JCI Shivamogga Sahyadri ಸಂವಹನ ಕಲೆಯು ಉತ್ತಮವಾಗಿದ್ದಲ್ಲಿ ನಮ್ಮ ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಹಕಾರಿಯಾಗುತ್ತದೆ ಎಂದು ಜೆಸಿಐ ವಲಯಾಧ್ಯಕ್ಷ ಗೌರೀಶ್ ಭಾರ್ಗವ್ ಹೇಳಿದರು.
ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಮತ್ತು ಜೆಸಿಐ ಶಿವಮೊಗ್ಗ ಕಾಮರ್ಸ್ ವತಿಯಿಂದ ಸಾನ್ವಿ ರೆಸಾರ್ಟ್ ನಲ್ಲಿ ಆಯೋಜಿಸಿದ್ದ ಎರಡು ದಿನಗಳ ಸಂವಹನ ಕೌಶಲ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಉದ್ಯಮ, ವ್ಯವಹಾರ ಸೇರಿದಂತೆ ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಲು ಸಂವಹನ ಅತ್ಯಂತ ಅವಶ್ಯಕವಾಗಿರುತ್ತದೆ. ಉತ್ತಮ ಸಂವಹನ ಕಲೆ ಬಹಳ ಮುಖ್ಯ ಎಂದು ತಿಳಿಸಿದರು.
ಜೆಸಿಐ ರಾಷ್ಟ್ರೀಯ ತರಬೇತುದಾರ ವೇಣುಗೋಪಾಲ್ ಮಾತನಾಡಿ, ಜೀವನದಲ್ಲಿ ಯಶಸ್ಸು ಸಾಧಿಸಲು ಮಾತನಾಡುವ ಕಲೆಯು ಅತ್ಯಂತ ಮುಖ್ಯ. ಬಾಲ್ಯದಲ್ಲಿ ಜೆಸಿಐ ಆಯೋಜಿಸುವ ಇಂತಹ ಪರಿಣಾಮಕಾರಿ ಭಾಷಣ ಕಲೆ ಕಾರ್ಯಾಗಾರದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸಬೇಕು. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಇಂತಹ ಕಾರ್ಯಾಗಾರಗಳು ಸಹಕಾರಿಯಾಗುತ್ತದೆ ಎಂದು ಹೇಳಿದರು.
JCI Shivamogga Sahyadri ಜೆಸಿಐ ವಲಯ ತರಬೇತುದಾರ ಚಂದ್ರಶೇಖರ್ ಮಾತನಾಡಿ, ಸಂವಹನ ಕಲೆಯನ್ನು ಪರಿಣಾಮಕಾರಿಯಾಗಿ ಮಾಡಿಕೊಳ್ಳುವುದರಿಂದ ಸಾಕಷ್ಟು ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ಎಂತಹ ಕಠಿಣ ಸಂದರ್ಭಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಎರಡು ದಿನದ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಘಟಕದ ಅಧ್ಯಕ್ಷ ಜಿ.ಗಣೇಶ್ ಮಾತನಾಡಿ, ಮಾತಿನ ಕಲೆ ಇದ್ದರೆ ಪ್ರಪಂಚದ ಯಾವ ಮೂಲೆಯಲ್ಲಾದರೂ ಧೈರ್ಯದಿಂದ ಬದುಕಬಹುದು. ಆರ್ಥಿಕ ಪ್ರಗತಿ ಸಾಧಿಸಲು ಸಹ ಸಂವಹನ ನೆರವಾಗುತ್ತದೆ. ಇಂತಹ ಕಾರ್ಯಾಗಾರಗಳು ಬದುಕಿನಲ್ಲಿ ಮಹತ್ತರ ಸಕಾರಾತ್ಮಕ ಬದಲಾವಣೆ ತರುತ್ತವೆ ಎಂದರು.
ಜೆಸಿ ಪ್ರಮೋದ್ ಶಾಸ್ತ್ರಿ, ಶೇಷಗಿರಿ, ಜೆಸಿಐ ಶಿವಮೊಗ್ಗ ಕಾಮರ್ಸ್ ಅಧ್ಯಕ್ಷ ನಿವೇದಿತಾ ವಿಕಾಸ್, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಜೆಸಿಐ ಪದಾಧಿಕಾರಿಗಳು ಹಾಜರಿದ್ದರು.