Acharya Tulsi National College of Commerce ಜೀವನ ಕಟ್ಟಿಕೊಳ್ಳಲು ಉದ್ಯೋಗ ಅವಶ್ಯ. ನಮ್ಮ ಜೀವನದಲ್ಲಿ ಸಂತೃಪ್ತಿ ತಂದುಕೊಡುವ ಉದ್ಯೋಗವು ಜೀವನದಲ್ಲಿ ಸಾರ್ಥಕತೆ ಮೂಡಿಸುತ್ತದೆ ಎಂದು ಎಟಿಎನ್‌ಸಿಸಿ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರೊ. ಕೆ.ಎಂ.ನಾಗರಾಜು ಹೇಳಿದರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ ಅವಧಿ ಸಂತೃಪ್ತಿ ತಂದಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಎಲ್ಲರ ಸಹಕಾರದಿಂದ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ. ದೇಶದಲ್ಲೇ ವಾಣಿಜ್ಯಶಾಸ್ತ್ರದಲ್ಲಿ ಹೆಸರು ಮಾಡಿರುವ ಎಟಿಎನ್‌ಸಿಸಿ ಕಾಲೇಜಿನಲ್ಲಿ ಅಳಿಲುಸೇವೆ ಸಲ್ಲಿಸಿದ್ದೇನೆ. ಎಲ್ಲ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ನನ್ನ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತು ಕಾರ್ಯಕ್ರಮಗಳು ಯಶಸ್ಸು ಕಾಣಲು ಸಹಕರಿಸಿದ್ದಾರೆ ಎಂದು ತಿಳಿಸಿದರು.
ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪ್ರೊ. ವಿಷ್ಣುಮೂರ್ತಿ ಕೆ.ಎ. ಮಾತನಾಡಿ, ಎನ್‌ಎಸ್‌ಎಸ್ ಅಧಿಕಾರಿಯಾಗಿ ರಾಜ್ಯದಲ್ಲೇ ಅತ್ಯುತ್ತಮ ಹೆಸರು ಗಳಿಸಿರುವ ನಾಗರಾಜ್ 34 ವರ್ಷ ಸಾರ್ಥಕ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ. ಮಾತನಾಡಿ, ಅತ್ಯುತ್ತಮ ಕ್ರೀಡಾಪಟುಗಳನ್ನು ಸೃಷ್ಟಿಸಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದ್ದಾರೆ. ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಮಾತನಾಡಿ, ಹಿಡಿದ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಿದ್ದರು. ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಅವರ ಯೋಜನೆಗಳಿಗೆ ಸಮಿತಿ ಅಗತ್ಯ ಸಹಕಾರ ನೀಡುತ್ತಿತ್ತು ಎಂದು ಹೇಳಿದರು.
Acharya Tulsi National College of Commerce ಪ್ರಾಚಾರ್ಯೆ ಪ್ರೊ. ಮಮತಾ ಪಿ.ಆರ್. ಮಾತನಾಡಿ, ನಾಗರಾಜ್ ಅವರಿಗೆ ಎರಡು ಬಾರಿ ಅತ್ಯುತ್ತಮ ಎನ್‌ಎಸ್‌ಎಸ್ ಅಧಿಕಾರಿ ಪ್ರಶಸ್ತಿ ಬಂದಿದ್ದು, ರಾಜ್ಯಮಟ್ಟದ ವಿಶ್ವವಿದ್ಯಾಲಯ ಕ್ರೀಡಾಕೂಟಗಳನ್ನು ಅತ್ಯಂತ ವ್ಯವಸ್ಥಿತವಾಗಿ ನಿಭಾಯಿಸಿದ್ದರು. ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಉದ್ಯೋಗ ಶಿಬಿರ ಆಯೋಜಿಸಿ ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು ಎಂದು ತಿಳಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಪ್ರಮುಖರಾದ ಅಶ್ವತ್ಥ ನಾರಾಯಣ ಶೆಟ್ಟಿ, ಧನಂಜಯ್, ವಾಗೇಶ್, ಸುರೇಶ್, ಕಿರಣ್, ಧರ್ಮೇಂದರ್ ಸಿಂಗ್, ಅಶೋಕ್ ಮತ್ತಿತರರು ಇದ್ದರು.
