Guarantee Scheme ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಗೃಹಲಕ್ಮಿ ಯೋಜನೆಯಿಂದ ಆರ್ಥಿಕ ಚಟುವಟಿಕೆ ಕೈಗೊಂಡ ಕನಿಷ್ಠ 25 ಮಹಿಳಾ ಫಲಾನುಭವಿಗಳ ಯಶೋಗಾಥೆಯ ವಿಡಿಯೋಗಳನ್ನು ಚಿತ್ರೀಕರಣ ಮಾಡಿ ನೀಡುವಂತೆ ತಾಲ್ಲೂಕು ಸದಸ್ಯರಿಗೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಅಧ್ಯಕ್ಷರಾದ ಮಧು ಹೆಚ್. ಎಂ. ತಿಳಿಸಿದರು.
ಶಿವಮೊಗ್ಗ ನಗರದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಕುರಿತು ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡಿದರು.
ಗೃಹಲಕ್ಮಿ ಯೋಜನೆಯು ಯಶಸ್ವಿಯಾಗಿ ಅನುಷ್ಟಾನಗೊಂಡಿದ್ದು ಶಿವಮೊಗ್ಗ ತಾಲ್ಲೂಕಿನಲ್ಲಿ ಒಟ್ಟು 107520 ಜನ ಮಹಿಳೆಯರು ನೋಂದಣಿಯಾಗಿದ್ದು, 2044 ಐಟಿ/ಜಿಎಸ್‌ಟಿ ಫಲಾನುಭವಿಗಳು ಇದ್ದಾರೆ. ಮರಣ ಹೊಂದಿರುವ ಕುರಿತು 298 ಅರ್ಜಿ ಸ್ವೀಕೃತವಾಗಿದ್ದು ಪ್ರಸ್ತುತ 90 ಫಲಾನುಭವಿಗಳ ಎನ್‌ಪಿಸಿಐ ಬಾಕಿ ಇದೆ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಜುಲೈ ತಿಂಗಳಲ್ಲಿ ಒಟ್ಟು 10077.35 ಕೋಟಿ ಹಣ ಬಿಡುಗಡೆಯಾಗಿರುತ್ತದೆ. ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಒಟ್ಟು 220168 ಗ್ರಾಹಕರಿದ್ದು 2024-25 ನೇ ಸಾಲಿನಲ್ಲಿ 107812094 ಕೋಟಿ ಹಣ ಸಬ್ಸಿಡಿ ನೀಡಲಾಗಿದೆ ಹಾಗೂ 2025-26 ನೇ ಸಾಲಿನಲ್ಲಿ 222253 ಗ್ರಾಹಕರಿದ್ದು 102553733 ಕೋಟಿ ಸಬ್ಸಿಡಿ ನೀಡಲಾಗಿರುತ್ತದೆ ಎಂದು ತಿಳಿಸಿದರು.
ಕೆಲವು ಮಹಿಳೆಯರಿಗೆ ಗೃಹಲಕ್ಮಿ ಹಣ ಜಮೆಯಾಗದಿರುವ ಕುರಿತು ಪರಿಶೀಲನೆ ಮಾಡಲಾಗಿ, ಎನ್‌ಪಿಸಿಐ ದೋಷದಿಂದ ಗೃಹಲಕ್ಮಿ ಹಣ ಜಮೆಯಾಗುತ್ತಿಲ್ಲ ಮತ್ತು ಕೆಲವು ಬ್ಯಾಂಕ್ ಖಾತೆಗಳಿಗೆ ಮೊಬೈಲ್ ನಂಬರ್ ನೋಂದಣಿಯಾಗದೆ ಓಟಿಪಿ ಬಾರದೇ ಇರುವ ಕಾರಣ ಗೃಹಲಕ್ಮಿ ಯೋಜನೆಯ ಹಣವು ಜಮೆಯಾಗುತ್ತಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಲ್ಲಿ ಖಾತೆ ತೆರೆಯುವ ಮೂಲಕವೂ ಸಮಸ್ಯೆಯನ್ನು ಪರಿಹರಿಸಬಹುದು ಎಂದ ಅವರು ಐಜಿಎಸ್‌ಟಿ ಪಾವತಿ ಎಂದು ತೋರಿಸುತ್ತಿರುವ ಫಲಾನುಭುವಿಗಳ ಸಮಸ್ಯೆಯನ್ನು ಸಹ ಪರಿಶಿಲಿಸುವಂತೆ ತಿಳಿಸಿದರು.
Guarantee Scheme ಶಕ್ತಿ ಯೋಜನೆಯ ಮೂಲಕ ತಾಲ್ಲೂಕಿನಲ್ಲಿ ಶೇ.61.5 ರಷ್ಟು ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದು ಇದರಿಂದ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹೆಚ್ಚು ಸಬಲರಾಗುತ್ತಿದ್ದಾರೆ. ಮತ್ತು ಇದರಿಂದ ಸಾರಿಗೆ ಇಲಾಖೆಗೆ ಕೂಡಾ ಹೆಚ್ಚು ಆದಾಯ ಬರುತ್ತಿದೆ ಎಂದರು.
ಜಿಲ್ಲಾ ಉದ್ಯೋಗಾಧಿಕಾರಿಗಳಾದ ಖಲಂದರ್ ಖಾನ್ ಮಾತಾನಾಡಿ, ಮೇ ತಿಂಗಳ ತನಕ ಶಿವಮೊಗ್ಗ ತಾಲ್ಲೂಕಿನಲ್ಲಿ ಯುವನಿಧಿ ಯೋಜನೆಯಡಿ ರೂ.58,81,500 ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿರುತ್ತದೆ. ಕಳೆದ ವರ್ಷಕ್ಕಿಂತ ಈ ಬಾರಿ ಯುವನಿಧಿ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದ್ದು ಈ ವರ್ಷವೂ ಅರ್ಹ ವಿದ್ಯಾರ್ಥಿಗಳು ನೋಂದಣಿಯನ್ನು ಮಾಡುವಂತೆ ತಿಳಿಸಿದರು.
ಈ ಯೋಜನೆಯಡಿ ಎರಡು ವರ್ಷಗಳ ಕಾಲ ಫಲಾನುಭವಿಗಳಾಗಬಹುದಾಗಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಸೇವಾಸಿಂಧು ಪೋರ್ಟಲ್ ಮೂಲಕ ಸ್ವಯಂಕೃತ ಘೋಷಣೆಯನ್ನು ಮಾಡಿಕೊಳ್ಳಬೇಕು. ಇದರ ಜೊತೆಗೆ ಹೊಸದಾಗಿ ಕೌಶಲ್ಯ ತರಬೇತಿ ನೀಡಲು ಯುವನಿಧಿ ಪ್ಲಸ್ ಎಂಬ ಯೋಜನೆಯನ್ನು ಆರಂಭಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯ ಕಾರ್ಯದರ್ಶಿಯಾದ ತಾರಾ ಎನ್, ಹಾಗೂ ತಾಲ್ಲೂಕು ಗ್ಯಾರಂಟಿ ಯೋಜನೆಯ ಅನುಷ್ಟಾನ ಸಮಿತಿಯ ಸದಸ್ಯರುಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
