Karnataka Police Champion ರಾಷ್ಟ್ರೀಯ ಮಟ್ಟದ ಪೊಲೀಸ್ ಕ್ರೀಡಾ ಕೂಟದಲ್ಲಿ ಕರ್ನಾಟಕ ಪೊಲೀಸ್ ಚಾಂಪಿಯನ್ ಆಗಿ ಹೊರ ಹೊಮ್ಮಬೇಕು. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಉತ್ತೇಜನವನ್ನು ನೀಡಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.
ಕೋಮಂಗಲದ ಕೆಎಸ್‌ಆರ್‌ಪಿ ಕ್ರೀಡಾಂಗಣದಲ್ಲಿ ನಡೆದ ‘ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2024 ಸಮಾರೋಪ ಸಮಾರಂಭ’ದಲ್ಲಿ ಭಾಗವಹಿಸಿ, ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕ್ರೀಡೆಯಲ್ಲಿ ಭಾಗವಹಿಸುವವರಿಗೆ ತಯಾರಿ ಬಹಳ ಮುಖ್ಯವಾಗುತ್ತದೆ ಅದಕ್ಕಾಗಿ ವಿಶೇಷ ತರಬೇತಿಯನ್ನು ನೀಡುವಂತೆ ಇಲಾಖೆಯ ಮುಖ್ಯಸ್ಥರಿಗೆ ಸೂಚಿಸುತ್ತೇನೆ. ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಚಾಂಪಿಯನ್ ಗಳಾಗಬೇಕು. ತನಿಖೆಯಲ್ಲಿ ಕರ್ನಾಟಕ ಪೊಲೀಸ್ ಬೆಸ್ಟ್ ಪೊಲೀಸ್ ಎಂದು ಹೇಳುತ್ತಾರೆ. ಕ್ರೀಡೆಯಲ್ಲಿಯೂ ಕೂಡ ಕರ್ನಾಟಕ ಪೊಲೀಸ್ ಬೆಸ್ಟ್ ಎಂದು ಹೇಳುವಂತಾಗಬೇಕು ಎಂದರು.
ಮುಖ್ಯಮಂತ್ರಿಯವರು ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಶೇ. 3 ರಷ್ಟು ಮೀಸಲಾತಿಯನ್ನು ಕಲ್ಪಿಸಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಬೇರೆ ಯಾವ ರಾಜ್ಯಗಳು ಸಹ ಇಷ್ಟೊಂದು ಮೀಸಲಾತಿಯನ್ನು ನೀಡಿಲ್ಲ. ಕೆಎಸ್‌ಆರ್‌ಪಿ ಕ್ರೀಡಾಂಗಣ ನವೀಕರಣಗೊಳಿಸಲು 3 ಕೋಟಿ ರೂ. ಅನುದಾನ ನೀಡಲಾಗಿದೆ. ಮುಂದಿನ ವರ್ಷದ ಕ್ರೀಡಾಕೂಟದ ವೇಳೆಗೆ ಸಿಂಥೆಟಿಕ್ ಟ್ರ್ಯಾಕ್ ಸಿದ್ಧವಾಗಲಿದೆ ಎಂದು ಹೇಳಿದರು.
ಪೊಲೀಸ್ ಇಲಾಖೆಗೆ ಕ್ರೀಡಾ ಚಟುವಟಿಕೆಗಳು ಬಹಳ ಮುಖ್ಯ. ಆತ್ಮಸ್ಥೈರ್ಯ, ದೈಹಿಕ ಸದೃಢತೆಯನ್ನು ಹೆಚ್ಚಿಸುತ್ತದೆ. ನಮ್ಮ ಜೀವನದಲ್ಲಿ ಸೋಲು-ಗೆಲುವುಗಳನ್ನು ಸರಿಸಮಾನವಾಗಿ ತೆಗೆದುಕೊಳ್ಳಲು ಕ್ರೀಡೆ ಸ್ಪೂರ್ತಿಯಾಗುತ್ತದೆ. ಕ್ರೀಡಾಕೂಟ ನಿಮ್ಮೆಲ್ಲರ ಆತ್ಮಸ್ಥೈರ್ಯ ಹೆಚ್ಚಿಸಲಿ ಎಂದು ಪೊಲೀಸ್ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
Karnataka Police Champion ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಎಂ.ಎ. ಸಲೀಂ ಅವರು ರಾಜ್ಯದಲ್ಲಿ ಸಮರ್ಥವಾದ ಪೊಲೀಸ್ ಪಡೆ ಕಟ್ಟಬೇಕು ಎಂಬ ಇಚ್ಛೆ ಹೊಂದಿದ್ದಾರೆ. ಕಳೆದ ಎರಡು ದಿನದಿಂದ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ಪೊಲೀಸ್ ದೂರದೃಷ್ಟಿಯ ಬಗ್ಗೆ ಚರ್ಚಿಸಲಾಯಿತು. ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ಪೊಲೀಸ್ ಇಲಾಖೆ ಜನಸಮುದಾಯದ ಜೊತೆ ಹೇಗೆ ಕೆಲಸ ಮಾಡಬೇಕು ಎಂಬುದು ಸೇರಿದಂತೆ ಹಲವು ಮಹತ್ವದ ವಿಚಾರಗಳು ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಕೆಎಸ್‌ಆರ್‌ಪಿ ಎಡಿಜಿಪಿ ಉಮೇಶ್ ಕುಮಾರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಕೆಎಸ್‌ಆರ್‌ಪಿ ಐಜಿಪಿ ಸಂದೀಪ್ ಪಾಟೀಲ್ ಮುಂತಾದ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
