International Women’s Day ಮಹಿಳೆಯರು ಸಕಾಲದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ತುಂಬಾ ಸೂಕ್ತ ಎಂದು ಸರ್ಜಿ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ. ಚಂದುಶ್ರೀ ಹೇಳಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಫ್ರೆಂಡ್ ಸೆಂಟರ್ ಮಹಿಳಾ ವಿಭಾಗ ಹಾಗೂ ಫ್ರೆಂಡ್ ಸೆಂಟರ್ ವತಿಯಿಂದ ಸತ್ಯ ಶ್ರೀ ಆರ್ಕೆಡ್ ನಲ್ಲಿ ಆಯೋಜಿಸಿದ್ದ ಸಂಪೂರ್ಣ ಆರೋಗ್ಯ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿ, ಮಧುಮೇಹಿಗಳು ಹಾಗೂ ರಕ್ತ ಒತ್ತಡ ಇರುವವರು ವರ್ಷಕ್ಕೆ ಒಂದು ಬಾರಿಯಾದರೂ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಇದರಿಂದ ಮುಂಬರುವ ಕಾಯಿಲೆಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಐಎಂಎ ಕಾರ್ಯದರ್ಶಿ ಡಾ. ವಿನಯಾ ಶ್ರೀನಿವಾಸ್ ಮಾತನಾಡಿ, ಮಹಿಳೆಯರು ಮನೆ ಕೆಲಸದಲ್ಲೇ ಹೆಚ್ಚು ಗಮನ ಹರಿಸುವುದರಿಂದ ಆರೋಗ್ಯದ ಕಡೆ ನಿರ್ಲಕ್ಷ್ಯ ತಾಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹಾಗೂ ಪುರುಷರಲ್ಲಿ ಕ್ಯಾನ್ಸರ್ ರೋಗ ಹೆಚ್ಚಾಗಿ ಕಂಡುಬರುತ್ತಿದ್ದು, ಸಕಾಲದಲ್ಲಿ ತಪಾಸಣೆಗೆ ಒಳಗಾಗಿ ಪ್ರಾರಂಭಿಕ ಹಂತದಲ್ಲೇ ಚಿಕಿತ್ಸೆ ತೆಗೆದುಕೊಂಡರೆ ಗುಣಪಡಿಸಬಹುದು ಎಂದರು.
ಉತ್ತಮ ಜೀವನ ಶೈಲಿ, ಪ್ರತಿನಿತ್ಯ ಯೋಗ, ಧ್ಯಾನ, ಪ್ರಾಣಾಯಾಮ ಜೊತೆಗೆ ವಾಕಿಂಗ್ ಹಾಗೂ ಸಕಾರಾತ್ಮಕ ಭಾವನೆಗಳನ್ನು ರೂಡಿಸಿಕೊಳ್ಳಬೇಕು. ಎಂದು ನುಡಿದರು.
International Women’s Day ಮ್ಯಾಕ್ಸ್ ಆಸ್ಪತ್ರೆಯ ವೈದ್ಯ ಡಾ. ಹೆಚ್.ಸಿ.ಶಿವಕುಮಾರ್ ಮಾತನಾಡಿ, ಮನುಷ್ಯನ ದೇಹ ಸದೃಢವಾಗಿ ಇರಬೇಕಾದರೆ ಮೂಳೆ ಸಾಂದ್ರತೆ ಹಾಗೂ ಕೀಲುಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ಆದ್ದರಿಂದ ಮೂಳೆ ಸಾಂದ್ರತೆ ಪರೀಕ್ಷೆ ಮಾಡಿಸಿಕೊಳ್ಳುವುದರ ಮುಖಾಂತರ ಪರೀಕ್ಷಿಸಿಕೊಂಡು ಉತ್ತಮ ಆರೋಗ್ಯ ಹೊಂದಬೇಕು ಎಂದು ತಿಳಿಸಿದರು.
ಫ್ರೆಂಡ್ ಸೆಂಟರ್ ಮಹಿಳಾ ವಿಭಾಗದ ಅಧ್ಯಕ್ಷೆ ಸಪ್ನಾ ಬದರಿನಾಥ ಮಾತನಾಡಿ, ಈಗಾಗಲೇ ನಮ್ಮ ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗದಿಂದ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಮ್ಯಾಕ್ಸ್ ಆಸ್ಪತ್ರೆ ಹಾಗೂ ವಾಸನ್ ಐ ಕೇರ್. ಹಾಗೂ ಸರ್ಜಿ ಆಸ್ಪತ್ರೆ ಸಹಕಾರದೊಂದಿಗೆ ಉಚಿತವಾಗಿ ಕಣ್ಣಿನ ತಪಾಸಣೆ, ಮಹಿಳೆಯರ ಆರೋಗ್ಯ ಮತ್ತು ಮಧುಮೇಹ ರಕ್ತ ಪರೀಕ್ಷೆ, ಮೂಳೆ ಸಾಂದ್ರತೆ ಪರೀಕ್ಷೆ ಹಮ್ಮಿಕೊಂಡಿದ್ದೇವೆ ಎಂದರು.
300ಕ್ಕೂ ಹೆಚ್ಚು ಜನ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಯಿತು.
ಫ್ರೆಂಡ್ ಸೆಂಟರ್ ಅಧ್ಯಕ್ಷ ಬಿ.ಜಿ.ಧನರಾಜ್ ಮಾತನಾಡಿ, ಫ್ರೆಂಡ್ ಸೆಂಟರ್ ಸಂಸ್ಥೆ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಇಂತಹ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಫ್ರೆಂಡ್ಸ್ ಸೆಂಟರ್ ಮಾಜಿ ಅಧ್ಯಕ್ಷ ಜಿ.ವಿಜಯಕುಮಾರ್, ವಿ ನಾಗರಾಜ್, ಬಿಂದು ವಿಜಯ ಕುಮಾರ್, ಶ್ರೀ ರಂಜಿನಿ ದತ್ತಾತ್ರಿ, ಕಾರ್ಯದರ್ಶಿ ಸ್ಮಿತಾ ನವೀನ್, ಟಿಎಸ್ ಬದರಿನಾಥ್. ಸೆಂತಿಲ್ವೇಲಂ, ಅಶ್ವಥ್ ನಾರಾಯಣ್, ವೀಣಾ ಗುರುನಾಥ್, ಲಕ್ಷ್ಮೀ ಸತ್ಯಂ ಹಾಗೂ ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗದ ನಿರ್ದೇಶಕರು, ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.