Sahyadri Narayana Multispeciality Hospital ಮಲೆನಾಡು ಮತ್ತು ಮಧ್ಯ ಕರ್ನಾಟಕದಾದ್ಯಂತ ತನ್ನ ಉನ್ನತ ಗುಣಮಟ್ಟದ ಆರೈಕೆಗೆ ಹೆಸರುವಾಸಿಯಾಗಿರುವ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯು,1,000 ಕ್ಕೂ ಹೆಚ್ಚು ಮೊಣಕಾಲು ಮತ್ತು ಚಪ್ಪೆ ಕೀಲು ಬದಲಾವಣೆ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಗಮನಾರ್ಹ ಸಾಧನೆಯನ್ನು ಮಾಡಿದೆ. ಇದರೊಂದಿಗೆ ಈ ಸಂಖ್ಯೆಯನ್ನು ತಲುಪಿದ ಈ ಭಾಗದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
2012 ರಲ್ಲಿ ತನ್ನ ಮೂಳೆ ಶಸ್ತ್ರಚಿಕಿತ್ಸಾ ವಿಭಾಗವನ್ನು (ಆರ್ಥೋಪೆಡಿಕ್) ಪ್ರಾರಂಭಿಸಿದಾಗಿನಿಂದ,ಆಸ್ಪತ್ರೆಯು ಕಳೆದ 13 ವರ್ಷಗಳಲ್ಲಿ ಈ ಮಹತ್ವದ ಅಂಕಿಯನ್ನು ತಲುಪಿದೆ.
ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ. ಚೇತನ್ ಮಠದ್ ಅವರು ತಮ್ಮ ತಂಡದ ಸಾಧನೆಗಳ ಬಗ್ಗೆ ವಿವರಗಳನ್ನು ಹಂಚಿಕೊಂಡರು. “ನಮ್ಮ ಮೂಳೆಚಿಕಿತ್ಸಾ ತಂಡವು ಮೊಣಕಾಲು ಮತ್ತು ಚಪ್ಪೆಗೆ ಸಂಬಂಧಿಸಿದ ವಿವಿಧ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ,” ಎಂದು ಅವರು ವಿವರಿಸಿದರು. “ಇದರಲ್ಲಿ 200 ಕ್ಕೂ ಹೆಚ್ಚು ಮೊಣಕಾಲು ಆರ್ತ್ರೋಸ್ಕೋಪಿಗಳು ಸೇರಿವೆ – ಇದು ಹರಿದ ಕಾರ್ಟಿಲೇಜ್ ಅಥವಾ ಅಸ್ಥಿರಜ್ಜುಗಳಂತಹ ಸಮಸ್ಯೆಗಳನ್ನು ಸರಿಪಡಿಸಲು ಸಣ್ಣ ಛೇದನದೊಂದಿಗೆ ಕ್ಯಾಮೆರಾವನ್ನು ಬಳಸಿಕೊಂಡು ಮಾಡುವ ಕನಿಷ್ಠ ಆಕ್ರಮಣಕಾರಿ (minimally invasive) ಚಿಕಿತ್ಸೆಯಾಗಿದೆ.”
ತಮ್ಮ ತಂಡವು ಸಂಕೀರ್ಣವಾದ ಚಪ್ಪೆ ಶಸ್ತ್ರಚಿಕಿತ್ಸೆಗಳನ್ನು ಸಹ ಮಾಡುತ್ತಿದೆ ಎಂದ ಅವರು ಕಳೆದ ಒಂದು ವರ್ಷದಿಂದ ಆಸ್ಪತ್ರೆಯಲ್ಲಿ ನಾವು ಸಂಪೂರ್ಣ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗಳನ್ನು ( Total Knee Replacement) ಮಾಡುತ್ತಿದ್ದೇವೆ. ಈಗಾಗಲೇ ಸುಮಾರು 50 ಈ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ ಎಂದು ಹೇಳಿದರು.
ಸುಮಾರು ೯೦ ವರ್ಷ ವಯೋಮಾನದ ವ್ಯಕ್ತಿಯೊಬ್ಬರು ನಮ್ಮಲ್ಲಿ ಸಂಪೂರ್ಣ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಈಗ ಅವರು ಬಹುತೇಕ ಸಾಮಾನ್ಯ ಜೀವನವನ್ನು ನಡೆಸುತ್ತಿದ್ದಾರೆ. ಇದೇ ರೀತಿಯ ಶಸ್ತ್ರಚಿಕಿತ್ಸೆಗಳ ಮೂಲಕ ೮೦ ರ ಆಸುಪಾಸಿನಲ್ಲಿರುವ ಹಲವಾರು ರೋಗಿಗಳಿಗೆ ನಾವು ಯಶಸ್ವಿ ಚಿಕಿತ್ಸೆ ನೀಡುವುದರ ಮೂಲಕ ಅವರು ಸುಲಭವಾಗಿ ನಡೆದಾಡುವಂತೆ ಮಾಡಿದ್ದೇವೆ,” ಎಂದರು..
ಯಾವಾಗ ಮೊಣಕಾಲು ಶಸ್ತ್ರಚಿಕಿತ್ಸೆ ಸರಿಯಾದ ಆಯ್ಕೆ?
ಇತರ ಚಿಕಿತ್ಸೆಗಳು ಫಲಕಾರಿಯಾಗದಿದ್ದಾಗ ಸಾಮಾನ್ಯವಾಗಿ ಮೊಣಕಾಲು ಶಸ್ತ್ರಚಿಕಿತ್ಸೆಗಳು ಒಂದು ಆಯ್ಕೆಯಾಗುತ್ತವೆ ಎಂದು ಡಾ. ಚೇತನ್ ವಿವರಿಸಿದರು. “ಔಷಧಿ, ಫಿಸಿಕಲ್ ಥೆರಪಿ, ಅಥವಾ ಚುಚ್ಚುಮದ್ದುಗಳಂತಹ ವಿಧಾನಗಳು ನೋವನ್ನು ನಿರ್ವಹಿಸಲು ಅಥವಾ ಕಾರ್ಯವನ್ನು ಸುಧಾರಿಸಲು ವಿಫಲವಾದಾಗ, ಶಸ್ತ್ರಚಿಕಿತ್ಸೆಯು ಮುಂದಿನ ಹಂತವಾಗಿರುತ್ತದೆ,” ಎಂದು ಅವರು ಹೇಳಿದರು.
Sahyadri Narayana Multispeciality Hospital ಶಸ್ತ್ರಚಿಕಿತ್ಸೆಯಿಂದ ಸಂಧಿವಾತದಿಂದ (ಅರ್ಥ್ರೈಟಿಸ್) ಚಲನಶೀಲತೆ ತೀವ್ರವಾಗಿ ಸೀಮಿತವಾಗಿರುವ ವೃದ್ಧರು. ಮೊಣಕಾಲಿನ ಕೀಲುಗಳಿಗೆ ಸಂಬಂಧಿಸಿದ ಹರಿದ ಅಸ್ಥಿರಜ್ಜುಗಳು ಅಥವಾ ಮೂಳೆ ಮುರಿತಗಳಂತಹ ತೀವ್ರವಾದ ಗಾಯಗಳಿರುವ ವ್ಯಕ್ತಿಗಳು. ತಿಂಗಳುಗಟ್ಟಲೆ ಶಸ್ತ್ರಚಿಕಿತ್ಸೆಯಲ್ಲದ ಚಿಕಿತ್ಸೆಯನ್ನು ಪಡೆದರೂ ದೀರ್ಘಕಾಲದ ನೋವು ಮತ್ತು ಚಲನಶೀಲತೆಯ ಸಮಸ್ಯೆಗಳನ್ನು ಅನುಭವಿಸುತ್ತಿರುವವರು. ನಡೆಯುವುದು ಅಥವಾ ಮೆಟ್ಟಿಲು ಹತ್ತುವಂತಹ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಕಷ್ಟಪಡುವ ಯಾರಾದರೂ ಇದರ ಪ್ರಯೋಜನ ಪಡೆಯಬಹುದು ಎಂದರು.
“ಮೊಣಕಾಲು ಶಸ್ತ್ರಚಿಕಿತ್ಸೆಯು ಅತ್ಯುತ್ತಮ ಫಲಿತಾಂಶಗಳನ್ನು ನೀಡುವ, ಅತೀ ಸುರಕ್ಷಿತ ವಿಧಾನವಾಗಿದೆ,” ಎಂದು ಹೇಳಿದ ಡಾ. ಚೇತನ್ “ತೀವ್ರವಾದ ಗಾಯಗಳು, ಸಂಧಿವಾತ ಅಥವಾ ಇತರ ಚಿಕಿತ್ಸೆಗಳಿಗೆ ಸ್ಪಂದಿಸದ ನಿರಂತರ ನೋವು ಅನುಭವಿಸುತ್ತಿರುವವರಿಗೆ ಇದು ಅತ್ಯುತ್ತಮ ವಿಧಾನ ವಾಗಿದ್ದು, ಇದರಿಂದ ಚಲನೆ ಸುಧಾರಿಸುವದಲ್ಲದೆ, ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ, ಈ ವಿಧಾನವು ಸಾಮಾನ್ಯವಾಗಿ ಸುರಕ್ಷಿತ ಮತ್ತು ಅತ್ಯಂತ ಪರಿಣಾಮಕಾರಿಯಾಗಿದೆ. ಹೆಚ್ಚಿನ ರೋಗಿಗಳು ಗಮನಾರ್ಹ ಸುಧಾರಣೆಯನ್ನು ಕಾಣುತ್ತಾರೆ ಮತ್ತು ಶಸ್ತ್ರಚಿಕಿತ್ಸೆಯ ನಂತರ ವಾರಗಳು ಅಥವಾ ತಿಂಗಳುಗಳಲ್ಲಿ ತಮ್ಮ ದೈನಂದಿನ ದಿನಚರಿಗೆ ಮರಳಬಹುದು,” ಎಂದರು.
ಕೋವಿಡ್ ನಂತರದ ತೊಂದರೆಗಳಿಂದ ಚಪ್ಪೆ ಬದಲಿ ಶಸ್ತ್ರಚಿಕಿತ್ಸೆಗಳ ಹೆಚ್ಚಳ: ಡಾ. ಚೇತನ್ ಮಠದ್
ಚಪ್ಪೆ ಬದಲಿ ಶಸ್ತ್ರಚಿಕಿತ್ಸೆಗಳಲ್ಲಿನ ಒಂದು ಪ್ರವೃತ್ತಿಯನ್ನು ಗಮನಿಸಿರುವ ಡಾ. ಚೇತನ್ “ಕೋವಿಡ್ ನಂತರ ಚಪ್ಪೆ ಬದಲಿ ಶಸ್ತ್ರಚಿಕಿತ್ಸೆ ಅಗತ್ಯವಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿರುವದನ್ನು ನಾವು ಗಮನಿಸಿದ್ದೇವೆ,” ಎಂದು ಹೇಳಿದ ಅವರು. “ಈ ಪ್ರಕರಣಗಳಲ್ಲಿ ಗಣನೀಯ ಸಂಖ್ಯೆಯು ಅವಾಸ್ಕುಲರ್ ನೆಕ್ರೋಸಿಸ್ (Avascular Necrosis) ಕಾರಣದಿಂದಾಗಿವೆ – ಇದು ರಕ್ತದ ಹರಿವು ಕಡಿಮೆಯಾಗುವುದರಿಂದ ಮೂಳೆ ಅಂಗಾಂಶವು ಸಾಯುತ್ತವೆ.
ಇದು”ಕೋವಿಡ್-19 ಚಿಕಿತ್ಸೆಯ ಸಮಯದಲ್ಲಿ ಸ್ಟೀರಾಯ್ಡ್‌ಗಳ ಬಳಕೆಯು ಇದಕ್ಕೆ ಒಂದು ಕಾರಣವಾಗಿರಬಹುದು ಎಂದರು.
ವಿಶೇಷವಾಗಿ ವಯಸ್ಸಾದವರಿಗೆ ಸಕಾಲಿಕ ಚಿಕಿತ್ಸೆಯ ಅಗತ್ಯತೆ ಬಗ್ಗೆ ಒತ್ತಿ ಹೇಳಿದ ಅವರು “ಹೆಚ್ಚಿನ ಕೀಲು ಹಾನಿಯನ್ನು ತಡೆಗಟ್ಟಲು ಮತ್ತು ಸಕ್ರಿಯ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಬೇಗನೆ ಮೊಣಕಾಲು ಶಸ್ತ್ರಚಿಕಿತ್ಸೆಯನ್ನು ಪರಿಗಣಿಸುವುದು ಮುಖ್ಯ. ಚಿಕಿತ್ಸೆಯನ್ನು ವಿಳಂಬ ಮಾಡುವುದು ಕೆಲವೊಮ್ಮೆ ಹೆಚ್ಚಿನ ತೊಡಕುಗಳಿಗೆ ಕಾರಣವಾಗಬಹುದು ಮತ್ತು ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಹಿರಿಯ ನಾಗರಿಕರು ಈ ಚಿಕಿತ್ಸೆಗೆ ಹಿಂಜರಿಯಬಾರದು – ಆಧುನಿಕ ಶಸ್ತ್ರಚಿಕಿತ್ಸಾ ತಂತ್ರಗಳು ಸುರಕ್ಷಿತವಾಗಿವೆ, ಮತ್ತು ಶೀಘ್ರವಾಗಿ ಚಿಕಿತ್ಸೆ ಪಡೆಯುವುದರಿಂದ ಅವರು ಸಕ್ರಿಯವಾಗಿ ಮತ್ತು ಸ್ವತಂತ್ರವಾಗಿರಲು ಸಹಾಯ ಮಾಡುತ್ತದೆ,” ಎಂದರು. ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ ಅಧೀಕ್ಷಕ ಡಾ. ಚಕ್ರವರ್ತಿ ಸಂಡೂರು, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ವರ್ಗಿಸ್ ಪಿ ಜಾನ್, ಮಾರ್ಕೇಟಿಂಗ್ ಮುಖ್ಯಸ್ಥರು ಶ್ರೀ ರಾಜಾಸಿಂಗ್ ಎಸ್ ವಿ ಹಾಗೂ ಮಾರ್ಕೇಟಿಂಗ್ ಮ್ಯಾನೇಜರ್ ಶ್ರೀ ಶೈಲೇಶ್ ಎಸ್ ಎನ್ ಉಪಸ್ಥಿತರಿದ್ದರು.