Dr. H. B. Manjunatha ದೇಶವು ವಿಶ್ವದ ದೊಡ್ಡ ಆರ್ಥಿಕ ಶಕ್ತಿಯಾಗುವ ಭರದಲ್ಲಿ ಮೂಲದ ಆಧ್ಯಾತ್ಮಿಕ ಶಕ್ತಿಯನ್ನು ಮರೆಯಬಾರದು ಎಂದು ಹಿರಿಯ ಪತ್ರಕರ್ತ ಡಾ ಎಚ್. ಬಿ. ಮಂಜುನಾಥ ಹೇಳಿದರು.
ಅವರು ಮಲಾಡಿಹಳ್ಳಿ ಅನಾಥ ಸೇವಾಶ್ರಮದ ಪರಮಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಶ್ರೀ ಸೂರುದಾಸ್ ಜಿ ಯವರ ಪುಣ್ಯಾರಾಧನೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪೂಜ್ಯ ದ್ವಯರಿಗೆ ನುಡಿ ನಮನ ಸಲ್ಲಿಸುತ್ತಾ ಅಧ್ಯಾತ್ಮ ಎಂದರೆ ಪೂಜೆ ಪುನಸ್ಕಾರಗಳು, ಹೋಮ ಹವನಾದಿಗಳು, ಧ್ಯಾನ ಭಜನಾದಿಗಳ ಮೌಢ್ಯವೆಂದು ಭಾವಿಸಬಾರದು. ಅಧ್ಯಾತ್ಮವೆಂದರೆ ತನ್ನನ್ನು ತಾನು ಅರ್ಥ ಮಾಡಿಕೊಂಡು ತನ್ನಂತೆಯೇ ಪರರು ಎಂದು ಭಾವಿಸಿ ಇತರರಿಗೆ ಉಪಕಾರ ಮಾಡುವುದೇ ಅಧ್ಯಾತ್ಮ. ಈ ಸೇವಾ ಕೈಂಕರ್ಯವನ್ನು ಪ್ರತಿಫಲಾಪೇಕ್ಷೆ ಇಲ್ಲದೆ, ಪ್ರಚಾರ ಬಯಸದೆ ಮಾಡಿದವರು ರಾಘವೇಂದ್ರ ಸ್ವಾಮಿಗಳು ಹಾಗೂ ಸೂರು ದಾಸ್ ರವರು. ಕುಗ್ರಾಮವಾಗಿದ್ದ ಮಲ್ಲಾಡಿಹಳ್ಳಿಯನ್ನು ವಿಶ್ವ ಭೂಪಟದಲ್ಲಿ ಗುರುತಿಸುವಂತೆ ಮಾಡಿದ್ದಲ್ಲದೆ ಅನಾಥರಿಗೆ ಆಶ್ರಯ, ದೀನದುರ್ಬಲರಿಗೆ ಶಿಕ್ಷಣ, ರೋಗಿಗಳಿಗೆ ಚಿಕಿತ್ಸೆ, ಕಲೆ ಸಾಹಿತ್ಯ ಸಂಸ್ಕೃತಿಗೆ ಪ್ರೋತ್ಸಾಹ ಕೊಟ್ಟವರು ಶ್ರೀ ರಾಘವೇಂದ್ರ ಸ್ವಾಮಿಯವರು. ಅವರ ಆದರ್ಶಗಳನ್ನು ಕಿಂಚಿತ್ತಾದರೂ ಪಾಲಿಸುವುದೇ ನಿಜವಾಗಿಯೂ ಅವರ ಆತ್ಮಕ್ಕೆ ಸಲ್ಲಿಸುವ ಪರಮ ಗೌರವವಾಗಿದೆ ಎಂದು ಡಾ. ಎಚ್.ಬಿ.ಮಂಜುನಾಥ ಹೇಳಿದರು.
Dr. H. B. Manjunatha ಅನಾಥ ಸೇವಾಶ್ರಮದ ಕಾರ್ಯದರ್ಶಿ ಎಸ್ ಕೆ ಬಸವರಾಜನ್ ಅಧ್ಯಕ್ಷತೆಯಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಘವೇಂದ್ರ ಸ್ವಾಮೀಜಿ ಜೀವನ ಚರಿತ್ರೆ ಆಧಾರಿತ ತಿರುಕ ಯಾನ ಕೃತಿಯ ಕರ್ತೃ ಡಾ ಜಿ ಎನ್ ಮಲ್ಲಿಕಾರ್ಜುನಪ್ಪ ಹಾಗೂ ಹಿರಿಯ ಪತ್ರಕರ್ತ ಉಜ್ಜಿನಪ್ಪ ಮಾತನಾಡಿದರು. ಕೃತಿಯ ಅವಲೋಕನವನ್ನು ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ ಎಂ ಎಚ್ ರುದ್ರಮುನಿ ಮಾಡಿದರು. ವಿಶ್ವಸ್ಥರುಗಳಾದ ಎಲ್ಎಸ್ ಶಿವರಾಮಯ್ಯ ಕೆ ಡಿ ಬಡಿಗೇರ್ ಮುಂತಾದವರ ಉಪಸ್ಥಿತಿಯಲ್ಲಿ ಶ್ರೀ ರಾಘವೇಂದ್ರ ಜ್ಞಾನ ಮಂಟಪದಲ್ಲಿ ನೆರವೇರಿದ ಕಾರ್ಯಕ್ರಮದ ಪ್ರಾರ್ಥನೆಯನ್ನು ಸಂಗೀತ ಶಿಕ್ಷಕಿ ಸುಮಾ ಹಾಡಿದರೆ ಆಡಳಿತಾಧಿಕಾರಿ ಡಾ. ಜಿ ಪಾಂಡುರಂಗ ಮೂರ್ತಿ ಸ್ವಾಗತ ಕೋರಿದರು. ವಚನ ಗೀತೆಯನ್ನು ಮಧುವಂತಿ ಹಿರೇಮಠ ಹಾಡಿದರು. ಜಿ ಚಂದ್ರಪ್ಪ, ನವೀನ್ ಮಸ್ಕಲ್, ಎಸ್ ಆರ್ ಸಂತೋಷ್ ಕುಮಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಬಿ ಪಿ ದಕ್ಷಿಣ ಮೂರ್ತಿ ವಂದನೆ ಸಲ್ಲಿಸಿದರು.
