Shivamogga District Chamber of Commerce and Industry ಮಕ್ಕಳಿಗೆ ಬೇಸಿಗೆ ಶಿಬಿರಗಳು ಅತ್ಯಂತ ಅವಶ್ಯಕ. ಇಂತಹ ಶಿಬಿರಗಳಲ್ಲಿ ಮಕ್ಕಳು ಭಾಗವಹಿಸುವುದರಿಂದ ಕ್ರಿಯಾಶೀಲ ಹಾಗೂ ಸೃಜನಶೀಲ ವ್ಯಕ್ತಿತ್ವ ವೃದ್ಧಿಸುತ್ತದೆ ಎಂದು ಕವಯತ್ರಿ ಸವಿತಾ ನಾಗಭೂಷಣ್ ಹೇಳಿದರು.
ಕಲಾವಿದ ಚನ್ನಕೇಶವ ಅವರ ನೆನಪಿನಾರ್ಥ ಶಿವಮೊಗ್ಗದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಎಎಸ್‌ಕೆ ಚೆಲುವರಂಗ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿ, 10 ವರ್ಷಗಳಿಂದ ಎಎಸ್‌ಕೆ ಚೆಲುವರಂಗ ಸಂಸ್ಥೆಯು ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, 11 ಉತ್ತಮ ಪ್ರಸಿದ್ಧ ನಾಟಕಗಳನ್ನು ಪ್ರಸ್ತುತಪಡಿಸಿದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಮಕ್ಕಳು ಹೊಸ ಹೊಸ ವಿಷಯಗಳನ್ನು ಕಲಿಯುವುದರ ಜತೆಯಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕು. ಗುರು ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.
ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್ ಮಾತನಾಡಿ, ಚೆಲುವರಂಗ ಬೇಸಿಗೆ ಶಿಬಿರಕ್ಕೆ ಕಲಾವಿದರಾದ ರಾಜೇಶ್ವರಿ ಕೊಡಗು, ಎಸ್.ಎಫ್.ಹುಸೇನಿ, ಸತೀಶ್ ಪುರಪ್ಪೆಮನೆ, ಲಕ್ಷ್ಮೀ ನಿವಾಸ ಧಾರವಾಹಿಯ ಚಂದ್ರಶೇಖರ ಶಾಸ್ತ್ರಿ, ಇನ್ನಿತರ ಪ್ರತಿಭಾನ್ವಿತ ಕಲಾವಿದರು ಭಾಗವಹಿಸಿ ಮಾರ್ಗದರ್ಶನ ನೀಡುವರು ಎಂದು ತಿಳಿಸಿದರು.
Shivamogga District Chamber of Commerce and Industry ಕಿರುತೆರೆ ಕಲಾವಿದ ಅಜಯ್ ನೀನಾಸಂ ಮಾತನಾಡಿ, ಶಿಬಿರದ ರೂಪುರೇಷೆ ಹಾಗೂ ಬೇಸಿಗೆ ಶಿಬಿರದ ಬಗ್ಗೆ ವಿವರಣೆ ನೀಡಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಇಂತಹ ಶಿಬಿರಗಳಲ್ಲಿ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರಹಾಕುವ ಜತೆಗೆ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ ಎಂದರು.
ಪ್ರಮುಖರಾದ ಗಣೇಶ್ ಬಿಳಗಿ, ತೇಜಶ್ರೀ ಹಾಗೂ ಎಎಸ್‌ಕೆ ಚೆಲುವರಂಗ ತಂಡದ ಕಲಾವಿದರ ಹಾಜರಿದ್ದರು.