L.B. and S.B.S. College ಕಠಿಣ ಪರಿಶ್ರಮ, ನಿರಂತರ ಓದು ಹಾಗೂ ಗಂಭೀರ ಪ್ರಯತ್ನದಿಂದ ಸಾಧನೆಯ ಗುರಿ ತಲುಪಲು ಸಾಧ್ಯ ಎಂದು ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಅಪರ ಆಯುಕ್ತ ಬಸವರಾಜ ಕೆ.ಎಸ್.ಹೇಳಿದರು.
ಸಾಗರ ಪಟ್ಟಣದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಎಲ್.ಬಿ.ಎಂಡ್ ಎಸ್.ಬಿ.ಎಸ್. ಕಾಲೇಜಿನ ದೇವರಾಜ ಅರಸು ಕಲಾಕ್ಷೇತ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿದ್ಯಾರ್ಥಿ ವೇದಿಕೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ನಾವು ದೊಡ್ಡ ಗುರಿಯನ್ನಿಟ್ಟುಕೊಂಡು ಮುಂದೆ ಸಾಗಬೇಕು. ಕೊನೆಗೆ ಡಿ.ಸಿ. ಅಲ್ಲವಾದರೆ ಎಫ್.ಡಿ.ಸಿ.ಯಾದರೂ ಆಗಬಹುದು ಎಂದರು.
ಕೆಪಿಎಸ್‌ಸಿ ಯಂಥ ಪರೀಕ್ಷೆಗಳನ್ನು ಪಾಸು ಮಾಡಿ ಆಯ್ಕೆಯಾಗುವ ಸಂದರ್ಭದಲ್ಲಿ ನಮ್ಮ ಪ್ರಯತ್ನ ಗಂಭೀರವಾಗಿರಬೇಕು. ರಾಜಕೀಯ ಪ್ರಭಾವವೋ, ಹಣದ ಬಲವೋ ಇದೆ ಎಂದು ಓದುವ ಪ್ರಯತ್ನದಿಂದ ಹಿಂದೆ ಸರಿಯಬಾರದು. ಲಿಖಿತ ಪರೀಕ್ಷೆಗಳನ್ನು ಚೆನ್ನಾಗಿ ಮಾಡಿದರೆ ಯಾವ ಪ್ರಭಾವವೂ, ಹಣದ ಅಗತ್ಯವೂ ಬೇಡ. ಎಸ್ಸೆಸ್ಸೆಲ್ಸಿ, ಪಿಯುಸಿ ತರಗತಿಗಳಲ್ಲಿ ಕಡಿಮೆ ಅಂಕ ಬಂದರೆ ಭವಿಷ್ಯವೇ ಇಲ್ಲ ಎಂಬ ಮನಸ್ಥಿತಿ ಬೆಳೆಸಿಕೊಳ್ಳಬಾರದು. ಇದು ಒಂದು ಹಂತ ಮಾತ್ರ. ಮುಂದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಹೆಚ್ಚಿನ ಅವಕಾಶವಿದೆ. ಹೆಚ್ಚು ಹೆಚ್ಚು ಓದುವ ಮೂಲಕ ಹೆಚ್ಚಿನ ಜ್ಞಾನ ಪಡೆದುಕೊಳ್ಳಬೇಕು ಎಂದವರು ಸಲಹೆ ನೀಡಿದರು.
ಜೀವನದಲ್ಲಿ ಏನೂ ಇಲ್ಲದವರೂ ದೊಡ್ಡ ಸಾಧನೆ ಮಾಡಿದ ಉದಾಹರಣೆಗಳು ನಮ್ಮ ಮುಂದಿವೆ. ಹೆಚ್ಚು ಅಂಕ ಪಡೆದವರಿಗಿಂತ ಕಡಿಮೆ ಅಂಕ ಪಡೆದು ದೊಡ್ಡ ಸಾಧನೆ ಮಾಡಿದವರಿದ್ದಾರೆ. ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಯ ಅಧಿಕಾರ ಸಿಕ್ಕಾಗ ಸಾಮಾನ್ಯ ಜನರಿಗೆ ಸಹಾಯ ಮಾಡಬೇಕು. ಯಾವುದೇ ಅಧಿಕಾರ ಶಾಶ್ವತವಲ್ಲ. ಸಿಕ್ಕ ಅಧಿಕಾರವನ್ನು ಇರುವ ಮಿತಿಯಲ್ಲಿ ನೊಂದವರ ನೆರವಿಗೆ ಬಳಸಿಕೊಳ್ಳಬೇಕು ಎಂದವರು ಕಿವಿಮಾತು ಹೇಳಿದರು.
L.B. and S.B.S. College ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಆರ್.ಜಯಂತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಕಾಲೇಜು ರಾಜ್ಯದಲ್ಲೇ ಹೆಸರು ಮಾಡಿದ ವಿದ್ಯಾಸಂಸ್ಥೆ. ಕವಿ ಗೋಪಾಲಕೃಷ್ಣ ಅಡಿಗರು, ಚಂದ್ರಶೇಖರ ಕಂಬಾರರು, ಜಿ.ಕೆ.ಗೋವಿಂದರಾವ್ ಮುಂತಾದವರು ಈ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ 60 ವರ್ಷಗಳಲ್ಲಿ 60 ಸಾವಿರ ಪದವೀಧರರು ಬದುಕು ಕಟ್ಟಿಕೊಂಡಿದ್ದಾರೆ. ಅಡಿಗರ ಕಾಲದಲ್ಲಿ ವಿದ್ಯಾರ್ಥಿಗಳೇ ಬರೆದು ಪ್ರಕಟಿಸುತ್ತ ಬಂದಿರುವ `ಅನ್ವೇಷಣೆ’ ಪುಸ್ತಕ ಈಗಲೂ ಬರುತ್ತಿರುವುದು ಶ್ಲಾಘನೀಯ ಸಂಗತಿ. ಈ ಸಲದ ಅನ್ವೇಷಣೆಯಲ್ಲಿ ವಿದ್ಯಾರ್ಥಿಗಳು ಬರೆದ ಪರಿಸರ ಸಂಬಂಧಿ ಲೇಖನ ಸೇರಿದಂತೆ ಹಲವು ಪ್ರಬುದ್ಧ ಲೇಖನಗಳಿವೆ. ಪಠ್ಯೇತರ ಓದು ಕೂಡ ವಿದ್ಯಾರ್ಥಿಗಳಿಗೆ ಅಗತ್ಯವಿದೆ. ಪಠ್ಯದಿಂದ ಅಂಕ ಮಾತ್ರ ಪಡೆದುಕೊಳ್ಳಬಹುದು. ಆದರೆ ಪಠ್ಯೇತರ ಓದಿನಿಂದ ವ್ಯಕ್ತಿತ್ವ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.
ವಿದ್ಯಾರ್ಥಿಗಳು ಗಾಂಧಿ, ಬಸವಣ್ಣ, ಅಂಬೇಡ್ಕರ್, ವಿವೇಕಾನಂದರ ಬಗ್ಗೆ ತಿಳಿದುಕೊಳ್ಳಬೇಕು. ಇವರು ದೇಶದ ಜನರಿಗೆ ಸ್ಫೂರ್ತಿ ಹಾಗೂ ಮಾರ್ಗದರ್ಶಕರು. ಗಾಂಧೀಜಿಯವರ ಆತ್ಮಚರಿತ್ರೆಯನ್ನು ಪ್ರತಿಯೊಬ್ಬರೂ ಓದಬೇಕು. ಈ ಮಹಾನ್ ನಾಯಕರ ಚರಿತ್ರೆ ಓದಿನಿಂದ ನಮ್ಮ ವ್ಯಕ್ತಿತ್ವ ಬದಲಾಗುತ್ತದೆ. ನಮ್ಮ ವ್ಯಕ್ತಿತ್ವ ನಿರ್ಮಾಣಕ್ಕೆ ಇಂಥವರ ಕುರಿತ ಒದು ಮುಖ್ಯವಾಗುತ್ತದೆ ಎಂದು ಸಲಹೆ ನೀಡಿದರು. ನಮ್ಮ ದೇಶ ಅನೇಕ ಜಾತಿ, ಮತ, ಪಂಥ, ಸಂಸ್ಕೃತಿ, ಸಂಪ್ರದಾಯಗಳಿಂದ ಕೂಡಿದೆ. ಇವೆಲ್ಲವನ್ನೂ ಮೀರಿ ಮಾನವೀಯತೆಯಲ್ಲಿ ನಾವು ಬದುಕಬೇಕು ಎಂದರು.
ಇದೇ ಸಂದರ್ಭದಲ್ಲಿ ಕಾಲೇಜಿಗೆ ೪೫ ಲಕ್ಷ ರೂ. ಆರ್ಥಿಕ ನೆರವು ನೀಡಿದ ಬೆಂಗಳೂರಿನ ಲಿಂಡೆ ಇಂಡಿಯಾ ಪ್ರೆ. ಲಿ. ಕಂಪನಿಯ ಮ್ಯಾನೇಜರ್ ಮನೀಷ್ ಬಿ.ಹೆಬ್ಸೆ ಮತ್ತು ಈ ಬಾರಿಯ ಯುಪಿಎಸ್‌ಸಿ ಯಲ್ಲಿ ರ‍್ಯಾಂಕ್ ವಿಜೇತ ವಿಕಾಸ್ ವಿ. ಹಾಗೂ ಬೆಂಗಳೂರಿನ ಅಪರ ಆಯುಕ್ತ ಬಸವರಾಜ ಕೆ.ಎಸ್. ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಅಭಿನಂದಿತರು ಹಾಗೂ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎಂ.ಶಿವಕುಮಾರ್ ಮಾತನಾಡಿದರು. ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ವಿಷಯಗಳ ದತ್ತಿ ಬಹುಮಾನ, ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
L.B. and S.B.S. College ನಿರಂತರ ಓದು & ಗಂಭೀರ ಪ್ರಯತ್ನದಿಂದ ಗುರಿ ಸಾಧನೆ – ಕೆ.ಎಸ್.ಬಸವರಾಜ್
Date:
