Saturday, December 6, 2025
Saturday, December 6, 2025

Madhu Bangarappa ಆರೈಕೆ ,ಅಂಧತ್ವ ಮುಕ್ತ ಶಿವಮೊಗ್ಗ ಜಿಲ್ಲೆ ಒಳ್ಳೆಯ ಅಭಿಯಾನ, ಮನೆಮನೆಗೆ ಭೇಟಿ ನೀಡಿ ಕಣ್ಣಿನ ತಪಾಸಣೆಯಾಗಲಿ – ಮಧು ಬಂಗಾರಪ್ಪ

Date:

Madhu Bangarappa ‘ಆರೈಕೆ’ : ಅಂಧತ್ವ ಮುಕ್ತ ಶಿವಮೊಗ್ಗ ಅಭಿಯಾನ ಒಂದು ಉತ್ತಮ ಕಾರ್ಯಕ್ರಮವಾಗಿದ್ದು ಜಿಲ್ಲೆಯಾದ್ಯಂತ ಯಶಸ್ವಿಯಾಗಲಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಹಾರೈಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಆರೈಕೆ : ಅಂಧತ್ವ ಮುಕ್ತ ಶಿವಮೊಗ್ಗ ಅಭಿಯಾನ ಕಾರ್ಯಕ್ರಮ ಹಾಗೂ ಗೃಹ ಆರೋಗ್ಯ ಯೋಜನೆ ಕುರಿತು ಕಾರ್ಯಾಗಾರ ಮತ್ತು ಆಶಾ ಕೈಪಿಡಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಆರೈಕೆ’ ಅಂಧತ್ವ ಮುಕ್ತ ಶಿವಮೊಗ್ಗ ಅಭಿಯಾನ ಬಹಳ ಮಹತ್ವವಾದ ಕಾರ್ಯಕ್ರಮ. ಮನೆ ಮನೆಗೆ ಭೇಟಿ ನೀಡಿ 18 ವರ್ಷ ಮೇಲ್ಪಟ್ಟ ಎಲ್ಲರಿಗೆ ಕಣ್ಣಿನ ತಪಾಸಣೆ ಮಾಡಲಾಗುತ್ತದೆ. ಚಿಕಿತ್ಸೆ ಅವಶ್ಯತೆ ಇದ್ದಲ್ಲಿ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ. ಸೊರಬದಲ್ಲಿ ಹಿಂದೆ ನಾನು ಇಂತಹ ಕಣ್ಣಿನ ತಪಾಸಣೆ-ಚಿಕಿತ್ಸೆ ಕುರಿತಾದ ಕಾರ್ಯಕ್ರಮ ಮಾಡಿದಾಗ ಬಹಳ ಯಶಸ್ವಿಯಾಗಿತ್ತು.
ಆರೋಗ್ಯ ಬಹಳ ಮುಖ್ಯ. ನಾವೆಲ್ಲ ನಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನಾವು ನಮ್ಮ ವಾಹನಗಳನ್ನು ಕಾಲ ಕಾಲಕ್ಕೆ ಸರ್ವಿಸ್ ಮಾಡಿಸ್ತಿವಿ. ಇಲ್ಲದಿದ್ದರೆ ಅವು ಕೈಕೊಡುತ್ತವೆ. ಹಾಗಿದ್ದ ಮೇಲೆ ಮನುಷ್ಯರಾದ ನಾವು ನಮ್ಮ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಸರ್ಕಾರ ಸಹ ಈ ನಿಟ್ಟಿನಲ್ಲಿ ಹೆಚ್ಚಿನ ನಿಗಾ ವಹಿಸುತ್ತಿದೆ ಎಂದ ಅವರು ಕಣ್ಣಿನ ಸಮಸ್ಯೆಗಳನ್ನು ತಿಳಿಯಲು ಮನೆ ಮನೆ ಭೇಟಿ ನೀಡಿ ತಪಾಸಣೆ ನಡೆಸುವ ಆಶಾ ಕಾರ್ಯಕರ್ತೆಯರಿಗೆ, ಶಂಕರ ಕಣ್ಣಿನ ಆಸ್ಪತ್ರೆ, ಮಣಿಪಾಲ ಆಸ್ಪತ್ರೆ, ಸುಬ್ಬಯ್ಯ ಆಸ್ಪತ್ರೆ ಸೇರಿದಂತೆ ಸಹಕರಿಸುತ್ತಿರುವ ಎಲ್ಲ ಆಸ್ಪತ್ರೆಗಳು, ವೈದ್ಯರು, ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.
ಕ್ಯಾನ್ಸರ್ ಪೀಡಿತ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶೀಘ್ರದಲ್ಲೇ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಶಾಲೆಯನ್ನು ಆರಂಭಿಸಲಾಗುವುದು. ಮಕ್ಕಳಿಗೆ ಅನುಕೂಲವಾಗುವಂತೆ ಊಟ, ವಸತಿ, ಶಿಕ್ಷಣ ನೀಡಲು ಕದ್ವಾಯಿ ಆಸ್ಪತ್ರೆಯಿಂದ 4 ಕಿ.ಮೀ. ದೂರದಲ್ಲಿ ಶಾಲೆ ಆರಂಭಿಸಲಾಗುವುದು. ಮಕ್ಕಳನ್ನು ನೋಡಿಕೊಳ್ಳುವ ಪೋಷಕರಿಗೆ ಸಹ ವಸತಿ ವ್ಯವಸ್ಥೆ ಮಾಡಲಾಗುವುದು ಎಂದರು.
ಶಾಸಕರಾದ ಎಸ್ ಎನ್ ಚನ್ನಬಸಪ್ಪ ಮಾತನಾಡಿ, ‘ಆರೈಕೆ’ ಸಮಾಜಕ್ಕೆ ಶಕ್ತಿ ನೀಡುವ ಕೆಲಸವಾಗಿದೆ. ಜನರು ಅನೇಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿರುವ ಇಂತಹ ಸಂದರ್ಭದಲ್ಲಿ ಮನೆ ಮನೆಗೆ ಆರೋಗ್ಯ ಕಾರ್ಯಕ್ರಮದ ಅವಶ್ಯಕತೆ ಇದೆ.
ಅಂಧತ್ವ ನಿವಾರಣೆಗಾಗಿ ಹಗಲು ರಾತ್ರಿ ಕೆಲಸ ಮಾಡಿದ ಡಾ.ಮೋದಿ ಯವರು ನಮಗೆಲ್ಲ ಮಾದರಿ. ಈ ಕಾರ್ಯಕ್ರಮ ಯಶಸ್ವಿಯಾಗಿ, ನಿರಂತರವಾಗಿ ನಡೆಯಲಿ. ಜೀವನ ಪಣಕ್ಕಿಟ್ಟು ಕೆಲಸ ಮಾಡುವ ಆಶಾ-ಅಂಗವಾಡಿ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ ಎಂದರು.
Madhu Bangarappa ವಿಧಾನ ಪರಿಷತ್ ಶಾಸಕರಾದ ಡಿ.ಎಸ್ ಅರುಣ್ ಮಾತನಾಡಿ ಕ್ಯಾನ್ಸರ್ ಪೀಡಿತ ಮಕ್ಕಳ ಶಾಲೆ ಆರಂಭಿಸುತ್ತಿರುವುದು ಅಭಿನಂದನೀಯ. ಜಿ.ಪಂ ಸಿಇಓ ರವರು ಅತ್ಯಂತ ಆಸಕ್ತಿ ವಹಿಸಿ ಆರೈಕೆಯಂತಹ ಉಪಯುಕ್ತ ಮತ್ತು ವಿನೂತನ ಚಟುವಟಿಕೆಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಗ್ಲೂಕೊಮಾ, ಪೊರೆ ಸೇರಿದಂತೆ ಇತರೆ ಕಣ್ಣಿನ ಸಮಸ್ಯೆಗಳ ಕುರಿತು ಜಾಗೃತಿ ಮುಖ್ಯ. ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮುಖ್ಯವಾಗಿದೆ. ಗ್ರಾ.ಪಂ ಗಳ ಮೂಲಕವೂ ಅರಿವು ಮೂಡಿಸಬೇಕಾಗಿದೆ.
ಕಣ್ಣಿಗೆ ಸಂಬAಧಿಸಿದ ಶೇ.80 ಸಮಸ್ಯೆಗಳನ್ನು ಗುಣಪಡಿಸಬಹುದು . ಸರ್ಕಾರ ಇವನ್ನು ಗುರುತಿಸಿ ಚಿಕಿತ್ಸೆ ನೀಡಲು ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಆಶಾ ಕಾರ್ಯಕರ್ತೆಯರ ಸಹಾಯ ಧನದ ಕುರಿತು ಸರ್ಕಾರ ಗಮನಿಸಬೇಕು. ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಚೆನ್ನಾಗಿ ಕೆಲಸ ನಿರ್ವಹಿಸುತಿದ್ದು ಅಕ್ಕ ಪಕ್ಕದ ಜಿಲ್ಲೆಗಳಿಂದಲೂ ಅನೇಕ ರೋಗಿಗಳು ಬರುತ್ತಾರೆ. ಇಲ್ಲಿನ ವೈದ್ಯರಿಗೆ ಅಗತ್ಯವಾದ ಸೌಲಭ್ಯಗಳು ದೊರಕಬೇಕು ಎಂದರು.
ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ಮಾತನಾಡಿ, ಇದೊಂದು ಅತ್ಯುತ್ತಮ ಕಾರ್ಯಕ್ರಮ. ಆರೋಗ್ಯವೇ ಒಂದು ಸಂಪತ್ತಾಗಿದ್ದು, ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರ ಜವಾಬ್ದಾರಿ ಹೆಚ್ಚಿದೆ. ನಿಮ್ಮ ಬಗ್ಗೆ ನಮಗೆ ಕಾಳಜಿ ಇದೆ. ಸರ್ಕಾರ ನಿಮ್ಮ ಜೊತೆ ಇದೆ ಎಂದ ಅವರು ಶಿಕ್ಷಣ ಸಚಿವರು ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಆರಂಭಿಸುತ್ತಿರುವ ಶಾಲೆ ಅತ್ಯಂತ ಅವಶ್ಯಕವಾಗಿದ್ದು, ಮಾದರಿಯಾಗಲಿದೆ ಎಂದರು.
ಡಿಎಲ್‌ಓ ಡಾ. ಕಿರಣ್ ಮಾತನಾಡಿ, ಅಂಧತ್ವ ಕಡಿಮೆ ಮಾಡಲು ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿದೆ. ಆದರೆ ಜೀವನ ಶೈಲಿಯ ಬದಲಾವಣೆಯಿಂದ ವಿವಿಧ ರೀತಿಯ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ.
ಆರೈಕೆ-ಅಂಧತ್ವ ಮುಕ್ತ ಅಭಿಯಾನ ಶಿವಮೊಗ್ಗದಿಂದಲೇ ಮೊದಲ ಬಾರಿಗೆ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದ ಮೂಲಕ ಅಂಧತ್ವ್ವದ ಬಗ್ಗೆ ಸಮಗ್ರವಾಗಿ ಆಶಾ ಕಾರ್ಯಕರ್ತೆಯರ ಮೂಲಕ ವಿವರಣೆ ಪಡೆಯಲಾಗುವುದು. ಬಳಿಕ ವೈದ್ಯರು ತಪಾಸಣೆ ಮಾಡಿ, ಸಣ್ಣ ಪುಟ್ಟ ತೊಂದರೆ ಇದ್ದರೆ, ಚಿಕಿತ್ಸೆ ನೀಡುತ್ತಾರೆ. ಶಸ್ತ್ರ ಚಿಕಿತ್ಸೆ ಸೇರಿದಂತೆ ಯಾವುದೇ ಚಿಕಿತ್ಸೆ ಇದ್ದರೂ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುವುದು. ಇದು ಈ ಕಾರ್ಯಕ್ರಮದ ಉದ್ದೇಶ. ಖಾಸಗಿ ಕಣ್ಣಿನ ಆಸ್ಪತ್ರೆಗಳ ಸಹಯೋಗ ಕೂಡ ಈ ಕಾರ್ಯಕ್ರಮಕ್ಕೆ ಇದೆ. ಆಶಾ ಕಾರ್ಯಕರ್ತೆಯರ ಕಾರ್ಯ ಮತ್ತು ಸಹಕಾರ ಪ್ರಮುಖವಾಗಿದೆ ಎಂದರು.
ಡಿಎಸ್‌ಓ ಡಾ. ನಾಗರಾಜ್ ನಾಯ್ಕ್ ಮಾತನಾಡಿ, ಸಾಂಕ್ರಾಮಿಕ ರೋಗಗಳು ಜನರನ್ನು ಹೆಚ್ಚಾಗಿ ಕಾಡುತ್ತಿದ್ದು ಪ್ರಸ್ತುತ ರೋಗ ನಿಯಂತ್ರಣಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಿದೆ. ಗುಣಮಟ್ಟದ ನೀರು, ಒಳ ಚರಂಡಿ ವ್ಯವಸ್ಥೆ ಸೇರಿದಂತೆ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.
2024 ರಲ್ಲಿ ಗೃಹ ಆರೋಗ್ಯ ಯೋಜನಾ ಕಾರ್ಯಕ್ರಮ ಸರ್ಕಾರ ರೂಪಿಸಿದ್ದು ಇದು ಎಲ್ಲ ಜಿಲ್ಲೆಗಳಲ್ಲಿ ಜಾರಿಗೊಂಡಿದೆ. ಸಕ್ಕರೆ ಕಾಯಿಲೆ ಮತ್ತು ಬಿಪಿ ಸೇರಿ 14 ಅಸಾಂಕ್ರಾಮಿಕ ಕಾಯಿಲೆಗಳಿಗೆ ಈ ಯೋಜನೆ ಅಡಿ ಚಿಕಿತ್ಸೆ ನೀಡಲಾಗುತ್ತದೆ. ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ 14 ಕಾಯಿಲೆಗಳ ಕುರಿತು ಮಾಹಿತಿ ನೀಡುತ್ತಾರೆ. ಅಡುಗೆ ಸಿಬ್ಬಂದಿಗಳಿಗೆ ಸ್ತನ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ನೀಡಬೇಕು ಎನ್ನುವುದು ಸರ್ಕಾರದ ಘನ ಉದ್ದೇಶವಾಗಿದೆ ಎಂದರು.
ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಲೆಮಾರಿಗಳ ಅಭಿವೃದ್ದಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ, ಕರ್ನಾಟಕ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ರವಿಕುಮಾರ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಮಾಜಿ ವಿಧಾನ ಪರಿಷತ್ ಶಾಸಕರಾದ ಆರ್ ಪ್ರಸನ್ನ ಕುಮಾರ್, ಜಿ.ಪಂ. ಸಿಇಓ ಹೇಮಂತ್ ಎನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಟರಾಜ್, ಇತರೆ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...