Nagara Panchami ಸೊರಬ ಪಟ್ಟಣ ಸೇರಿ ತಾಲೂಕಿನಾದ್ಯಂತ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ಮಂಗಳವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಹಲವರು ಮನೆಯಲ್ಲಿಯೇ ನಾಗರ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರೆ, ಕೆಲವರು ದೇವಸ್ಥಾನದ ಆವರಣದಲ್ಲಿರುವ ಹುತ್ತ ಹಾಗೂ ನಾಗರ ಮೂರ್ತಿಗಳಿಗೆ ಹಾಲೆರೆದರು.
ಪಟ್ಟಣದ ಚಿಕ್ಕಪೇಟೆಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಪಕ್ಕ, ಸೊಪ್ಪಿನ ಕೇರಿಯ ಶ್ರೀ ದುರ್ಗಾಂಬ ದೇವಸ್ಥಾನ ಹಿಂಭಾಗ, ಶ್ರೀ ರಂಗನಾಥ ದೇವಸ್ಥಾನ, ಮರೂರು ರಸ್ತೆ, ಹಿರೇಶಕುನದ ಸಾಗರ ರಸ್ತೆ, ಕಾನುಕೇರಿಯ ನಾಗರ ಕಟ್ಟೆ ಸೇರಿದಂತೆ ವಿವಿಧಡೆ ಇರುವ ಅರಳಿಮರದ ಅಡಿಯಲ್ಲಿರುವ ನಾಗರ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಹಿಂದೂ-ಮುಸ್ಲಿಂ ದೇವರಾಧನೆಯ ಸ್ಥಳವಾದ ಉರಗನಹಳ್ಳಿಯ ಕಾಳಿಂಗೇಶ್ವರ ದೇವಾಲಯದಲ್ಲಿ ನಾಗರ ಪಂಚಮಿ ದಿನ ಅಂಗವಾಗಿ ಸಹಸ್ರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿ, ದೇವಸ್ಥಾನ ಹಿಂಭಾಗದ ನಾಗರ ಮೂರ್ತಿಗಳಿಗೆ ಹಾಲೆರೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಈ ಗ್ರಾಮದಲ್ಲಿ ಉರಗಗಳ ಸಂಖ್ಯೆ ಹೆಚ್ಚಿದ್ದು, ಗ್ರಾಮದ ಮನೆ, ಹೊಲ-ಗದ್ದೆ ಎನ್ನದೆ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಇದುವರೆಗೂ ಯಾರನ್ನು ಕಚ್ಚಿಲ್ಲ ಹಾಗೂ ಯಾರೂ ಹಾವನ್ನು ಕೊಂದಿಲ್ಲ. ಇಲ್ಲಿನ ದೇವರಿಗೆ ಹರಕೆ ಹೊತ್ತ ಸುತ್ತಲಿನ ತಾಲೂಕು, ಜಿಲ್ಲೆಗಳ ಭಕ್ತರು ನಾಗರ ಪಂಚಮಿಯಂದು ಹರಕೆ ಒಪ್ಪಿಸುವುದು ರೂಢಿಯಾಗಿದೆ. ಕಾಳಿಂಗೇಶ್ವರ ದೇವಸ್ಥಾನ ಮುಂಭಾಗ ಬೇವಿನ ಮರಕ್ಕೆ ಹಾಗೂ ಶ್ರೀ ಕಾಳಿಂಗೇಶ್ವರ ದೇವರಿಗೆ ಅರ್ಚನೆ ಮಾಡಿಸಿದರು. ನಂತರ ಇಬ್ರಾಹಿಂ ಸ್ವಾಮಿ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಹೊಸ ಉಡುಗೆ ತೊಟ್ಟ ಭಕ್ತರು, ದೇವರಿಗೆ ಹಾಲು, ಎಳ್ಳು ಉಂಡೆ, ಶೆಂಗಾ ಉಂಡೆ, ರವೆ ಉಂಡೆ, ಪಾಯಿಸ, ಕೇಸರಿ ಬಾತ್, ಚಿತ್ರನ್ನ ಸೇರಿದಂತೆ ಹಲವು ಭಕ್ಷ್ಯಗಳನ್ನು ನೈವೇದ್ಯ ಮಾಡಿದರು. ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೇ ಭಕ್ತರು ಮುಖ್ಯ ಬಸ್ ನಿಲ್ದಾಣದಿಂದ ದೇವಸ್ಥಾನಕ್ಕೆ ತುಂತುರು ಮಳೆಯಲ್ಲೆ 2 ಕಿ.ಮೀ. ನಡೆದು ಸಾಗಿದರು.
Nagara Panchami ಸೊರಬ ಪ್ರದೇಶದಲ್ಲಿ ಸಂಭ್ರಮದ ನಾಗರಪಂಚಮಿ ಆಚರಣೆ
Date:
