Rotary Shivamogga ದೇಶ ಆರ್ಥಿಕವಾಗಿ ಪ್ರಗತಿ ಸಾಧಿಸುವಲ್ಲಿ ಚಿಟ್ ಫಂಡ್ ಉದ್ಯಮದ ಕೊಡುಗೆ ಅಪಾರವಾಗಿದೆ ಎಂದು ಸಹ್ಯಾದ್ರಿ ಚಿಟ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಭಟ್ ಹೇಳಿದರು.
ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿಟ್ ಫಂಡ್ ಉದ್ಯಮದ ಕುರಿತು ಮಾತನಾಡಿ, ಜಿಎಸ್‌ಟಿ ತೆರಿಗೆ ರೂಪದಲ್ಲಿ ಹಾಗೂ ಆದಾಯ ತೆರಿಗೆ ರೂಪದಲ್ಲಿ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ಸರ್ಕಾರಕ್ಕೆ ಪಾವತಿಸುತ್ತಿದೆ. ಆರ್ಥಿಕ ದುರ್ಬಲರಿಗೆ, ಶ್ರೀಸಾಮಾನ್ಯರಿಗೆ, ನೌಕರರಿಗೆ ಹಾಗೂ ಉದ್ಯಮಿಗಳಿಗೆ ಚಿಟ್ ಫಂಡ್ ನಿಂದ ತುಂಬಾ ಅನುಕೂಲಕರವಾಗಿದೆ. ಲಕ್ಷಾಂತರ ಜನರಿಗೆ ಉದ್ಯೋಗ ಅವಕಾಶವನ್ನು ನೀಡಿದೆ ಎಂದು ತಿಳಿಸಿದರು.
ಸಹ್ಯಾದ್ರಿ ಚಿಟ್ಸ್ ಸಂಸ್ಥೆಯ ಮಾರುಕಟ್ಟೆ ನಿರ್ದೇಶಕ ಶಿವರಾಜ್ ಉಡುಗಣಿ ಮಾತನಾಡಿ, ಚಿಟ್ ಫಂಡ್ ಹೇಗೆ ನಡೆಯುತ್ತದೆ ಮತ್ತು ಇದರಿಂದ ಆಗುವ ಉಪಯೋಗಗಳ ಬಗ್ಗೆ ವಿವರವಾದ ಮಾಹಿತಿಯನ್ನು ಮತ್ತು ರಿಜಿಸ್ಟರ್ ಚಿಟ್ ಫಂಡ್ ಗಳಿಗೂ ಹಾಗೂ ಅನ್ ರಿಜಿಸ್ಟರ್ ಫಂಡ್ ಗಳಿಗೂ ಇರುವ ವ್ಯತ್ಯಾಸಗಳ ಬಗ್ಗೆ ವಿವರಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಸದಸ್ಯರ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದರು. ಚಿಟ್ ಫಂಡ್ ಉಪಯೋಗಗಳ ಮಾಹಿತಿಯನ್ನು ಯುವ ಜನತೆಗೆ ಹಂಚಲು ಕೋರಿದರು.
Rotary Shivamogga ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಮಾತನಾಡಿ, ನೋಂದಾಯಿತ ಚಿಟ್ ಫಂಡ್ ಸಂಸ್ಥೆಗಳಲ್ಲಿ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಉದ್ಯಮದಲ್ಲಿ ಯಶಸ್ಸು ಸಾಧಿಸಬೇಕು. ಸರಿಯಾದ ಮಾಹಿತಿಯನ್ನು ಪರಿಣಿತರಿಂದ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಜಿ.ವಿಜಯಕುಮಾರ್, ವಸಂತ ಹೋಬಳಿದಾರ್, ನಾಗರಾಜ್ ಹಾಗೂ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಸದಸ್ಯರು ಹಾಜರಿದ್ದರು.
