್ಮಿಳಾ, ಖಜಾಂಚಿ ಲತಾ ಡಿ.ಟಿ, ಹಿರಿಯ ಉಪಾಧ್ಯಕ್ಷ ನರಸಿಂಹ .ಕೆ, ಸದಸ್ಯರಾದ ರಾಘವೇಂದ್ರ ಟಿ.ಜಿ, ರಾಘವೇಂದ್ರ ಕೆ., ಉಮೇಶ, ರಮೇಶ್, ಗಿರೀಶ್, ವೆಂಕಟೇಶ್ ಪ್ರಸಾದ್ ಇತರರಿದ್ದರು.
