Klive Special Article ಮಾಡೋಣ ಬನ್ನಿ ರಾಮ ನಾಮ ಸ್ಮರಣೆಯ…..
ಒಮ್ಮೆ ನಾರದರು ಬ್ರಹ್ಮನಲ್ಲಿ ಹೋಗಿ ಸತ್ಸಂಗದ ಮಹತ್ವ ಏನೆಂದು ಕೇಳಿದರು. ಆಗ ಬ್ರಹ್ಮದೇವನು ಭೂಲೋಕದಲ್ಲಿ ಒಂದು ಪಾರಿವಾಳವಿದೆ ಅದರ ಬಳಿ ಹೋಗಿ ಕೇಳು ನಿನಗೆ ಅಲ್ಲಿ ಉತ್ತರ ಸಿಗುತ್ತದೆ ಎಂದು ಹೇಳಿ ಕಳುಹಿಸುತ್ತಾರೆ. ಅದರಂತೆ ನಾರದರು ಪಾರಿವಾಳವೊಂದನ್ನು ಕಂಡು ಅದರ ಬಳಿ ಸತ್ಸಂಗದ ಮಹತ್ವ ಏನು ಎಂದು ಕೇಳುತ್ತಾರೆ. ಆಗ ಆ ಪಾರಿವಾಳವು ಒಂದು ಮರಿಗೆ ಜನ್ಮವಿತ್ತು ಆ ಕೂಡಲೇ ಮರಣಿಸುತ್ತದೆ. ತನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲವಲ್ಲ ಎಂದು ಮತ್ತೆ ಬ್ರಹ್ಮದೇವನ ಬಳಿ ಹೋಗಿ ಅದೇ ಪ್ರಶ್ನೆ ಕೇಳಿದಾಗ, ಆಗ ಬ್ರಹ್ಮದೇವನು ಭೂಲೋಕದಲ್ಲಿರುವ ಹಸುವೊಂದನ್ನು ತೋರಿಸಿ ಅದರ ಬಳಿ ಕೇಳು ನಿನ್ನ ಪ್ರಶ್ನೆಗೆ ಉತ್ತರ ದೊರಕುತ್ತದೆ ಎಂದು ಹೇಳಿ ಕಳುಹಿಸುತ್ತಾರೆ. ಹಾಗೆಯೇ ಹಸುವಿನ ಬಳಿ ನಾರದರು ಬಂದು ಸತ್ಸಂಗದ ಮಹತ್ವದ ಕುರಿತಾಗಿ ಕೇಳಿದಾಗ ಅದು ಕೂಡ ಒಂದು ಕರುವಿಗೆ ಜನ್ಮವಿತ್ತು ಕೂಡಲೇ ಸಾವನ್ನಪ್ಪುತ್ತದೆ. ಇಲ್ಲೂ ತನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲವಲ್ಲ ಎಂದು ನಾರದರು ಮತ್ತೊಮ್ಮೆ ಬ್ರಹ್ಮದೇವನ ಬಳಿ ಹೋಗಿ ಕೇಳುತ್ತಾರೆ. ಆಗಲೂ ಬ್ರಹ್ಮದೇವನು ಭೂಲೋಕದಲ್ಲಿ ಒಬ್ಬ ಪ್ರತಿಷ್ಠಿತ ರಾಜನಿಗೆ ಒಂದುಬಹು ವರ್ಷಗಳ ನಂತರ ಗಂಡು ಮಗು ಆಗಿದೆ ಅದರ ಬಳಿ ಹೋಗಿ ಕೇಳು ನಿನ್ನ ಪ್ರಶ್ನೆಗೆ ಅಲ್ಲಿ ಉತ್ತರ ಸಿಗುತ್ತದೆ ಎನ್ನುತ್ತಾರೆ. ಆಗ ನಾರದರಿಗೆ ಆತಂಕ ಮತ್ತು ಭಯ ಎರಡೂ ಉಂಟಾಗುತ್ತದೆ. ಮೊದಲೇ ನಡೆದ ಘಟನೆಗಳನ್ನು ನಡೆಸಿಕೊಂಡು ಇಲ್ಲೂ ಅಂತಹುದೇ ಅನಾಹುತ ನಡೆದು ಹೋದರೆ ರಾಜ ತನ್ನ ತಲೆ ತೆಗೆಯುತ್ತಾನೆ, ಎಂದು ಬ್ರಹ್ಮನ ಬಳಿ ತನಗಾದ ಸಂಕಟ ಹೇಳಿಕೊಂಡಾಗ ನೀ ಹೋಗಿ ಆ ಮಗುವಿನ ಬಳಿ ಕೇಳು ಖಂಡಿತವಾಗಿಯೂ ನಿನ್ನ ಪ್ರಶ್ನೆಗೆ ಉತ್ತರ ದೊರಕಿಯೇ ದೊರಕುತ್ತದೆ ಎಂಬ ಭರವಸೆ ಬ್ರಹ್ಮ ನೀಡುತ್ತಾನೆ. ಹಾಗೆಯೇ ಆಗಲಿ ಇದೊಂದು ಪ್ರಯತ್ನ ಮಾಡುತ್ತೇನೆ ಎಂದು ಭಯದಿಂದಲೇ ಆ ಮಗುವಿಗೆ ಸತ್ಸಂಗದ ಮಹತ್ವ ಏನೆಂದು ಕೇಳಿದಾಗ ಆ ಕೂಡಲೇ ಆ ಮಗು ನಗುನಗುತ್ತಾ ‘ಎಲೈ ನಾರದರೇ, ಸತ್ಸಂಗದ ಮಹತ್ವವೇನು ಎಂದು ನೀವು ಕೇಳುತ್ತಿರುವಿರಲ್ಲ ಅದಕ್ಕೆ ನಾನೇ ಸಾಕ್ಷಿ. ನಿಮ್ಮಂತಹ ಸಜ್ಜನರ ಸಂಗದಿಂದಲೇ ಪಾರಿವಾಳವಾಗಿದ್ದ ನಾನು ನಂತರ ಹಸುವಾಗಿ ಈಗ ಮನುಷ್ಯ ಜನ್ಮ ತಾಳಿದ್ದೇನೆ ಇದಕ್ಕಿಂತ ಬೇರೆ ಮಹತ್ವ ಬೇಕೆ?’ ಎಂದು ಸಂತೋಷದಿಂದ ಉತ್ತರಿಸುವ ಘಟನೆಯೇ ನಮಗೆ ಪ್ರೇರೇಪಣೆಯನ್ನು ಕೊಡುವಂತದ್ದಾಗಿದೆ.
Klive Special Article ಸತ್ಸಂಗ ಎಂಬುದು ಸತ್ಪುರುಷರ, ಸದ್ವಿಚಾರಗಳ ಜೊತೆಗಿನ ಸಂಪರ್ಕವೇ ಆಗಿದ್ದು, ಮಾನವ ಜೀವನದ ಅಧ್ಯಾತ್ಮಿಕ ಬೆಳವಣಿಗೆಗೆ ಅತ್ಯಂತ ಮುಖ್ಯವಾದ ಸಾಧನವಾಗಿದ್ದು, ಮನಸ್ಸನ್ನು ಶುದ್ಧಗೊಳಿಸಿ ವ್ಯಕ್ತಿತ್ವವನ್ನು ಉದಾತ್ತಗೊಳಿಸುತ್ತದೆ. ಇದು ಬದುಕಿನ ಮೌಲ್ಯಗಳನ್ನು ಬೆಳೆಸುವ ಒಂದು ಪವಿತ್ರ ಸಂಸ್ಕಾರವಾಗಿದೆ. ಇದರಿಂದ ನೈತಿಕತೆ ಬೆಳೆಯುತ್ತದೆ. ಪರಿವರ್ತನೆಯ ಮಾರ್ಗವಾಗಿ ಅನೇಕರು ತಮ್ಮ ಜೀವನದ ದೃಷ್ಟಿಕೋನವನ್ನೇ ಬದಲಿಸಿಕೊಂಡ ಉದಾಹರಣೆಗಳಿವೆ. ಮನಸ್ಸಿಗೆ ಶಾಂತಿ ದೊರೆತು, ದೋಷಗಳಿಂದ ವ್ಯಕ್ತಿ ದೂರವಿರುವಂತೆ ಆಗುತ್ತದೆ. ಇದನ್ನೇ ಸಾಧನೆ- -ಸೇವೆ-ಸತ್ಸಂಗ ಎಂದು ಆರ್ಟ್ ಆಫ್ ಲಿವಿಂಗ್ ನ ಪರಮಪೂಜ್ಯ ಗುರುಗಳಾದ ಶ್ರೀ ಶ್ರೀ ರವಿಶಂಕರ್ ಅವರು ಹೇಳಿರುವುದು. ಮನುಷ್ಯ ಗುರು ಮುಖೇನ ಕಲಿಯುವಂತಹ ವಿದ್ಯೆಯಾಗಿ ಅದನ್ನು ಆತ ನಿತ್ಯ ಅನುಷ್ಠಾನ ಮಾಡಿ ಸಾಧನೆ ಮಾಡುತ್ತಾನೆ. ಅದರಿಂದ ಆ ವ್ಯಕ್ತಿ ವಿಕಾಸವಾಗುತ್ತಾನೆ. ವ್ಯಕ್ತಿಯ ವಿಕಾಸವಾದರೆ ಖಂಡಿತವಾಗಿಯೂ ರಾಷ್ಟ್ರದ ವಿಕಾಸವಾದಂತೆಯೇ. ನಂತರ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕಾರ್ಯವೆಸಗತೊಡಗುತ್ತಾನೆ, ಅದರಿಂದಲೇ ಅವನಿಗೆ ಸಜ್ಜನರ ಸಹವಾಸ ದೊರೆಯುತ್ತದೆ ಎಂದಿರುವುದು. ಇದು ಭಗವನ್ ನಾಮ ಸ್ಮರಣೆಯಿಂದ ಸಾಧ್ಯ ಎಂದು ಹೇಳಿ ಭಜನೆಯ ಮೂಲಕ ಈ ಸಾಧನೆ ಮಾಡಬಹುದು. ಇಂತಹ ಸತ್ಸಂಗ ಒಂದು ಶಿವಮೊಗ್ಗದಲ್ಲಿ ಛಾಯಣ್ಣನವರಿಂದ ಏರ್ಪಡಿಸಿರುವುದು ವಿಶೇಷವೇ ಸರಿ.
ಪರಮಪೂಜ್ಯ ಶ್ರೀ ಶ್ರೀ ಸೂರ್ಯ ಪಾದ ಸ್ವಾಮೀಜಿ (ಛಾಯಣ್ಣ )
ಪರಮಪೂಜ್ಯ ಶ್ರೀ ಶ್ರೀ ಸೂರ್ಯ ಪಾದ ಸ್ವಾಮೀಜಿಯವರು ಎಲ್ಲರಿಗೂ ಛಾಯಣ್ಣ ಎಂದೇ ಚಿರಪರಿಚಿತ. ಇವರ ಪೂರ್ವಾಶ್ರಮದ ಹೆಸರು ಎಂ. ಎಸ್. ಛಾಯಾಪತಿ ಎಂದು. 90ರ ದಶಕದಲ್ಲಿ ಇವರು ಬೆಂಗಳೂರಿನ ಪ್ರತಿಷ್ಠಿತ ಆರ್ ವಿ ಇಂಜಿನಿಯರಿಂಗ್ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು. ಅನಿಲ್ ಕುಂಬ್ಳೆ ಯಾದಿಯಾಗಿ ಅನೇಕ ಶಿಷ್ಯ ವೃಂದವನ್ನ ಹೊಂದಿದಂತಹ ಇವರು ಆಗಿನ ಕಾಲದಲ್ಲಿ ಮಕ್ಕಳುಗಳಿಗೆ ಉಚಿತವಾಗಿ ಟ್ಯೂಷನ್ ಸಹ ಮಾಡುತ್ತಿದ್ದರು. ಭೌತಶಾಸ್ತ್ರಕ್ಕೂ ಅಧ್ಯಾತ್ಮಕ್ಕೂ ಒಂದು ವಿಶೇಷವಾದ ನಂಟಿದೆ. ಅದರಂತೆ ಇವರಿಗೆ ಬಾಲ್ಯದಿಂದಲೂ ಕೂಡ ರಾಮಕೃಷ್ಣ ಮಿಷನ್ ಹಾಗೂ ಚಿನ್ಮಯ ಮಿಷನ್ ಇವುಗಳ ಒಡನಾಟ ಇದ್ದ ಕಾರಣ ಅಧ್ಯಾತ್ಮದ ಕಡೆಗೆ ಒಲವು ಹೆಚ್ಚು ಮೂಡಿತು. ಆದಕಾರಣ ಎಲ್ಲೇ ಸತ್ಸಂಗ ನಡೆದರೂ ಇವರು ತಪ್ಪದೇ ಅಲ್ಲಿಗೆ ಹೋಗಿ ಅದರಲ್ಲಿ ಭಾಗವಹಿಸುತ್ತಿದ್ದರು. ಅದರಲ್ಲಿಯೂ ಸ್ವಾಮಿ ಪುರುಷೋತ್ತಮಾನಂದಜೀ ಎಂದರೆ ಪಂಚಪ್ರಾಣ. ಅವರ ಸತ್ಸಂಗ ಮುಗಿಸಿ ಮನೆಗೆ ಬಂದ ಮೇಲೆ ತಾನು ಕೂಡ ಅವರಂತೆ ಹಾರ್ಮೋನಿಯಂ ಜೊತೆಗೆ ಹಾಡಲು ಆರಂಭಿಸುತ್ತಿದ್ದರು. ಅದೇ ಹಾದಿಯಲ್ಲಿ ಇಂದಿಗೂ ಹಾರ್ಮೋನಿಯಂ ಜೊತೆಗೆ ಹಾಡುವಂತಹ ವಿಶೇಷ ಗಾಯಕರಾಗಿ ಇವರು ಮೂಡಿದ್ದಾರೆ. ಹೀಗೆ ಇವುಗಳಿಂದ ಪ್ರಭಾವಿತರಾಗಿ ನಂತರ 90ರ ದಶಕದಲ್ಲಿ ಶ್ರೀಯುತರಿಗೆ ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಸಂಪರ್ಕವಾಯಿತು. ಆ ಕಾರಣದಿಂದ ಅಧ್ಯಾತ್ಮದ ಹಾದಿ ಪೂರ್ಣವಾಗಿ ಹಿಡಿದು ತಮ್ಮ ವೃತ್ತಿಯಿಂದ ನಿವೃತ್ತಿ ಪಡೆದು ಪೂರ್ಣ ಸಮಯ ಆರ್ಟ್ ಆಫ್ ಲಿವಿಂಗ್ ನ ಅಧ್ಯಾತ್ಮ ಬೋಧನೆ, ಸತ್ಸಂಗ, ಭಜನೆ ಇವುಗಳಿಗೆ ಮೀಸಲಿಟ್ಟರು. ತಮ್ಮ ಆಳವಾದ ಅಧ್ಯಯನದ ಪ್ರಭಾವದಿಂದ ಜ್ಞಾನ-ವಿಜ್ಞಾನ ಮೇಳೈಸಿ ಶಿಬಿರದ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಇವರ ವಿಶೇಷತೆ ಎಂದರೆ ಹದಿನೈದು ಭಾಷೆಗಳಲ್ಲಿ ಇವರಿಗೆ ಹಿಡಿತ ಇದೆ. ಆ ಕಾರಣದಿಂದಲೇ ಯಶಸ್ವಿಯಾಗಿ ದೇಶ ವಿದೇಶಗಳಲ್ಲಯೂ ಶಿಬಿರಗಳನ್ನು ನಡೆಸಿದ ಹೆಗ್ಗಳಿಕೆ ಇವರದು. ಕರ್ನಾಟಕದಲ್ಲಂತೂ ಆರ್ಟ್ ಆಫ್ ಲಿವಿಂಗ್ ನಡೆಸುವ ಸತ್ಸಂಗ ಪ್ರಸಿದ್ಧಿ ಯಾಗಲು ವಿಶೇಷವಾಗಿ ಇವರ ಪಾತ್ರ ತುಂಬಾ ಹಿರಿದು.
ಶಿವಮೊಗ್ಗ, ಶೃಂಗೇರಿ, ಚಿತ್ರದುರ್ಗ, ದಾವಣಗೆರೆ ಈ ಭಾಗಗಳಲ್ಲಿ 1996ರಲ್ಲಿ ಆಟ ಲಿವಿಂಗ್ ನ ಶಿಬಿರಗಳನ್ನು ನಡೆಸಿ ಅದನ್ನು ಪರಿಚಯಿಸಿದವರಾಗಿದ್ದಾರೆ. ಸತ್ಸಂಗಕ್ಕೊಂದು ಸ್ವಾಮೀಜಿಯವರು ತಮ್ಮ ದಿನಾಂಕವನ್ನು ನಿಗದಿಪಡಿಸಿದರೆ ಅದೇ ಮಹತ್ಭಾಗ್ಯವೆನ್ನುವಂತೆ ಆಗಿತ್ತು. ವಾಸವಿ ಶಾಲೆಯಲ್ಲಿ ಆದಂತಹ ಸತ್ಸಂಗವನ್ನು ನಾನು ನೆನಪಿಸಿಕೊಳ್ಳುವುದಾದರೆ ಅಲ್ಲಿ ಹಾಡಿದ ಸುಂದರಾನನ ಹಾಡಿಗೆ ರೋಮಾಂಚನವಾಗಿ ಮೈಮರೆತು ಕುಣಿದ ದಿನಗಳು ಇನ್ನೂ ಹಸಿರಾಗಿಯೇ ಇದೆ.
ಛಾಯಣ್ಣರ ಪತ್ಸಂಗವಂತು ಆರ್ಟ್ ಆಫ್ ಲಿವಿಂಗ್ ನಲ್ಲಿ ವಿಶಿಷ್ಟ ಮಹತ್ವವನ್ನು ಹೊಂದಿದ್ದು ಅವರ ಧ್ವನಿ ಭಾವನೆ ಮತ್ತು ಭಕ್ತಿ ತುಂಬಿದ ಗೀತೆಗಳು ಭಕ್ತರ ಹೃದಯವನ್ನು ಸ್ಪರ್ಶಿಸುತ್ತದೆ. ಪುಟ್ಟ ಮಕ್ಕಳಿಂದ ಹಿಡಿದು ಎಲ್ಲರಿಗೂ ಛಾಯಣ್ಣನ ಸತ್ಸಂಗ ಇಷ್ಟವಾಗುತ್ತದೆ. ಯುವ ಜನತೆಯಂತೂ ಇವರಿಂದ ವಿಶೇಷವಾಗಿ ಪ್ರಭಾವಿತರಾಗಿದ್ದಾರೆ. ಛಾಯಣ್ಣನ ಸತ್ಸಂಗ ಎಂದರೆ ಅದು ಕೇವಲ ಸಂಗೀತ ಕಾರ್ಯಕ್ರಮವಲ್ಲ, ಮನಸ್ಸನ್ನು ನಿತ್ಯದ ತಾಣದಿಂದ ಎತ್ತಿ ದೈವೀ ಚಿಂತನೆಗೆ ಒಯ್ಯುವ ಪವಿತ್ರ ಕ್ಷಣಗಳಾಗಿವೆ. ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಆಶೀರ್ವಾದದೊಂದಿಗೆ ಛಾಯಣ್ಣರು ತಮ್ಮ ಕಲೆಯ ಮೂಲಕ ಲಕ್ಷಾಂತರ ಜನರ ಮನಸ್ಸುಗಳಲ್ಲಿ ಅಧ್ಯಾತ್ಮದ ದೀಪ ಬೆಳಗಿಸಿದ್ದಾರೆ. ಅವರ ಸತ್ಸಂಗದಲ್ಲಿ ಭಾಗವಹಿಸುವುದರಿಂದ ವ್ಯಕ್ತಿಯ ಭಾವನೆ ಶುದ್ಧವಾಗಿ ಹೃದಯ ಹೊಸತೊಂದು ಶಕ್ತಿ ಪಡೆಯುತ್ತದೆ. ಇಂತಹ ಮಹನೀಯರ ಸತ್ಸಂಗ ಕೋಟೆ ಶ್ರೀ ಸೀತಾರಾಮ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಆಯೋಜಿತವಾಗಿದೆ. ಎಲ್ಲರೂ ಅದರಲ್ಲಿ ಭಾಗವಹಿಸಿ ಭಗವನ್ ನಾಮ ಸ್ಮರಣೆಯ ಭಕ್ತಿರಸ ಸಂಗಮದಲ್ಲಿ ಮಿಂದೆಳೋಣ.
ದೂರ್ವಾಸ ಕ್ಷೇತ್ರವಾದ ಕೋಟೆ ಶ್ರೀ ಸೀತಾ ರಾಮಾಂಜನೇಯನ ಸನ್ನಿಧಿಯಲ್ಲಿ ಮಾಡುವ ಭಜನೆಗೆ ನೂರು ವರ್ಷಗಳ ಇತಿಹಾಸವಿದೆ. ಅಂತಹ ಮಹಾಮಹಿಮನ ಸನ್ನಿಧಿಯಲ್ಲಿ ಶ್ರೀರಾಮನವಮಿಯ ಪ್ರಯುಕ್ತ ಪರಮಪೂಜ್ಯ ಶ್ರೀ ಸೂರ್ಯ ಪಾದ ಸ್ವಾಮೀಜಿ (ಛಾಯಣ್ಣ) ಹಾಗೂ ಅವರ ತಂಡದವರಿಂದ ರಾಮನಾಮ ಸ್ಮರಣೆಯ ಸತ್ಸಂಗವನ್ನು ದಿನಾಂಕ 8-4-2025 ರ ಸಂಜೆ ಏರ್ಪಡಿಸಲಾಗಿದೆ. ಅಲ್ಲದೆ ಸಂಜೆ ಆರರಿಂದ ದೇವಸ್ಥಾನದ ಆವರಣದಲ್ಲಿ ಲೋಕ ಕಲ್ಯಾಣ ಅರ್ಥವಾಗಿ ಶ್ರೀರಾಮ ತಾರಕ ಮಂತ್ರದ ಜಪ ಯಜ್ಞವು ಸಹ ಇರುತ್ತದೆ. ನಂತರ ಗಾನ ಧ್ಯಾನ ಇದರಲ್ಲಿ ಶಿವಮೊಗ್ಗದ ಜನರೆಲ್ಲರೂ ಭಾಗವಹಿಸಿ ಪುನೀತರಾಗಬೇಕೆಂದು ಆಯೋಜಕರು ಸಮಸ್ತ ನಾಗರಿಕರಲ್ಲಿ ವಿನಂತಿಸಿದ್ದಾರೆ.
ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಸಂಸ್ಕೃತ ಉಪನ್ಯಾಸಕರು
ಪೇಸ್ ಕಾಲೇಜ್, ಶಿವಮೊಗ್ಗ