District Chamber of Commerce and Industry ತಂತ್ರಜ್ಞಾನ ಯುಗದಲ್ಲಿ ನಾವು ಎಷ್ಟೇ ಮುಂದುವರೆದರೂ ಸಹ ಕೌಶಲ್ಯ ಇಲ್ಲದಿದ್ದರೆ ಜೀವನದಲ್ಲಿ ಸಫಲತೆಯನ್ನು ಕಾಣುವುದು ಕಷ್ಟ. ಆದ್ದರಿಂದ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆವರಣದಲ್ಲಿ ಅಡ್ವಾನ್ಸ್ಡ್ ಸ್ಕಿಲ್ ಡೆವಲಪ್ಮೆಂಟ್ ಸಮಿತಿ ವತಿಯಿಂದ ಹಾಗೂ ಬಾಷ್ ಸಂಸ್ಥೆ ಜೊತೆಗೂಡಿ ಹಮ್ಮಿಕೊಳ್ಳಲಾದ ಕೌಶಲ್ಯ, ಸಾಮಾನ್ಯ ಜ್ಞಾನ ಮತ್ತು ವ್ಯಕ್ತಿತ್ವ ವಿಕಸನ ಜೊತೆಗೆ ಹೊಸ ಹೊಸ ತಂತ್ರಜ್ಞಾನ ಮಾಹಿತಿ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನದ ಅತ್ಯಂತ ಪರಿಣಾಮಕಾರಿಯಾಗಿದ್ದು, ಪ್ರಧಾನಮಂತ್ರಿ ಅವರ ಆಶಯದಂತೆ ಇತ್ತೀಚಿನ ದಿನಗಳಲ್ಲಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಸಾಕಷ್ಟು ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ತರಬೇತಿಗಳಲ್ಲಿ ಭಾಗವಹಿಸಿ ಮುಂದಿನ ಕಠಿಣ ಸವಾಲುಗಳ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬೇಕು ಎಂದು ನುಡಿದರು.
ಕೌಶಲ್ಯ ಅಭಿವೃದ್ಧಿ ಸಮಿತಿ ಚೇರ್ಮನ್ ವಸಂತ್ ಹೋಬಳಿದಾರ್ ಮಾತನಾಡಿ, ಇಂದು ಪ್ರತಿಯೊಂದು ಕ್ಷೇತ್ರಗಳನ್ನು ಸಹ ಕೌಶಲ್ಯದ ಕೊರತೆ ತುಂಬಾ ಇದೆ. ವಿದ್ಯೆಯ ಜೊತೆಗೆ ಕೌಶಲ್ಯವನ್ನು ಸಮರ್ಪಕವಾಗಿ ರೂಡಿಸಿಕೊಂಡರೆ ತಕ್ಷಣ ಉದ್ಯೋಗ ಅವಕಾಶಗಳು ಸಿಗುತ್ತವೆ ಎಂದು ನುಡಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿಕಟಪೂರ್ವ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಬಹಳ ದಿನದ ಕನಸು ಇದಾಗಿದೆ. ಎಲ್ಲಾ ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಉತ್ತಮವಾದ ಬದುಕು ಕಟ್ಟಿಕೊಳ್ಳಲು ಶಿಬಿರ ಸಹಕಾರಿಯಾಗುತ್ತದೆ. ಆದ್ದರಿಂದ ಇಂತಹ ಕೌಶಲ್ಯ ತರಬೇತಿಯಲ್ಲಿ ತೊಡಗಿಸಿಕೊಂಡು ಮುಂದುವರೆದರೆ ಪರಿಪೂರ್ಣ ವ್ಯಕ್ತಿಗಳಾಗುತ್ತಾರೆ ಎಂದರು.
ಕಾರ್ಯದರ್ಶಿ ಎ.ಎಂ.ಸುರೇಶ್ ಮಾತನಾಡಿ, ವಿದ್ಯೆ ಕಡಿಮೆ ಇದ್ದರೂ ಸಹ ಕೌಶಲ್ಯ ಇದ್ದರೆ ಸುಲಭವಾಗಿ ಉದ್ಯೋಗಗಳನ್ನು ಪಡೆಯಬಹುದು. ಸ್ವಂತ ಉದ್ಯಮದಲ್ಲಿ ಯಶಸ್ಸು ಪಡೆಯಬಹುದು ಎಂದರು.
District Chamber of Commerce and Industry ಅಮೃತ್ ನೋನಿ ಸಂಸ್ಥೆಯ ಸಿಇಒ ಶಶಿಕಾಂತ್ ನಾಡಿಗ್ ಮಾತನಾಡಿ, ಕೌಶಲ್ಯದ ಕೊರತೆಯಿಂದ ಸಾಕಷ್ಟು ಜನ ಪ್ರತಿಭಾವಂತ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿದ್ದಾರೆ. ಅಮೂಲ್ಯವಾದ ಸಮಯವನ್ನು ಹಾಳು ಮಾಡದೆ ಇಂತಹ ತರಬೇತಿ ಶಿಬಿರದ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ , ಡಾ. ಲಕ್ಷ್ಮೀದೇವಿ ಗೋಪಿನಾಥ್, ಸ್ಕಿಲ್ ಡೆವಲಪ್ಮೆಂಟ್ ಟ್ರೈನರ್ ಕುಮಾರ್ ದಯಾನಿಧಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.