Friends Center Shivamogga ಮನುಷ್ಯನ ಮನಸ್ಸಿಗೆ ಸಂತಸ ನೀಡುವ ಔಷಧ ಸಂಗೀತ. ಮನುಷ್ಯನಲ್ಲಿನ ಬೇಸರ, ಖಿನ್ನತೆಯನ್ನು ದೂರ ಮಾಡುವ ಶಕ್ತಿ ಸಂಗೀತಕ್ಕಿದೆ ಎಂದು ಎಟಿಎನ್‌ಸಿಸಿ ಕಾಲೇಜಿನ ಪ್ರಾಚಾರ್ಯೆ ಮಮತಾ ಅಭಿಪ್ರಾಯಪಟ್ಟರು.
ಫ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿ ಫ್ರೆಂಡ್ಸ್ ಸೆಂಟರ್ ಹಾಗೂ ಮಹಿಳಾ ಘಟಕದ ವತಿಯಿಂದ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಹಾಗೂ ಬೆಳದಿಂಗಳಲಿ ಸಂಗೀತದ ಅಲೆಯಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒತ್ತಡದ ಪ್ರಪಂಚದಲ್ಲಿ ಕುಟುಂಬದ ಸದಸ್ಯರೊಂದಿಗೆ ಸಹಭೋಜನ ಮರೆತಿದ್ದೇವೆ. ಒಟ್ಟಾಗಿ ಮಾತನಾಡುವುದು ಕಡಿಮೆ ಆಗುತ್ತಿದೆ ಎಂದು ತಿಳಿಸಿದರು.
ಫ್ರೆಂಡ್ಸ್ ಸೆಂಟರ್ ಈಗಾಗಲೇ ಐದು ದಶಕಗಳಿಂದ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಬರುತ್ತಿದ್ದು, ರಾಜ್ಯಮಟ್ಟದ ಚರ್ಚಾ ಸ್ಪರ್ಧೆ, ಸರಿಗಮಪ ಕಾರ್ಯಕ್ರಮಗಳನ್ನು ಸಹ ನಡೆಸಿದೆ. ಇಂತಹ ಸಂಗೀತ ಕಾರ್ಯಕ್ರಮಗಳು ಎಲ್ಲರನ್ನೂ ಒಟ್ಟುಗೂಡಿಸುವ ಜತೆಯಲ್ಲಿ ಧನಾತ್ಮಕ ಮನೋಭಾವವನ್ನು ಬೆಳೆಸುತ್ತದೆ ಎಂದು ತಿಳಿಸಿದರು.
ಫ್ರೆಂಡ್ಸ್ ಸೆಂಟರ್ ಸಂಸ್ಥಾಪಕ ಸದಸ್ಯ, ಮಾಜಿ ಅಧ್ಯಕ್ಷ ಶ್ಯಾಮ್‌ಪ್ರಸಾದ್ ಮಾತನಾಡಿ, ಫ್ರೆಂಡ್ಸ್ ಸೆಂಟರ್ ಸಮಾಜಮುಖಿ ಚಟುವಟಿಕೆಗಳಿಂದ ವಿಶೇಷ ಪ್ರಾಮುಖ್ಯತೆ ಹೊಂದಿದ್ದು, ಇಂತಹ ಕಾರ್ಯಕ್ರಮಗಳು ಸಂತೋಷವನ್ನು ಇಮ್ಮುಡಿಗೊಳಿಸುತ್ತವೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಮಾಜಿ ಉಪಾಧ್ಯಕ್ಷ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ ಮಾತನಾಡಿ, ಫ್ರೆಂಡ್ಸ್ ಸೆಂಟರ್ ಸಾಮಾಜಿಕ ಕೆಲಸಗಳ ಜತೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದೆ. ಶಿಕ್ಷಣ ಕಾರ್ಯಗಳಿಗೆ ಅಗತ್ಯ ನೆರವು ಒದಗಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
Friends Center Shivamogga ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಬಿ.ಜಿ.ಧನರಾಜ್ ಮಾತನಾಡಿ, ಕುಟುಂಬ ಸದಸ್ಯರು ಒಟ್ಟುಗೂಡಿ ಪರಸ್ಪರ ಸಮಯ ನೀಡಲು ಇಂತಹ ಸಂಗೀತ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಫ್ರೆಂಡ್ಸ್ ಸೆಂಟರ್ ಮಾಜಿ ಅಧ್ಯಕ್ಷ ಜಿ.ವಿಜಯಕುಮಾರ್, ವಿ.ನಾಗರಾಜ, ಎಸ್.ದತ್ತಾತ್ರಿ, ಮಲ್ಲಿಕಾರ್ಜುನ ಕಾನೂರು, ಮೋಹನ್, ಶ್ರೀರಂಜಿನಿ ದತ್ತಾತ್ರಿ, ಮಹೇಶ್ವರಪ್ಪ, ವೆಂಕಟೇಶ, ಉಮಾ ವೆಂಕಟೇಶ, ಬಿಂದು ವಿಜಯಕುಮಾರ್, ಖಜಾಂಚಿ ರಮೇಶ್, ಕಾರ್ಯದರ್ಶಿ ರವೀಂದ್ರನಾಥ ಐತಾಳ್, ಶ್ರೀನಿಧಿ ವೆಂಕಟೇಶ್, ಫ್ರೆಂಡ್ಸ್ ಸೆಂಟರ್ ಸದಸ್ಯರು ಇದ್ದರು.