Yuva Nidhi Scheme ಯುವನಿಧಿ, ಉದ್ಯೋಗ ಪಡೆಯಲು ಆರ್ಥಿಕ ಸಹಾಯ ಒದಗಿಸುವ ಉತ್ತಮ ಯೋಜನೆ- ಸಿ.ಎಸ್.ಚಂದ್ರಭೂಪಾಲ್ ‘ಯುವನಿಧಿ’ ಯುವಜನತೆ ಉದ್ಯೋಗ ಪಡೆಯಲು ಆರ್ಥಿಕ ಸಹಕಾರ ಒದಗಿಸುವ ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಯಾವುದೇ ಪದವಿ-ಡಿಪ್ಲೊಮಾ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಈ ಯೋಜನೆಗೆ ನೋಂದಾಯಿಸಿಕೊಳ್ಳಬೇಕೆಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಗುರುವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಯುವಜನ ನೋಂದಣಿ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವನಿಧಿ ವಿದ್ಯಾರ್ಥಿಗಳು ಪದವಿ, ಡಿಪ್ಲೊಮಾ ಮುಗಿಸಿದ ಮೇಲೆ ಕೆಲಸ ಹುಡುಕಲು, ಇತರೆ ಪರೀಕ್ಷೆಗಳನ್ನು ಬರೆಯಲು ಆರ್ಥಿಕವಾಗಿ ಸಹಕಾರ ನೀಡುವ ಒಂದು ಯೋಜನೆಯಾಗಿದೆ. ಪದವಿ ಮುಗಿದ ನಂತರ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಅಥವಾ ಉತ್ತಮ ಉದ್ಯೋಗ ಪಡೆಯಬೇಕೆಂದು ಅನೇಕ ಕನಸುಗಳನ್ನು ಕಾಣುತ್ತಾರೆ. ಆದರೆ ಮನೆಯಲ್ಲಿ ಕೆಲಸ ಹುಡುಕಲು, ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಹಣ ಕೇಳಲು ಕಷ್ಟವಾಗುತ್ತದೆ. ಯುವಜನತೆಯ ಈ ಭಾರ ಕಡಿಮೆ ಮಾಡಲೆಂದೇ ರಾಜ್ಯ ಸರ್ಕಾರ ಇವರಲ್ಲಿ ಆರ್ಥಿಕ ಸ್ವಾವಲಂಬನೆ ತರಲು ಈ ಯೋಜನೆಯನ್ನು ಜಾರಿಗೊಳಿಸಿದೆ.
ರಾಜ್ಯ ಸರ್ಕಾರ ಜನರ ಕಲ್ಯಾಣಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದು ಯುವನಿಧಿ ಯೋಜನೆ ಯುವಜನರ ಆಶಾಕಿರಣವಾಗಿದೆ. ನಿರುದ್ಯೋಗಿ ಪದವೀಧರರಿಗೆ ಕೇವಲ ನಿರುದ್ಯೋಗ ಭತ್ಯೆ ನೀಡುವುದು ಮಾತ್ರ ಸರ್ಕಾರದ ಉದ್ದೇಶವಲ್ಲ, ಹಲವಾರು ಆರ್ಥಿಕ, ಕೌಟುಂಬಿಕ ಸಮಸ್ಯೆಗಳಿಂದ ಬಳಲುತ್ತಿರುವ ಯುವ ಜನರಿಗೆ ಆತ್ಮವಿಶ್ವಾಸ ತುಂಬುವುದಲ್ಲದೇ ತಮ್ಮ ವಿದ್ಯಾರ್ಹತೆಗೆ ತಕ್ಕ ಕೌಶಲ್ಯವನ್ನು ಪಡೆದುಕೊಳ್ಳಲು ಸಹ ಸರ್ಕಾರ ನೆರವಾಗುತ್ತಿದೆ.
ಯಾವುದೇ ಪದವಿ ಮುಗಿಸಿ ನೋಂದಣಿಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.3 ಸಾವಿರ ಹಾಗೂ ಡಿಪ್ಲೊಮಾ ಮುಗಿಸಿದ ಅಭ್ಯರ್ಥಿಗಳಿಗೆ ರೂ.1500 ಗಳನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತಿದೆ. ಎಲ್ಲ ಅರ್ಹ ಅಭ್ಯರ್ಥಿಗಳು ನೋಂದಣಿಯಾಗುವ ಮೂಲಕ ಇದರ ಸದುಪಯೋಗ ಪಡೆಯಬೇಕು. ಏಕಾಗ್ರತೆಯಿಂದ ವಿದ್ಯಾರ್ಥಿಗಳು ಓದಿ, ಉತ್ತಮ ಅಂಕ ಪಡೆದು ಕಾಲೇಜಿಗೆ ಹಾಗೂ ಪೋಷಕರಿಗೆ ಕೀರ್ತಿ ತರಬೇಕೆಂದು ಹಾರೈಸಿದರು.
Yuva Nidhi Scheme ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಅಧ್ಯಕ್ಷರಾದ ಹೆಚ್ ಎಂ ಮಧು ಮಾತನಾಡಿ, ಯುವಜನತೆಯ ಭವಿಷ್ಯಕ್ಕೊಂದು ಉತ್ತಮ ಯೋಜನೆಯೇ ಯುವನಿಧಿ. ಯಾವುದೇ ಪದವಿ, ಡಿಪ್ಲೊಮಾ ಮುಗಿದ ಮೇಲೆ ಪೋಷಕರ ಮೇಲೆ ಅವಲಂಬಿತರಾಗುವುದನ್ನು ತಪ್ಪಿಸಲು, ಉದ್ಯೋಗ ಪಡೆಯಲು ಸಹಕರಿಸಲು ಸರ್ಕಾರ ಯುವನಿಧಿ ಯೋಜನೆ ಜಾರಿಗೊಳಿಸಿದೆ. ಪದವಿ ಮುಗಿದ ಕೂಡಲೇ ಈ ಯೋಜನೆಗೆ ನೋಂದಾಯಿತರಾಗುವ ಮೂಲಕ ಈ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಿಲ್ಲಾ ಉದ್ಯೋಗಾಧಿಕಾರಿ ಕಲಂದರ್ ಖಾನ್ ಮಾತನಾಡಿ, ಪದವಿ ಹಾಗೂ ಡಿಪ್ಲೊಮಾ ವಿದ್ಯಾಭ್ಯಾಸ ಪೂರ್ಣಗೊಳಿಸಿ ಉದ್ಯೋಗದ ಹುಡುಕಾಟದಲ್ಲಿ ತೊಡಗುವ ಯುವ ಜನರಿಗೆ ನಿರುದ್ಯೋಗ ಭತ್ಯೆಯ ಭದ್ರತೆ ಒದಗಿಸುವ ಯುವನಿಧಿ ಯೋಜನೆಗೆ ಜನವರಿ 12 ರಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಶಿವಮೊಗ್ಗದ ಫ್ರೀಡಂ ಪಾರ್ಕಿನಲ್ಲಿ ಚಾಲನೆ ನೀಡಿದರು.
ಎಂಬಿಬಿಎಸ್, ಇಂಜಿನಿಯರಿಂಗ್, ಬಿಡಿಎಸ್ ಸೇರಿದಂತೆ ಯಾವುದೇ ಪದವಿ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳು ಫಲಿತಾಂಶ ಬಂದ ತಕ್ಷಣ ಯುವನಿಧಿ ಯೋಜನೆಗೆ ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿಯಾಗಬೇಕು. ಇದಕ್ಕೆ ಆದಾಯ ಮಿತಿ, ಜಾತಿ, ಧರ್ಮದ ಮಿತಿ ಇರುವುದಿಲ್ಲ. . ಬದಲಾಗಿ ತಮ್ಮ ಡಿಜಿ ಲಾಕರ್‌ನಲ್ಲಿರುವ ದಾಖಲೆಗಳಿಗೆ ಲಿಂಕ್ ಮಾಡಿದರೆ ಸಾಕು. ಗ್ರಾಮ ಒನ್, ಶಿವಮೊಗ್ಗ ಒನ್ ನಲ್ಲಿ ಸಹ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಮೊದಲು ಒಂದು ತಿಂಗಳಿಗೊಮ್ಮೆ ತಮ್ಮ ಸ್ಥಿತಿಗತಿ ಬಗ್ಗೆ ಸ್ವಯಂ ಘೋಷಣೆ ಮಾಡಬೇಕಿತ್ತು. ಇದೀಗ ಈ ಅವಧಿಯನ್ನು ಮೂರು ತಿಂಗಳಿಗೆ ವಿಸ್ತರಿಸಲಾಗಿದೆ. ಸ್ನಾತಕೋತ್ತರ ಪದವಿ ಮುಗಿಸಿದವರು ಸಹ ಈ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು. ನೋಂದಣಿಗೆ ಸಂಬಂಧಿಸಿದ ಯಾವುದೇ ತಾಂತ್ರಿಕ ಸಮಸ್ಯೆ, ಇತರೆ ಮಾಹಿತಿ ಬೇಕಿದ್ದಲ್ಲಿ ಟೋಲ್‌ಫ್ರೀ ಸಹಾಯವಾಣಿ ಸಂಖ್ಯೆ 1800 599 7154 ಗೆ ಕರೆ ಮಾಡಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಬಿ.ಚೆನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ಶಾಸ್ತç ವಿಭಾಗದ ಸಹ ಪ್ರಾಧ್ಯಾಪಕ ಪಾಂಡುರಂಗ ಸ್ವಾಗತಿಸಿದರು.
Yuva Nidhi Scheme ಯುವನಿಧಿ, ಉದ್ಯೋಗ ಪಡೆಯಲು ಆರ್ಥಿಕ ಸಹಾಯ ಒದಗಿಸುವ ಉತ್ತಮ ಯೋಜನೆ- ಸಿ.ಎಸ್.ಚಂದ್ರಭೂಪಾಲ್
Date: