JCI Shivamogga Sahyadri ಪರಿಣಾಮಕಾರಿ ಭಾಷಣೆ ಕಲೆಯು ಆತ್ಮವಿಶ್ವಾಸ ವೃದ್ಧಿಸುವ ಜತೆಯಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಿಸಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ ಎಂದು ಬೌದ್ಧಿಕ ಆಸ್ತಿ ಹಕ್ಕುಗಳ ವಕೀಲೆ ಸಾಧ್ವಿ ಸಿ.ಕಾಂತ್ ಹೇಳಿದರು.
ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಮತ್ತು ಜೆಸಿಐ ಶಿವಮೊಗ್ಗ ಕಾಮರ್ಸ್ ವತಿಯಿಂದ ಸಾನ್ವಿ ರೆಸಾರ್ಟ್ ನಲ್ಲಿ ಆಯೋಜಿಸಿದ್ದ ಪರಿಣಾಮಕಾರಿ ಭಾಷಣ ಕಲೆ ಹಾಗೂ ವ್ಯಕ್ತಿತ್ವ ನಿರ್ಮಾಣ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಉತ್ತಮ ಮಾತಿನ ಕೌಶಲದಿಂದ ಎಲ್ಲರ ಮನಸ್ಸನ್ನು ಗೆಲ್ಲುವುದರ ಜತೆಯಲ್ಲಿ ಅನೇಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
ಪ್ರತಿಯೊಬ್ಬರೂ ಜೀವನದಲ್ಲಿ ಗುರಿಯ ಸ್ಪಷ್ಟತೆ ಹೊಂದಿರಬೇಕು. ಸಂವಹನ ಕೌಶಲ್ಯ ಹಾಗೂ ಆತ್ಮವಿಶ್ವಾಸ ಹೊಂದುವುದರಿಂದ ಗುರಿ ಸಾಧಿಸಲು ಸಾಧ್ಯವಿದೆ. ನಿರಂತರವಾಗಿ ಪರಿಶ್ರಮ ವಹಿಸಿ ಮುನ್ನಡೆಬೇಕು. ಜೆಸಿಐ ಆಯೋಜಿಸುವ ಇಂತಹ ಶಿಬಿರಗಳಲ್ಲಿ ಯುವಜನರು ಹೆಚ್ಚು ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಅಂತರಾಷ್ಟ್ರೀಯ ತರಬೇತುದಾರ ಉಡುಪಿಯ ವೇಣುಗೋಪಾಲ್ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ, ಪಾರಿತೋಷಕ ನೀಡಿ ಗೌರವಿಸಿದರು.
ವಲಯ ತರಬೇತುದಾರ ಚಂದ್ರಶೇಖರ್ ಮಾತನಾಡಿ ಕಾರ್ಯಕ್ರಮ ನಡೆಸಲು ಪೂರ್ವತಯಾರಿ, ಉದ್ಯೋಗ ಅವಕಾಶ ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಜೆಸಿಐ ಶಿವಮೊಗ್ಗ ಕಾಮರ್ಸ್ ಅಧ್ಯಕ್ಷೆ ನಿವೇದಿತಾ ವಿಕಾಸ್ ಮಾತನಾಡಿ, ಎರಡು ದಿನಗಳ ಶಿಬಿರದಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು, ತರಬೇತಿ ಶಿಬಿರ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
JCI Shivamogga Sahyadri ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಜಿ.ಗಣೇಶ್ ಎಲ್ಲ ತರಬೇತುದಾರರಿಗೆ ಸನ್ಮಾನಿಸಿ ಮಾತನಾಡಿದರು. ಜೆಸಿಐ ಪ್ರಮುಖರಾದ ಶೇಷಗಿರಿ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಪ್ರಮೋದ್ ಉಡುಪ, ಶಿಬಿರಾರ್ಥಿಗಳು ಭಾಗವಹಿಸಿದ್ದರು.