World No Tobacco Day ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಮಲೆನಾಡು ಪ್ರದೇಶದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಎರಡು ಪ್ರತ್ಯೇಕ ಘಟನೆಗಳಲ್ಲಿ ಎರಡು ಅಮೂಲ್ಯ ಜೀವಗಳನ್ನು ಉಳಿಸಿದ್ದಾರೆ.
ಈ ಎರಡು ಘಟನೆಗಳು ತಂಬಾಕು ಸೇವನೆಯ ಅಪಾಯದ ಕುರಿತು ಅರಿವು ಮೂಡಿಸಿದೆ. ಈ ಎರಡೂ ಪ್ರಕರಣಗಳು ಆರಂಭಿಕ ಹಂತದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುವ ಮಹತ್ವವನ್ನು ತಿಳಿಸಿದೆ.
ಏನಿವೂ ಎರಡು ಪ್ರಕರಣ ನೋಡೋಣ.
ರಾತ್ರಿಯಿಡೀ ಖೈನಿ: ಹಲ್ಲು ನೋವಿಗೆ ಉಪಾಯವೆಂದರೆ ಜೀವವೇ ಹೋಗ್ತಿತ್ತು!
48 ವರ್ಷದ ಅಂಜಲಿ (ಹೆಸರು ಬದಲಾಯಿಸಲಾಗಿದೆ), ಮಲೆನಾಡು ಪ್ರದೇಶದವರು, 15 ವರ್ಷಗಳಿಂದ ತಮ್ಮ ದಿನ ನಿತ್ಯದ ಕೆಲಸದ ಬಳಿಕ ತಮ್ಮ ಕೆಳಗಿನ ಒಸಡಿನ ಒಳಗೆ ಖೈನಿ ಇಟ್ಟುಕೊಂಡು ಮಲಗುವ ಅಭ್ಯಾಸ ರೂಡಿಸಿಕೊಂಡಿದ್ದರು ಇದು ಕನಿಷ್ಠ ಆರು ತಾಸು ಬಾಯಲ್ಲೇ ಇರುತ್ತಿತ್ತು. ಅವರಿಗೆ ಅದೊಂದು ವ್ಯಸನವೆಂದು ತಿಳಿದಿರಲಿಲ್ಲ ಬದಲಿಗೆ ಹಲ್ಲು ನೋವಿಗೆ ಮದ್ದು ಎಂದು ಅವರು ಭಾವಿಸಿದ್ದರು.
ಒಂದು ದಿನ ಅಂಜಲಿಯವರ ಬಾಯಿಯಲ್ಲಿ ಒಂದು ಚಿಕ್ಕ ಗಾಯ ಕಾಣಿಸಿಕೊಂಡಿತು. ಅದರಿಂದ ರಕ್ತಸ್ರಾವ ಆಗಲಿಲ್ಲ, ಹೆಚ್ಚು ನೋವುಂಟುಮಾಡಲಿಲ್ಲ. ಆದರೆ ಏನೋ ವಿಭಿನ್ನ ಅನುಭವಾಗಿತ್ತು. ಅವರು ತಕ್ಷಣ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲಿ ತಲೆ ಮತ್ತು ಕುತ್ತಿಗೆಯ ಆಂಕೊ-ಸರ್ಜನ್ ಡಾ. ದೀಪಕ್ ಸಿ. ಕಿತ್ತೂರ್ ಅವರನ್ನು ಭೇಟಿಯಾದರು, ಇವರನ್ನು ಪರೀಕ್ಷಿಸಿದ ಡಾ ಕಿತ್ತೂರ ಅವರು ಆ ಗಾಯ ಇನ್ನೂ ಕ್ಯಾನ್ಸರ್ ಆಗಿ ಬದಲಾಗಿರಲಿಲ್ಲವಾಗಿದ್ದರಿಂದ ತುರ್ತಾಗಿ ಶಸ್ತ್ರಚಿಕಿತ್ಸೆಯ ಮೂಲಕ ಅವರ ಬಾಯಲ್ಲಿ ಉಂಟಾಗಿದ್ದ ಕೆಂಪು-ಬಿಳಿ ತೇಪೆಗಳನ್ನುತೆಗೆದು ಹಾಕಿದ್ದಾರೆ.
ಈ ತೇಪೆಗಳು ಕ್ಯಾನ್ಸರ್ ಆರಂಭಕ್ಕೂ ಮೊದಲಿನ ಲಕ್ಷಣವಾಗಿತ್ತು.
“ಅವರು ಸರಿಯಾದ ಸಮಯಕ್ಕೆ ನಮ್ಮ ಬಳಿಗೆ ಬಂದರು. ಇನ್ನೂ ಕೆಲವು ತಿಂಗಳು ತಡ ಮಾಡಿದ್ದರೆ ಅದು ಬಾಯಿಯ ಕ್ಯಾನ್ಸರ್ ಆಗಿ ಬದಲಾಗಬಹುದಿತ್ತು. ಬಾಯಿಯಲ್ಲಿ ಆರು ಗಂಟೆಗಳ ಕಾಲ ಖೈನಿಯನ್ನು ಇಟ್ಟುಕೊಳ್ಳುವುದು ಅಂದರೆ ಒಂದು ದಿನಕ್ಕೆ 30 ಗುಟ್ಕಾ ಪ್ಯಾಕೆಟ್ ಗಳನ್ನು ಜಗಿಯುವದಕ್ಕೆ ಸಮಾನ” ” ಎಂದು ಡಾ. ಕಿತ್ತೂರ್ ಹೇಳಿದರು.
ಅಂಜಲಿಯವರು ಈಗ ತಂಬಾಕಿನ ಚಟವನ್ನು ಸಂಪೂರ್ಣವಾಗಿ ಬಿಟ್ಟಿದ್ದಾರೆ. ಅವರು ಈಗ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ, ಗಾಯಗಳಿಂದ ಮುಕ್ತರಾಗಿದ್ದಾರೆ ಮತ್ತು ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದರು.
ಪ್ರಕರಣ 2 –
World No Tobacco Day 26 ವರ್ಷದ ಯುವತಿಯೊಬ್ಬರು ಆಸ್ಪತ್ರೆಗೆ ಬಂದಾಗ ದವಡೆಯಲ್ಲಿ ಗಟ್ಟಿತನ ಮತ್ತು ಬಾಯಿ ತೆರೆಯಲು ಕಷ್ಟವಾಗುವ ಲಕ್ಷಣಗಳನ್ನು ಹೇಳಿದರು. ಅವರು ಆಗಾಗ್ಗಗುಟ್ಕಾ ಜಗಿಯುತ್ತಿದ್ದರು. ಇವರು ಸಹ ಊಟದ ನಂತರ ಇದನ್ನು ಬಾಯಲ್ಲಿ ಇಟ್ಟುಕೊಂಡು ಮಲಗುತ್ತಿದ್ದರು.
ಅವರು ಆಸ್ಪತ್ರೆಗೆ ಬಂದಾಗ ಅವರಿಗೆ ಓರಲ್ ಸಬ್‌ಮ್ಯೂಕಸ್ ಫೈಬ್ರೋಸಿಸ್ (ಓಎಸ್ಎಂಎಫ್) ಆಗಿದೆ ಎಂದು ತಿಳಿದುಬಂತು. ಓಎಸ್‌ಎಂಎಫ್ ಅಂದರೆ ಇದೊಂದು ದೀರ್ಘಕಾಲಿಕ ವಾಗಿ ಹರಡುತ್ತಾ ಹೋಗುವ ಸ್ಥಿತಿಯಾಗಿದ್ದು, ಬಾಯಿಯ ಒಳಗಿನ ಮೃದು ಅಂಗಾಂಶಗಳನ್ನು ದಪ್ಪವಾಗಿಸುತ್ತದೆ, ಬಾಯಿಯ ಚಲನೆಯನ್ನು ಕಡಿಮೆ ಮಾಡುತ್ತದೆ ಮತ್ತು ಚಿಕಿತ್ಸೆ ನೀಡದಿದ್ದರೆ ಸಾಮಾನ್ಯವಾಗಿ ಬಾಯಿಯ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಈಗ ಅವರು ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ ಮತ್ತು ಕ್ರಮೇಣ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದಾರೆ. ಈ ಸ್ಥಿತಿ ಗುಟ್ಕಾ ತಿನ್ನುವರರಲ್ಲಿ ಸಾಮಾನ್ಯವಾಗಿ ಉಂಟಾಗುತ್ತದೆ ಎಂದು ಡಾ.ಕಿತ್ತೂರ ಅವರು ತಿಳಿಸಿದರು.
ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಈ ಎರಡೂ ಪ್ರಕರಣಗಳು ಸಾಮಾನ್ಯವಲ್ಲ. ಗ್ರಾಮೀಣ ಮತ್ತು ಸಣ್ಣ ನಗರಗಳಲ್ಲಿ ಇಂತಹ ಪ್ರಕರಣಗಳು ಸಾಮಾನ್ಯವಾಗಿವೆ. ಸಂಪ್ರದಾಯದ ಹೆಸರಿನಲ್ಲಿ, ನೋವು ನಿವಾರಣೆಯ ತಪ್ಪು ನಂಬಿಕೆಯಲ್ಲಿ ಮತ್ತು ಧೂಮಪಾನ ಹೊರತಾದ ತಂಬಾಕಿನ ಬಳಕೆ ಸಾಮಾನ್ಯವಾಗಿದೆ ಎಂದರು.
ಆರಂಭಿಕ ಹಂತದಲ್ಲಿ ರೋಗ ಪತ್ತೆ ಮುಖ್ಯ
ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಡಾ. ಕಿತ್ತೂರ್ ಮತ್ತು ಅವರ ತಂಡವು ಆರಂಭಿಕ ಹಂತದಲ್ಲಿಯೇ ರೋಗನಿರ್ಣಯ ಮಾಡುವ ಮೂಲಕ ಮತ್ತು ಅರಿವನ್ನು ಉಂಟು ಮಾಡುವ ಮೂಲಕ ಶ್ರಮಿಸುತ್ತಿದ್ದಾರೆ. “ನಾವು ಇಂತಹ ಪ್ರಕರಣಗಳನ್ನು ನೋಡುತ್ತಲೆ ಇರುತ್ತೇವೆ. ಸಕಾಲಿಕ ಚಿಕಿತ್ಸೆ ಮತ್ತು ಕಟ್ಟುನಿಟ್ಟಾದ ಫಾಲೋ- ಅಪ್ ನಿಂದ, ಇಂತಹ ಪ್ರಕರಣಗಳಲ್ಲಿ ನಾವು ಶೇ.100ರಷ್ಟು ಜೀವ ಉಳಿಸಿದ ಸಾಧನೆ ಮಾಡಿದ್ದೇವೆ” ಎಂದು ಡಾ. ಕಿತ್ತೂರ್ ಹೇಳುತ್ತಾರೆ.
ಈ ವರ್ಷದ ವಿಶ್ವ ತಂಬಾಕು ರಹಿತ ದಿನಾಚರಣೆ ಸಂದರ್ಭದಲ್ಲಿ ಈ ಎರಡು ಪ್ರಕರಣಗಳು ತಂಬಾಕು ಬಿಡಲು ದೊಡ್ಡ ಸಂದೇಶ ನೀಡಿವೆ. ಕೆಲವು ಅಭ್ಯಾಸಗಳು ಸರಳ ಚಟವಾಗಿ ಪ್ರಾರಂಭವಾಗಿ ಸದ್ದಿಲ್ಲದೆ ಜೀವನವನ್ನು ಬದಲಾಯಿಸುವ ಗಂಭೀರ ರೋಗವಾಗಬಹುದು. ಆದರೆ ಸರಿಯಾದ ಜ್ಞಾನ, ಚಿಕಿತ್ಸೆ ಮತ್ತು ನೆರವಿನ ಮೂಲಕ ಅಪಾಯಗಳಿಂದ ಪಾರಾಗಬಹುದಾಗಿದೆ ಎಂದರು.
