DC Shivamogga ಕಳೆದ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ರೀತಿಯಲ್ಲಿ ಮಳೆಯಾಗಿರುವ ಕಾರಣದಿಂದಾಗಿ ಇಂದಿಗೂ ಜಿಲ್ಲೆಯ ಕೆರೆ-ಕಟ್ಟೆ-ಕಾಲುವೆಗಳಲ್ಲಿ ಅಲ್ಪ ಪ್ರಮಾಣದ ನೀರು ಉಳಿದುಕೊಂಡಿದ್ದು, ಪ್ರಸಕ್ತ ಬೇಸಿಗೆಯಲ್ಲಿ ಜನ ಮತ್ತು ಜಾನುವಾರುಗಳಿಗೆ ಒಂದು ಅಂದಾಜಿನ ಪ್ರಕಾರ ಜುಲೈ ಮಾಹೆಯವರೆಗೆ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಎದುರಾಗಲಾರದು.
ಆದಾಗ್ಯೂ ಜಿಲ್ಲೆಯ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಎದುರಾಗಬಹುದಾದ ಸಂಭಾವ್ಯ ಬರದ ನಿರ್ವಹಣೆಗೆ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ತಮ್ಮ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಬರ ನಿರ್ವಹಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಆಯಾ ತಾಲೂಕಿನ ತಹಶೀಲ್ದಾರರು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಇತರೆ ಸಂಬಂಧಿತ ಇಲಾಖಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ತುರ್ತು ಸಭೆ ಕರೆದು, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆ ಮತ್ತು ಜಾನುವಾರು ಮೇವಿನ ದಾಸ್ತಾನು ಕುರಿತು ಮಾಹಿತಿ ಪಡೆದುಕೊಳ್ಳಬೇಕಲ್ಲದೇ, ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಪ್ರದೇಶಗಳಿಗೆ ಸಾಂದರ್ಭಿಕವಾಗಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ ರೂಪು-ರೇಷೆಗಳನ್ನು ಸಿದ್ಧಪಡಿಸಿಟ್ಟುಕೊಂಡಿರಬೇಕೆಂದವರು ನುಡಿದರು.
DC Shivamogga ನೀರಿನ ಸಮಸ್ಯೆಯ ತಾತ್ಕಾಲಿಕ ಪರಿಹಾರಕ್ಕಾಗಿ ಬೋರ್‌ವೆಲ್‌ಗಳನ್ನು ಕೊರೆಸಲು, ಕೊಳವೆಬಾವಿಗಳನ್ನು ಎರವಲು ಪಡೆಯಲು, ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಬಹುದಾದ ಸಾಧ್ಯತೆಗಳ ಬಗ್ಗೆಯೂ ಪರಿಶೀಲಿಸುವಂತೆ ಹಾಗೂ ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು. ಒಂದು ವೇಳೆ ಈಗಾಗಲೇ ಸಮಸ್ಯೆಯನ್ನು ಗುರುತಿಸಲಾಗಿದ್ದು, ಅದರ ಪರಿಹಾರ ಕಾರ್ಯದ ಭಾಗವಾಗಿ ಕಾಮಗಾರಿ ಮತ್ತು ಅದರ ಅಂದಾಜು ವೆಚ್ಚಗಳ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದಲ್ಲಿ ಕೂಡಲೇ ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸುವಂತೆ ಸೂಚಿಸಿದ ಅವರು, ಬರ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಹಣವನ್ನು ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರ ಖಾತೆಗೆ ಮೂರ್ನಾಲ್ಕು ದಿನಗಳಲ್ಲಿ ವರ್ಗಾಯಿಸುವುದಾಗಿ ತಿಳಿಸಿದ ಅವರು, ಬರವನ್ನು ಸಮರ್ಥವಾಗಿ ಎದುರಿಸಲು ಸದಾ ಸಿದ್ಧರಾಗಿರುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಸ್ತುತ ಸಮಯದಲ್ಲಿ ಶಿವಮೊಗ್ಗ ನಗರದಲ್ಲೂ ಎದುರಾಗಬಹುದಾದ ಸಮಸ್ಯೆಯ ಕುರಿತು, ಜುಲೈ ಮಾಸಾಂತ್ಯದವರೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮುಂಗಾರು ಅವಧಿಯಲ್ಲಿ ಮಳೆಯಾದರೆ ನಗರದ ಚರಂಡಿಗಳಲ್ಲಿ ಕಸ-ಕಡ್ಡಿ ಕಟ್ಟಿಕೊಂಡು ಚರಂಡಿಯ ನೀರು ಸಮರ್ಪಕವಾಗಿ ಹರಿದುಹೋಗದೇ ನಿವಾಸಿಗಳ ಮನೆಗೆ ನುಗ್ಗಬಹುದಾದ ಸಾಧ್ಯತೆಗಳಿವೆ. ಅದಕ್ಕಾಗಿ ನಗರದ ಎಲ್ಲಾ ಚರಂಡಿಗಳಲ್ಲಿ ಹುದುಗಿರುವ ಮಣ್ಣು ಮತ್ತು ಕಸವನ್ನು ಸ್ವಚ್ಚಗೊಳಿಸಿಟ್ಟುಕೊಳ್ಳಬೇಕು. ವಿಶೇಷವಾಗಿ ರಾಜಾಕಾಲುವೆಗಳ ಸ್ವಚ್ಚತೆ ಮತ್ತು ದುರಸ್ತಿಗೆ ಆದ್ಯತೆ ನೀಡುವಂತೆ ಮಹಾನಗರಪಾಲಿಕೆ ಆಯುಕ್ತರಿಗೆ ಸೂಚಿಸಿದರು. ಶಿವರಾತ್ರಿಯ ನಂತರ ಸಹಜ ಪ್ರಮಾಣಕ್ಕಿಂತ ಹೆಚ್ಚಿನ ತಾಪಮಾನ ಕಂಡುಬರುತ್ತಿದೆ. ಮಕ್ಕಳು ವಯಸ್ಕರು ಬಿಸಿಲಿಗೆ ಹೋಗದಂತೆ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದ ಅವರು, ಆಸ್ಪತ್ರೆಗಳಲ್ಲಿ ಓಆರ್‌ಎಸ್‌ಮತ್ತು ನಿರ್ಜಲೀಕರಣದಿಂದಾಗಬಹುದಾದ ಆರೋಗ್ಯ ಸಮಸ್ಯೆಗಳ ಬಗ್ಗೆ ಹಾಗೂ ಅಗತ್ಯವಾಗುವ ಔಷಧಗಳನ್ನು ಹೊಂದಿರುವಂತೆ ಅವರು ಸೂಚಿಸಿದ ಅವರು, ಅದಕ್ಕಾಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಹಾಸಿಗೆಗಳನ್ನು ಕಾಯ್ದಿರಿಸುವಂತೆ ಸೂಚಿಸಿದರು.
ವಿದ್ಯುತ್‌ಸರಬರಾಜಿನಲ್ಲಿ ವ್ಯತ್ಯಯವುಂಟಾಗುತ್ತಿರುವ ಕಾರಣ ನಗರ ಕೆಲವು ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಅಡಚಣೆ ಉಂಟಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಮೆಸ್ಕಾಂನ ಅಭಿಯಂತರರು ವಿಶೇಷ ಗಮನಹರಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‌ಕುಮಾರ್‌ಭೂಮರೆಡ್ಡಿ, ಮಹಾನಗರಪಾಲಿಕೆ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.