Chamber Of Commerce Shivamogga ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಲ್ಲಿ, ಉದ್ಯೋಗಕ್ಕಾಗಿ ಸಂದರ್ಶನಗಳನ್ನು ಧೈರ್ಯವಾಗಿ ಎದುರಿಸುವಲ್ಲಿ, ಸ್ಪರ್ಧಾಳುವಿನ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಕ್ವಿಜ್ ಸ್ಪರ್ಧೆಗಳು ಮಹತ್ತರ ಪಾತ್ರವನ್ನು ವಹಿಸುತ್ತವೆ ಎಂದು ಶಿವಮೊಗ್ಗ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಗೋಪಿನಾಥ್ ಬಿ . ಅವರು ಅಭಿಪ್ರಾಯ ಪಟ್ಟರು.
ಶಿವಮೊಗ್ಗ ನಾಲೆಡ್ಜ್ ಫೋರಂ ವತಿಯಿಂದ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೆರೋ ಕ್ಯಾಸ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತರ್ ಕಾಲೇಜು ಮಟ್ಟದ ಕ್ವಿಜ್ ಸ್ಪರ್ಧೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಸ್ಪರ್ಧೆಗಳು ಯುವಜನತೆಯ ಜ್ಞಾನವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿರುವುದರಿಂದ ಐಎಎಸ್, ಐಪಿಎಸ್, ಕೆಪಿಎಸ್ ಪ ಪರೀಕ್ಷೆಗಳನ್ನು ಸುಲಲಿತವಾಗಿ ಬರೆದು ಯಶಸ್ಸು ಕಾಣಬಹುದು ಎಂದು ವಿದ್ಯಾರ್ಥಿಗಳನ್ನು ಉತ್ತೇಜಿಸಿ ಮಾತನಾಡಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಶ್ರೀಯುತ ಜಿ ವಿಜಯ್ ಕುಮಾರ್ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಪೀಳಿಗೆ ಯಶಸ್ಸನ್ನು ಕಾಣಬೇಕಾದರೆ ಶಿಕ್ಷಣದೊಂದಿಗೆ ವೃತ್ತಿ ಕೌಶಲ್ಯಗಳು ಪ್ರಮುಖವಾಗಿರುವುದರಿಂದ ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸುವುದರಿಂದ ಅವರು ಯಶಸ್ಸನ್ನು ಕಾಣಲು ಸಾಧ್ಯ ಎಂದರು.
ಫೋರಂನ ಕಾರ್ಯದರ್ಶಿ ಡಾ. ಕೆ. ವಿ. ಗಿರಿಧರ್ ಅವರು ಮಾತನಾಡಿ, ನಮ್ಮಲ್ಲಿ ಪದವೀಧರರೇನೋ ಸಾಕಷ್ಟಿದ್ದಾರೆ, ಆದರೆ ಉದ್ಯೋಗಕ್ಕೆ ಬೇಕಾದ ಕೌಶಲವಿರುವ ವಿದ್ಯಾವಂತರ ಸಂಖ್ಯೆ ತೀರ ಅತ್ಯಲ್ಪ ಎಂದು ವಿಷಾದಿಸಿ, ನಮ್ಮಲ್ಲಿನ ಸಾಮಾನ್ಯ ಜ್ಞಾನದ ಕೊರತೆ, ಸಂವಹನ ಕೌಶಲ್ಯದ ಕೊರತೆ, ಬದ್ಧತೆಯ ಅಭಾವವೇ ಇದಕ್ಕೆಲ್ಲ ಕಾರಣ ಎಂದು ನುಡಿದರು.
ಫೋರಂ ಉಪಾಧ್ಯಕ್ಷ ಉದ್ಯಮಿ ಚೇತನ್ ಅವರು ಮಾತನಾಡಿ, ಶಿವಮೊಗ್ಗ ನಾಲೆಡ್ಜ್ ಫೋರಂ ನಿರಂತರವಾಗಿ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ. ಇದರ ಪ್ರಯೋಜನಗಳನ್ನು ಪಡೆಯಬೇಕು ಎಂದು ಕರೆ ನೀಡಿದರು.
ಫೋರಂನ ಅಧ್ಯಕ್ಷ ಡಾ. ಶಂಕರ್ ನಾರಾಯಣ್ ಅವರು ಮಾತನಾಡಿ ವಿದ್ಯಾರ್ಥಿಗಳು ಕೌಶಲಗಳ ಆಗರವಾಗಬೇಕು.ತನ್ಮೂಲಕ ಭವ್ಯ ಭಾರತ ನಿರ್ಮಾಣದ ಭಾಗವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
Chamber Of Commerce Shivamogga ಹೊಯ್ಸಳ ಕಾಲೇಜಿನ ಪ್ರಾಂಶುಪಾಲರಾದ ಪ್ರೌಢಶಾಲೆ ವಿಲಿಯಂ ಡಿ’ಸೋಜಾ, ಭಾರತ್ ಹಾಲ್ ಮಾರ್ಕಿಂಗ್ ಸೆಂಟರ್ ನ ಉದ್ಯಮಿ ಸುಮಿತ್ ಇವರು ಸಾಂದರ್ಭಿಕವಾಗಿ ಮಾತನಾಡಿದರು.
ವಿವಿಧ ಕಾಲೇಜಿಗಳ 16 ತಂಡಗಳು ಈ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಎಜುರೈಟ್ ಕಾಲೇಜ್ ಪ್ರಥಮ ಸ್ಥಾನವನ್ನು ಪಡೆಯಿತು . ಈ ತಂಡವನ್ನು ತರುಣ್ ಕಾರಂತ್ ಕೆ. ಬಿ. ಮತ್ತು ರುಚಿತ್ ಕೆ. ರಾಜ್ ಪ್ರತಿನಿಧಿಸಿದ್ದರು.
ಜೆಎನ್ಎನ್ ಸಿಇ ಯ ಚಿನ್ಮಯ ಶೇಖರ್ ಮತ್ತು ವಿನಾಯಕ್ ಹೆಗಡೆ ದ್ವಿತೀಯ ಬಹುಮಾನ ಗಳಿಸಿದರು. ಎನ್‌ಇಎಸ್ಐಎಎಸ್ ಕಾಲೇಜಿನ ತರುಣ್ ಗೋಯಲ್ ಮತ್ತು ಭೂಮಿಕಾ ನಾಡಿಗ್ ತೃತೀಯ ಸ್ಥಾನ ಗಳಿಸಿದರು. ಕಿರಣ್ ಉಡುಪ ಜಿ. ವಿ. ಕಾರ್ಯಕ್ರಮ ನಿರೂಪಿಸಿದರು.