Dr. Rajkumar ವರನಟ ನಟಸಾರ್ವಭೌಮ ಕನ್ನಡದ ಮೇರು ನಟ ಡಾಕ್ಟರ್ ರಾಜಕುಮಾರ್ ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಕನ್ನಡ ನಾಡು ನುಡಿ ಭಾಷೆ ಹಾಗೂ ಕನ್ನಡಕ್ಕಾಗಿ ಹೋರಾಡಿದ ಏಕೈಕ ನಟ ಎಂದರೆ ಅವರೇ ರಾಜಕುಮಾರ್ ಎಂದು ಜ್ವಾಲಾಮುಖಿ ಡಾಕ್ಟರ್ ರಾಜಕುಮಾರ್ ಸಂಘ ನಗರ ಘಟಕ ಅಧ್ಯಕ್ಷರಾದ ವಿ.ಮೂರ್ತಿಯವರು ಅಭಿಮತ ವ್ಯಕ್ತಪಡಿಸಿದರು.
ಡಾಕ್ಟರ್ ರಾಜಕುಮಾರ್ ಅವರ 96ನೇಯ ಜನ್ಮದಿನದ ಅಂಗವಾಗಿ ಸೀನಪ್ಪ ಶೆಟ್ಟಿ ಸರ್ಕಲ್ ನಲ್ಲಿ ತಮ್ಮ ಅಭಿಮಾನಿ ಬಳಗದವರೊಂದಿಗೆ ರಾಜಕುಮಾರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಕನ್ನಡ ಚಿತ್ರರಂಗದಲ್ಲಿ ಎಂತಹ ಪಾತ್ರಕ್ಕೂ ಸೈ ಎನಿಸುವ ರಾಜ ಅವರು. ನಮಗೆ ತಿಳಿದ ಹಾಗೆ ಕನ್ನಡ ಚಿತ್ರರಂಗದಲ್ಲಿ ಇವರಷ್ಟು ಅಭಿಮಾನಿ ಬಳಗ ಬೇರೆ ಯಾವ ಚಿತ್ರರಂಗದಲ್ಲೂ ಇಲ್ಲ. ಗೋಕಾಕ್ ಚಳುವಳಿಯಲ್ಲಿ ಕನ್ನಡಿಗರ ಎದೆಯಲ್ಲಿ ಕನ್ನಡತನವನ್ನು ಉಳಿಸುವಲ್ಲಿ ಹೋರಾಟ ಮಾಡಿದ ಕನ್ನಡದ ಒಬ್ಬ ಸಂತ. ಅಪ್ರತಿಮ ಹಾಡುಗಾರ, ಯೋಗಪಟು ಹಾಗೂ ಸಮಾಜಮುಖಿಯಾಗಿ ಹಲವಾರು ಸೇವೆಗಳನ್ನು ಮಾಡಿದಂತಹ ಡಾಕ್ಟರ್ ರಾಜಕುಮಾರ್ ಅವರು ಇಂದಿಗೂ ಕನ್ನಡಿಗರ ಹೃದಯದಲ್ಲಿ ಅಚ್ಚರಿಯದೆ ಉಳಿದಿದ್ದಾರೆ ಎಂದು ನುಡಿದರು.
ಜ್ವಾಲಾಮುಖಿ ಡಾಕ್ಟರ್ ರಾಜಕುಮಾರ್ ನಗರ ಘಟಕ ಸಂಘದ ಗೌರವಾಧ್ಯಕ್ಷರಾದ ಟಿ.ಆರ್.ಅಶ್ವಥ್ ನಾರಾಯಣ್ ಶೆಟ್ಟಿ ಅವರು ಐವತ್ತು ಕೆಜಿ ಕೇಕ್ ಕಟ್ ಮಾಡಿ ಸಾರ್ವಜನಿಕರಿಗೆ ವಿತರಿಸಿ ಮಾತನಾಡಿದ ಅವರು, ರಾಜಕುಮಾರ ಅವರ ವ್ಯಕ್ತಿತ್ವಕ್ಕೆ ಅವರೇ ಸಾಟಿ. ಅವರಿಗೆ ಕನ್ನಡದ ಬಗ್ಗೆ ಇದ್ದಂತಹ ಅಭಿಮಾನ ಎಂದು ಮರೆಯಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗದ ಒಬ್ಬ ದೇವತಾ ಮನುಷ್ಯ. ಇಂತಹ ವ್ಯಕ್ತಿಯನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಸೊರಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
Dr. Rajkumar ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ನಾಗಭೂಷಣ್, ಪ್ರಧಾನ ಕಾರ್ಯದರ್ಶಿ ದೇವರಾಜ್, ಕಾರ್ಯದರ್ಶಿ ಮಹೇಶ್, ನಿರ್ದೇಶಕರಗಳಾದ ದೇವೇಂದ್ರಪ್ಪ, ಗೋಪಿನಾಥ್, ನರಸಿಂಹ, ನಟೇಶ್ ಹಾಗೂ ಶ್ರೀನಿಧಿ ಸಂಸ್ಥೆಯ ಉದ್ಯಮಿಗಳು ಹಾಗೂ ಕೆಲಸಗಾರರು ಮತ್ತು ಸಾರ್ವಜನಿಕರು ರಾಜಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ರಾಜಕುಮಾರ್ ಅವರ ಗೀತೆಗಳು ಹೇಳುವುದರ ಜೊತೆಗೆ ಸಂಭ್ರಮಿಸಿದರು.