Department of Social Welfare ಸರ್ಕಾರಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವ್ಯವಸ್ಥೆ ಉಂಟಾಗಿದ್ದು, ಅಧಿಕಾರಿಗಳ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ, ಸರಿಪಡಿಸಿಕೊಳ್ಳಲು ಸಮಯಾವಕಾಶ ನೀಡುತ್ತೇನೆ. ಆದಾಗ್ಯೂ ಸರಿಪಡಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಮಾನ್ಯ ನ್ಯಾಯಮೂರ್ತಿಗಳು ಹಾಗೂ ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಹೇಳಿದರು.
ಶಿವಮೊಗ್ಗ ನಗರದ ಸರ್ಕಾರಿ ಬಾಲಕರ ಬಾಲ ಮಂದಿರ, ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿ/ಎಸ್‌ಟಿ ಬಾಲಕಿಯರ ಮೆಟ್ರಿಕ್ ಪೂರ್ವ ಹಾಸ್ಟೆಲ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ನಂತರದ ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ಪರಿವೀಕ್ಷಣೆ ಮಾಡಿ ಮಾತನಾಡಿ, ಯಾವುದೇ ದುರುದ್ದೇಶದಿಂದ ಅಸಪರ್ಮಕತೆ, ಅವ್ಯವಸ್ಥೆ ಉಂಟಾಗಿಲ್ಲ. ಬದಲಾಗಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೀಗಾಗಿದೆ. ಸರಿಪಡಿಸಿಕೊಳ್ಳಲು ಅವಕಾಶ ನೀಡಿ, ಸರಿಯಾಗದಿದ್ದರೆ ಕ್ರಮ ವಹಿಸುವುದಾಗಿ ತಿಳಿಸಿದರು.
ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ನೀಡಿದ ಅವರು ಅಡುಗೆ ಮನೆಗೆ ತೆರಳಿ, ಮೇಲ್ಚಾವಣೆ ಹಾಗೂ ಆಹಾರದ ಸುರಕ್ಷತೆ ಬಗ್ಗೆ ತಪಾಸಣೆ ಮಾಡಿದರು. ಕೈ ತೊಳೆಯುವ ಸ್ಥಳ, ವಾಟರ್ ಫಿಲ್ಟರ್ , ಮಕ್ಕಳು ಮಲಗುವ ಕೊಠಡಿಯನ್ನು ಪರಿವೀಕ್ಷಿಸಿ ಹಾಳಾಗಿರುವ ಹಾಸಿಗೆಗಳನ್ನು ಹಾಗೂ ಮಂಚಗಳನ್ನು ಬದಲಾಯಿಸಬೇಕೆಂದು ನಿರ್ದೇಶನ ನೀಡಿದರು.
ಹಾಸಿಗೆ, ಮಂಚಗಳ ಗುಣಮಟ್ಟ ಪರೀಕ್ಷಿಸಿ ಖರೀದಿಸಬೇಕು. ಹಾಳಾದ ಮಂಚಗಳನ್ನು ದುರಸ್ತಿಪಡಿಸಿ, ಹಾಗೂ ಹರಿದು ಹೋದ ಹಾಸಿಗೆಗಳನ್ನು ತೆಗೆದುಹಾಕಿ ಹೊಸದನ್ನು ಹಾಕಿಸುವಂತೆ ಸೂಚಿಸಿದ ಅವರು ಕಿಟಕಿ ಗಾಜು, ಮೆಶ್ ಸರಿಪಡಿಸಬೇಕು. ಸ್ವಚ್ಚತೆ ಕಡೆ ಹೆಚ್ಚಿನ ನಿಗಾ ವಹಿಸಬೇಕು. ಒಡೆದ ಗಾಜು ಮತ್ತು ಅಸಮರ್ಪಕ ಮೆಶ್‌ನಿಂದ ಸೊಳ್ಳೆಗಳು ಒಳಬಂದು ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುತ್ತದೆ. ಇನ್ನು ಒಂದು ವಾರದೊಳಗೆ ಈ ಎಲ್ಲ ಕೆಲಸ ಆಗಬೇಕು ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹಾಸ್ಟೆಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಾಲ ಮಂದಿರದ ಆವರಣದೊಳಗೆ ಹಂದಿಗಳ ಹಾವಳಿ ಇದ್ದು ಇದನ್ನು ತಪ್ಪಿಸಬೇಕು. ಹಾಗೂ ಸ್ವಚ್ಚತೆ ಕಾಪಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.
Department of Social Welfare ಶೌಚಾಲಯ ವೀಕ್ಷಿಸಿದ ಅವರು, ಒಡೆದು ಹೋಗಿರುವ ಟೈಲ್ಸ್ಗಳನ್ನು ತೆಗೆದು ಹೊಸದಾಗಿ ಹಾಕಿಸಿ, ನೀರಿನ ವ್ಯವಸ್ಥೆ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕೆಂದ ಅವರು ಅನುದಾನದ ಅವಶ್ಯಕತೆ ಇದ್ದರೆ ಕೇಳಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ತಮ್ಮ ಮನೆಯಂತೆ ಬಾಲಮಂದಿರವನ್ನು ನೋಡಿಕೊಳ್ಳಬೇಕೆಂದು ತಿಳಿಸಿದರು.
ನಂತರ ಸರ್ಕಾರಿ ವಿಶೇಷ ದತ್ತು ಸಂಸ್ಥೆಗೆ ಭೇಟಿ ನೀಡಿ, ಶಿವರಾತ್ರಿ ಹಬ್ಬದಂದು ಕೇಂದ್ರಕ್ಕೆ ದಾಖಲಾದ ಹೆಣ್ಣು ಮಗುವಿಗೆ ನಾಮಕರಣ ಮಾಡಿದರು. ಇದೇ ವೇಳೆ ರಾಜ್ಯ ಮಹಿಳಾ ನಿಲಯಕ್ಕೆ ಭೇಟಿ ನೀಡಿ, ನಿವಾಸಿಗಳೊಂದಿಗೆ ಮಾತನಾಡಿ, ಕುಂದು ಕೊರತೆಗಳನ್ನು ಆಲಿಸಿದರು.
ನಂತರ, ಎಂಆರ್‌ಎಸ್ ಬಳಿ ಇರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ, ಅಡುಗೆ ಮನೆ, ದಾಸ್ತಾನು ಕೊಠಡಿ, ಮಕ್ಕಳು ಮಲಗುವ ಕೊಠಡಿಗಳನ್ನು ವೀಕ್ಷಿಸಿ ಸೂಕ್ತ ಸಲಹೆ ಸೂಚನೆ ನೀಡಿದರು.
ಹಾಸ್ಟೆಲ್ ಉತ್ತಮವಾಗಿದೆ ಆದರೆ ಹಾಸ್ಟೆಲ್ ಹಿಂಭಾಗ ಕಸ, ಕೊಳಚೆ ನೀರು ನಿಂತಿದೆ. ಮಳೆಯಲ್ಲಿ ರಾಡಿಯಾಗಿ ಸೊಳ್ಳೆ ಹೆಚ್ಚುತ್ತವೆ. ಯುಜಿಡಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಯುಕ್ತರೊಂದಿಗೆ ಹಣ ಮಂಜೂರಾತಿ ಬಗ್ಗೆ ಮಾತನಾಡುತ್ತೇನೆ ಎಂದರು.
ವಿದ್ಯಾರ್ಥಿಗಳೊಂದಿಗೆ ಸಂವಾದ : ಸರ್ಕಾರಿ ಬಾಲಕಿಯರ ಬಾಲ ಮಂದಿರ, ಎಸ್‌ಸಿ/ಎಸ್‌ಟಿ ಬಾಲಕಿಯರ ಮೆಟ್ರಿಕ್ ಪೂರ್ವ ಹಾಸ್ಟೆಲ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ನಂತರದ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾಥಿಗಳೊಂದಿಗೆ ಸಂವಾದ ನಡೆಸಿದ ಅವರು, ಊಟ, ತಿಂಡಿ ಇತರೆ ಸೌಲಭ್ಯಗಳು ಸರಿಯಾಗಿ ನೀಡುತ್ತಿದ್ದಾರಾ, ಕುಡಿಯುವ ನೀರಿನ ಸೌಲಭ್ಯ, ಬಿಸಿನೀರು, ಹೊಟ್ಟೆ ತುಂಬ ಗುಣಮಟ್ಟದ ಊಟ ಕೊಡುತ್ತಿದ್ದಾರಾ? ಎಂದು ಕೇಳಿದರು.
ಹಾಗೂ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌ನಲ್ಲಿ ಗ್ರಂಥಾಲಯ ವ್ಯವಸ್ಥೆ, ಕಂಪ್ಯೂಟರ್‌ಗಳು ಲಭ್ಯವಿದೆಯೇ, ವೈದ್ಯರು ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸುತ್ತಾರಾ, ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡಲಾಗುತ್ತಿದೆಯೇ ಎಂದು ವಿಚಾರಿಸಿದರು.
ಗ್ರಂಥಾಲಯಕ್ಕೆ ಬೇಕಾದ ಅಗತ್ಯ ಪುಸ್ತಕಗಳು, ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಕಂಪ್ಯೂಟರ್ ಒದಗಿಸುವಂತೆ ಸೂಚನೆ ನೀಡಿದ ಅವರು ವಿದ್ಯಾರ್ಥಿನಿಲಯಗಳಲ್ಲಿ ನೀಡಬೇಕಾದ ಎಲ್ಲ ಸೌಲಭ್ಯಗಳನ್ನು ಗುಣಮಟ್ಟದೊಂದಿಗೆ ನೀಡಬೇಕು. ಸ್ವಚ್ಚತೆಗೆ ಹೆಚ್ಚಿನ ಗಮನ ನೀಡಬೇಕೆಂದರು.
ಸರ್ಕಾರ ನೀಡುವ ಸೌಲಭ್ಯಗಳ ಸದ್ಬಳಕೆ ಆಗಬೇಕು. ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು. ಸತ್ಪ್ರಜೆಗಳಾಗಬೇಕು. ಸೇವಾ ಮನೋಭಾವ ಬೆಳೆಸಿಕೊಂಡು, ಉತ್ತಮ ಉದ್ಯೋಗ ಪಡೆದು, ದೇಶ ಸೇವೆ ಮಾಡಬೇಕು. ಸಮಾಜಕ್ಕೆ ಏನಾದರೊಂದು ಉತ್ತಮ ಕೊಡುಗೆ ನೀಡಬೇಕು. ನಿಮ್ಮ ಪೀಳಿಗೆ ಚೆನ್ನಾಗಿದ್ದರೆ ದೇಶ ಅಭಿವೃದ್ಧಿ ಸಾಧ್ಯ. ಚೆನ್ನಾಗಿ ಓದಿರಿ. ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.
ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ, ಅದನ್ನು ಉತ್ತೇಜಿಸುವುದಿಲ್ಲ. ಮತ್ತು ಇದನ್ನು ನಿಯಂತ್ರಿಸುತ್ತೇನೆ ಎಂಬ ಮನೊಭಾವ ಇಟ್ಟುಕೊಂಡು ಮುಂದೆ ಬರಬೇಕು. ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಈ ವೇಳೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳಾದ ನ್ಯಾ.ಲೋಕಪ್ಪ ಎನ್ ಆರ್. ನ್ಯಾ.ವಿಜಯಾನಂದ ಜೆ ವಿ, ನ್ಯಾ.ಕಿರಣ್ ಪಿ.ಎಂ ಪಾಟೀಲ್, ಜಿ.ಪಂ ಸಿಇಓ ಎನ್.ಹೇಮಂತ್, ಎಸ್‌ಪಿ ಮಿಥುನ್ ಕುಮಾರ್, ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್, ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ ಎಸ್ ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.