Klive Special Article ” ನಾಯಿ ಕಳೆದಿದೆ” ಎಂಬ ನಾಟಕದ ಹೆಸರೇ ಹೇಳುತ್ತದೆ ಇದು ಪ್ರಸ್ತುತ ದಿನಮಾನದ ಕಥಾಹಂದರ ಹೊಂದಿರುವಂತದ್ದು ಎಂದು. ಒಂದು ನಾಟಕ ಮನಸ್ಸಿಗೆ ನಾಟುವುದು ಕಥೆ ನಮ್ಮ ನಡುವೆ ನಡೆಯುತ್ತಿರುವುದೇನೋ ಎಂದು ಅನಿಸಿದಾಗ. ಅದರಂತೆ ಇದು ಕೂಡ ನೋಡಿದಾಗ ನಮ್ಮ ನಡುವೆಯೇ ನಡೆಯುತ್ತಿರುವ ಸನ್ನಿವೇಶಗಳೋ ಎಂಬಂತೆ ಖಂಡಿತವಾಗಿಯೂ ಭಾಸವಾಗುತ್ತದೆ. ಹಾಗಾಗಿ ಅದು ನೋಡುಗನನ್ನು ಸೆಳೆದುಬಿಡುತ್ತದೆ. ಅಜೇಯ ಸಂಸ್ಕೃತಿ ಬಳಗ ಶಿವಮೊಗ್ಗ ಆಯೋಜಿಸಿದ ಲಾವಣ್ಯ ಬೈಂದೂರು, ಕಲಾ ತಂಡ ಅಭಿನಯಿಸಿದ ‘ನಾಯಿಕಳೆದಿದೆ’ ಎಂಬ ನಾಟಕ ಇತ್ತೀಚೆಗಷ್ಟೇ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶಿತಗೊಂಡಿತು.
ಒಂದು ಸೊಗಸಾದ ಜಿ. ಎಸ್. ಎಸ್ ರವರ ಭಾವಗೀತೆಯಾದ ‘ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ…’ಎಂಬುದರಿಂದ ಆರಂಭವಾಗುವ ನಾಟಕ ವೃದ್ಧ ದಂಪತಿಗಳು, ಅವರಿಗಿರೋ ಒಬ್ಬನೇ ಮಗ, ವಾರಾಂತ್ಯಕ್ಕೆ ಅವನು ಅಪ್ಪ ಅಮ್ಮನನ್ನು ನೋಡಲು ತನ್ನ ಪತ್ನಿ ಹಾಗೂ ಪತ್ನಿಯ ಪ್ರೀತಿಯ ನಾಯಿಯೊಂದಿಗೆ ಬರುವುದು, ಅದನ್ನೇ ಹಬ್ಬವೆನ್ನುವ ರೀತಿಯಲ್ಲಿ ಸಂಭ್ರಮಿಸುವ ತಾಯಿ. ಮಗ-ಸೊಸೆ ಬೇಕು ಆದರೆ, ಅವರು ತರುವ ನಾಯಿ ತನ್ನ ಜಾತಿಯ ಮಡಿಯ ಕಾರಣಕ್ಕಾಗಿ ಅದನ್ನು ವರ್ಜ್ಯ ಎನ್ನುವುದು, ನಂತರದ ಮಗ ಸೊಸೆಯರ ವಿದೇಶ ಪಯಣ,ಅವರನ್ನು ಒಲ್ಲದ ಮನಸ್ಸಿನಿಂದ ಕಳುಹಿಸಿಕೊಟ್ಟರೂ ನಾಯಿಯನ್ನು ತಮ್ಮ ಮನೆಯಲ್ಲಿ ಇಟ್ಟು ಕೊಳ್ಳಬೇಕಾಗಿ ಬಂದಾಗ ನಡೆಯುವ ಕಥಾವಸ್ತುವನ್ನು ಆಧರಿಸಿರುವ ನಾಟಕ ಇದಾಗಿದೆ.
ಈ ನಾಟಕದಲ್ಲಿ ಗಮನಿಸಬೇಕಾದ ಅಂಶಗಳೆಂದರೆ ಸಂಬಂಧಗಳ ಸೂಕ್ಷ್ಮತೆ, ಮಾತಾ ಪಿತೃಗಳ ಪ್ರೇಮ, ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿನ ಮಕ್ಕಳಿಗಿಂತ ಸಾಕುಪ್ರಾಣಿಗಳ ಮೇಲಿನ ಅತಿಯಾಗಿ ಹಚ್ಚಿಕೊಳ್ಳುವ ಸಂಸ್ಕೃತಿ, ಮನೆಗೆ ಮನೆ ಮಗನಿಗಿಂತ ರೇಷನ್ ಹಾಕುವವನೇ ಹೆಚ್ಚಿನ ಸ್ಥಾನ ಸಂಪಾದಿಸುವುದು, ನಡುನಡುವೆ ಬೊಗಳುವ ನಾಯಿಯಂತೆ ಬಂದು ಹೋಗುವ ಮುನಿ ವೆಂಕಟಮ್ಮ ಅಲಿಯಾಸ್ ನಾಗವೇಣಿ, ಎಲ್ಲವೂ ಸಹ ಪ್ರಸ್ತುತವನ್ನು ಚೆನ್ನಾಗಿ ಕಟ್ಟಿಕೊಟ್ಟಿದೆ. ಇದರ ನಡುವೆಯೂ ಮನೆಯಲ್ಲಿ ಮಗ ಸೊಸೆ ಪ್ರೀತಿಸುವ ನಾಯಿ (ರಾಗಾ) ಮಕ್ಕಳ ಬದಲಿಗೆ ಬಂದು ಉಳಿದು ಆದ ರಗಳೆಗಳ ನಡುವೆ ಅದು ಇಲ್ಲವಾದಾಗ ಅದರ ಮೇಲಿನ ಪ್ರೇಮ ವ್ಯಕ್ತವಾಗುವ ರೀತಿ ಬಹಳ ಚೆನ್ನಾಗಿ ಮೂಡಿ ಬಂದಿದೆ.
ಇಡೀ ನಾಟಕವನ್ನು ಮನಮುಟ್ಟುವಂತೆ ಕೊಂಡೊಯ್ದದ್ದು ಒಂದು ಮುಗ್ಧ ವೃದ್ಧ ದಂಪತಿಗಳು. ಅವರಿಬ್ಬರೂ ಸಹ ತಮ್ಮ ಪಾತ್ರಕ್ಕೆ ಶೇಕಡಾ ನೂರಕ್ಕೆ ನೂರರಷ್ಟು ನ್ಯಾಯ ಒದಗಿಸಿದ್ದಾರೆ. ಕೆಲವು ದೃಶ್ಯಗಳಂತೂ ನೋಡುಗರನ್ನು ಭಾವುಕರನ್ನಾಗಿಸಿದ ಅಭಿನಯ ಅವರದಾಗಿತ್ತು. ಇದರ ಯಶಸ್ಸಿಗೆ ನಿಧಿ ಹಾಗೂ ಸುಬ್ರಹ್ಮಣ್ಯ ಉಪ್ಪುಂದ ಈ ಇಬ್ಬರು ಪಾತ್ರಧಾರಿಗಳನ್ನು ಮೆಚ್ಚಲೇಬೇಕು. ಇನ್ನು ಸಭ್ಯ ಗಯ್ಯಾಳಿ ಸೊಸೆ, ಅವನ ತಾಳಕ್ಕೆ ಕುಣಿಯುವ ಮಗ ಕೂಡ ತಮ್ಮ ಪಾತ್ರಕ್ಕೆ ಬೇಕಾದ ಜೀವ ತುಂಬಿದ್ದಾರೆ. ಮಧ್ಯದಲ್ಲಿ ಬಂದು ಹೋಗುವ ಭಾವನಾಗಿ ಗಣೇಶ್ ಕಾರಂತ್, ಮಗನಾಗಿ ಗುರು ಕೂಡ ಅವರ ಪಾತ್ರ ಅಚ್ಚುಕಟ್ಟಾಗಿ ನಿರ್ವಹಿಸಿದವರೇ ಆಗಿದ್ದಾರೆ. ರೇಷನ್ ಅಂಗಡಿ ಅಶೋಕ, ಆತ ಮನೆ ಮಗನಂತೆ ಜವಾಬ್ದಾರಿ ನಿರ್ವಹಿಸಿದ ಸಜ್ಜನ ವ್ಯಕ್ತಿತ್ದೊಂದಿಗೆ ಮನಸ್ಸಿನಲ್ಲಿ ಉಳಿಯುವಂತೆ ಆದರೆ, ಬಿಗ್ ಬಾಸ್ ಸ್ಪರ್ಧಿಯಾಗಿ ತಾನು ಮಾಡಿದ ರಾಜಕೀಯದಿಂದಲೇ ಗೆದ್ದು ಬಂದು ಸೆಲೆಬ್ರೇಟಯಂತಾದ ಮುನಿ ವೆಂಕಟಮ್ಮ (ನಾಗವೇಣಿ) ಹಾಗೂ ಆಕೆಯ ಅಸಿಸ್ಟೆಂಟ್ ಕೂಡ ತನ್ನ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ. ನಾಗವೇಣಿ ತಾನೇ ಶ್ರೇಷ್ಠ ಎನಿಸಿಕೊಂಡು, ಸಮಾಜ ಸೇವೆಯ ಹೆಸರಲ್ಲಿ ಹಣ ಸುಲಿಗೆ ಮಾಡುವ ಕಾಯಕ. ಅದರಿಂದ ಮುಗ್ದ ದಂಪತಿಗಳ ಮೇಲಾದ ಪರಿಣಾಮ ಕಂಡಾಗ ಪ್ರಸ್ತುತ ದಿನಗಳಲ್ಲಿ ಅಸಹಾಯಕರ ಮೇಲೆಯೇ ಇಂಥವರ ದಬ್ಬಾಳಿಕೆ ಹೆಚ್ಚು ಎನ್ನುವುದನ್ನು ಪ್ರಾತಿನಿಧಿಕವಾಗಿ ಅಭಿನಯಿಸಿ ತೋರಿಸಿದ್ದಾಳೆ.
Klive Special Article ಮುಗ್ಧರ ಮೇಲೆ ಮಾಡುವ ದಬ್ಬಾಳಿಕೆ ಒಂದು ಕಡೆಯಾದರೆ, ಅದಕ್ಕೆ ಎದುರಾಗಿ ಅವರಿಗೆ ಸಹಕರಿಸಲು ಬರುವ ಪಾತ್ರ ಮತ್ತೊಂದೆಡೆ. ಈ ಸನ್ನಿವೇಶ ನೋಡುವನಿಗೆ ಆಪ್ತವಾಗಿತ್ತು. ಮಗ ಸೊಸೆಯರು ವಿದೇಶದಿಂದ ಬಂದಾಗ ಅವರ ಆಡುವ ಮಾತುಗಳು, ಅವರು ತಂದೆ ತಾಯಿಯರನ್ನು ನೋಯಿಸಿ ನಾಯಿಯನ್ನೇ ಆದರಿಸುವುದು ಇದೆಯಲ್ಲ ಆ ಸನ್ನಿವೇಶವು ಇಂದಿನ ದಿನಗಳಲ್ಲಿ ನಡೆಯುವುದನ್ನು ಸಾಂಕೇತಿಕವಾಗಿ ತೋರಿಸಿದಂತಿತ್ತು.
ಒಂದು ಅಂಕದಿಂದ ಮತ್ತೊಂದು ಅಂಕಕ್ಕೆ ಬರುವಾಗ ನಡು ನಡುವೆ ದೃಶ್ಯಕ್ಕೆ ತಕ್ಕಂತೆ ಬರುವ ಭಾವಗೀತೆಗಳನ್ನು ಬಹು ಜತನದಿಂದ ಆಯ್ಕೆ ಮಾಡಿ ಬಳಸಿಕೊಳ್ಳಲಾಗಿದೆ. ಎಲ್ಲವೂ ಚಂದ ಅನಿಸುವಾಗ ಸ್ವಲ್ಪ ಜಾತಿಯ ಕುರಿತು ಮಾತನಾಡಿದ್ದು ಹಾಗೂ ಡಬಲ್ ಮೀನಿಂಗ್ ಹೊರತುಪಡಿಸಿದರೆ ರಾಜೇಂದ್ರ ಕಾರಂತರ ಈ ನಾಟಕ ಅದ್ಭುತ ಪ್ರದರ್ಶನವಾಗಿಯೇ ಕಂಡುಬಂದಿತು. ಬೆಳಕಿನ ನಿರ್ವಹಣೆ, ರಂಗಸಜ್ಜಕೆ, ಕನಸಿನಲ್ಲಿ ಬಂದು ಕಾಡುವ ನಾಯಿ, ಅತ್ಯುತ್ತಮ ಪ್ರಸಾದನ ಈ ಎಲ್ಲವೂ ನಾಟಕದ ಅಂದವನ್ನು ಮತ್ತಷ್ಟು ಹೆಚ್ಚಿಸಿತು.
ಸಾಮಾಜಿಕ ನಾಟಕಗಳು ನಮ್ಮನ್ನು ನಾವಿರುವ ರೀತಿಯನ್ನು ಪ್ರಶ್ನಿಸುವಂತೆಯೇ ಇದ್ದು, ವೃದ್ಧಾಪ್ಯದ ದಿನಗಳನ್ನು ನಮ್ಮ ಹಿರಿಯರಿಗೆ ನಾವು ಯಾವ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂಬುದು ಸಹ ನಮಗೆಲ್ಲ ಪಾಠವಾಗುವಂತೆ ಈ ನಾಟಕ ಇತ್ತು. ಮತ್ತೊಮ್ಮೆ ಹೇಳಬೇಕೆಂದರೆ ಎಲ್ಲರ ಅಭಿನಯವೂ ಮನಮುಟ್ಟುವಂತಿತ್ತು. ಈ ನಾಟಕ ಪ್ರದರ್ಶನ ಆಯೋಜಕರ ಅತ್ಯುತ್ತಮ ಆಯ್ಕೆ ಎನ್ನಬಹುದು.
ಡಾ. ಮೈತ್ರೇಯಿ ಆದಿತ್ಯ ಪ್ರಸಾದ್
ಸಂಸ್ಕೃತ ಉಪನ್ಯಾಸಕರು
ಪೇಸ್ ಕಾಲೇಜ್ ಶಿವಮೊಗ್ಗ
ಚಿತ್ರಕೃಪೆ: ಆದಿತ್ಯಪ್ರಸಾದ್ ಎಂ.
