Shivaganga Yoga Center ಯೋಗ ಚಿಕಿತ್ಸೆಯು ಮನುಷ್ಯನ ದೈಹಿಕ, ಮಾನಸಿಕ ಅಸಮತೋಲನವನ್ನು ನಿವಾರಿಸುವ ಮೂಲಕ ಸರ್ವತೋಮುಖ ಸಮತೋಲನವನ್ನು ತಂದು ಆರೋಗ್ಯ ಸ್ಥಿರಗೊಳಿಸುವ ವಿದ್ಯೆಯಾಗಿದೆ ಎಂದು ಶಿಕ್ಷಣ ಇಲಾಖೆ ಯೋಗ ಶಿಕ್ಷಕ, ಉಪನ್ಯಾಸಕ ಸಿ ಆರ್ ಅಶ್ವಿನ್ ಹೇಳಿದರು.
ಶ್ರೀ ಶಿವಗಂಗಾ ಯೋಗ ಕೇಂದ್ರದ ಕಲ್ಲಹಳ್ಳಿಯಲ್ಲಿ ಶ್ರೀ ಶಿವಗಂಗಾ ಯೋಗ ಶಿಕ್ಷಕರಿಗೆ ಆಯೋಜಿಸಿದ್ದ ತರಬೇತಿ ಹಾಗೂ ಪುನಶ್ಚೇತನ ಕಾರ್ಯಗಾರದಲ್ಲಿ ಮಾತನಾಡಿ, ಯೋಗಾಭ್ಯಾಸದ ಬಲವು ಸಮೃದ್ಧ ಆರೋಗ್ಯ ಕೊಡುತ್ತದೆ. ರೋಗವನ್ನು ದೂರ ಮಾಡುವ ಜತೆಯಲ್ಲಿ ರೋಗ ಬರದಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ಯೋಗವು ಆರೋಗ್ಯ ಸಂವರ್ಧಕ, ರೋಗ ನಿವಾರಕ ಮತ್ತು ರೋಗ ನಿರೋಧಕ ಹೀಗೆ ಯೋಗಕ್ಕೆ ನಾನಾ ಆಯಾಮಗಳು ಉಂಟು ಎಂದು ತಿಳಿಸಿದರು.
ಯೋಗ ಎಂದರೆ ಒಂದು ವ್ಯಾಯಾಮ ಅಲ್ಲ, ಅದು ನಮ್ಮ ಮನಸ್ಸುಗಳನ್ನು ಪರಿಶುದ್ಧಿಗೊಳಿಸುವುದು. ಸಕಾರಾತ್ಮಕವಾದ ಭಾವನೆಗಳನ್ನು ಮೂಡಿಸುವುದೇ ಯೋಗ ಎಂದರು.
ಯೋಗಾಚಾರ್ಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿ.ವಿ.ರುದ್ರಾರಾಧ್ಯ ಮಾತನಾಡಿ, ಯೋಗ, ಪ್ರಾಣಾಯಾಮ, ಧ್ಯಾನಕ್ಕೆ ತನ್ನದೇ ಆದ ಒಂದು ವೈಚಾರಿಕತೆ ಇದೆ. ಸರಿಯಾದ ರೀತಿಯಲ್ಲಿ ಯೋಗಾಭ್ಯಾಸ ಮಾಡಬೇಕು. ಒಂದು ವರ್ಷ ನಡೆಯುವ ತರಬೇತಿ ಶಿಬಿರದಲ್ಲಿ ಎಲ್ಲರೂ ಸರಿಯಾಗಿ ಭಾಗವಹಿಸಿ ಅಭ್ಯಾಸ ಮಾಡಬೇಕು ಎಂದು ಹೇಳಿದರು.
ಶಿವಗಂಗಾ ಯೋಗ ಕೇಂದ್ರದ ಟ್ರಸ್ಟ್ ನ ಟ್ರಸ್ಟಿ ಹಾಲಪ್ಪ ಮಾತನಾಡಿ, ಸಮಾಜದ ಹಾಗೂ ಸಾರ್ವಜನಿಕರ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಶ್ರಮಿಸುತ್ತಿರುವ ಏಕೈಕ ಕೇಂದ್ರ ಶಿವಗಂಗಾ ಯೋಗ ಕೇಂದ್ರ. ಈಗಾಗಲೇ ಶಿವಮೊಗ್ಗದ 38 ಶಾಖೆಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಂಜೆ ಉಚಿತ ಯೋಗ ಶಿಕ್ಷಣ, ಪ್ರಾಣಾಯಾಮ, ಧ್ಯಾನ ಹಾಗೂ ಆರೋಗ್ಯ ಮಾಹಿತಿಗಳನ್ನು ನೀಡುತ್ತಿದೆ ಎಂದರು.
Shivaganga Yoga Center ವೇದಿಕೆಯಲ್ಲಿ ಟ್ರಸ್ಟ್ ಪೋಷಕರಾದ ಎಂ.ಪಿ.ಆನಂದಮೂರ್ತಿ, ಬಾಳೆಕಾಯಿ ಮೋಹನ್, ಅಡಿಗ, ಸುರೇಶ್, ಹೂವೇಗೌಡ, ದೇವೇಂದ್ರಪ್ಪ, ಯೋಗ ಶಿಕ್ಷಕ ಜಿ.ಎಸ್.ಓಂಕಾರ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಜಿ.ವಿಜಯಕುಮಾರ್ ಹಾಗೂ ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
