Bharat Scouts and Guides ವಿದ್ಯಾರ್ಥಿಗಳು ಶ್ರದ್ಧೆ, ಪರಿಶ್ರಮ ವಹಿಸಿ ಮುನ್ನಡೆದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ತಾಳ್ಮೆಯಿಂದ ಅಧ್ಯಯನ ನಡೆಸಿ ಉತ್ತಮ ಅಂಕ ಗಳಿಸಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಮಲೆನಾಡು ಓಪನ್ ಗ್ರೂಪ್ ಹಾಗೂ ಸ್ಥಳೀಯ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸರಸ್ವತಿ ಹಾಗೂ ಗಣೇಶ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳನ್ನು ಪರಿಪೂರ್ಣ ವ್ಯಕ್ತಿಗಳಾಗಿ ನಿರ್ಮಾಣ ಮಾಡುವಲ್ಲಿ ಶಿಕ್ಷಣ ತುಂಬಾ ಅಗತ್ಯ. ಇದರ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಮನೋಭಾವನೆಯನ್ನು ಕೂಡ ಬಳಸಿಕೊಂಡಲ್ಲಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ನಿರ್ಮಾಣಗೊಳ್ಳುತ್ತಾರೆ. ಎಂದು ನುಡಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಸ್ಥಾನಿಕ ಆಯುಕ್ತ ಜಿ ವಿಜಯಕುಮಾರ್ ಮಾತನಾಡಿ, ತಂತ್ರಜ್ಞಾನ ಸಾಕಷ್ಟು ಬೆಳವಣಿಗೆಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆಯಾಗಿದೆ. ಒಳ್ಳೆ ಒಳ್ಳೆಯ ಅವಕಾಶಗಳು ಸಹ ಇದೆ. ಆದ್ದರಿಂದ ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಉತ್ತಮ ಅಭ್ಯಾಸ, ಕೌಶಲ್ಯಗಳಿಂದ ಹಾಗೂ ಒಳ್ಳೆಯ ವಾತಾವರಣದಲ್ಲಿ ಅಭ್ಯಾಸ ಮಾಡಿದಾಗ ಉತ್ತಮ ಸಾಧನೆ ಮಾಡಬಹುದು ಎಂದರು.
Bharat Scouts and Guides ಸ್ಥಳೀಯ ಸಂಸ್ಥೆಗಳ ಕಾರ್ಯದರ್ಶಿ ರಾಜೇಶ್ ಅವಲಕ್ಕಿ ಮಾತನಾಡಿ, ಶಿವಮೊಗ್ಗದ ಎಲ್ಲಾ ಶಾಲೆಯ ಮಕ್ಕಳು ಸರಸ್ವತಿ ಪೂಜೆಯಲ್ಲಿ ಪಾಲ್ಗೊಂಡು ಭಕ್ತಿ ಶ್ರದ್ಧೆ ಹಾಗೂ ಧನ್ಯತೆಯಿಂದ ಆರಾಧನೆ ಮಾಡುತ್ತ ಅಭ್ಯಾಸ ಮಾಡುತ್ತಾರೆ. ಪರೀಕ್ಷೆಯಲ್ಲಿ ಎಲ್ಲರೂ ಉತ್ತಮ ಅಂಕ ಪಡೆದು ಪಾಸಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಗೆ ಹೆಸರು ತರಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್ ಕಾನೂರು, ಸಹ ಕಾರ್ಯದರ್ಶಿ ವೈಆರ್ ವೀರೇಶಪ್ಪ, ರಾಘವೇಂದ್ರ ಹಾಗೂ ಪದಾಧಿಕಾರಿಗಳು ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ಮಕ್ಕಳು ಶಿಕ್ಷಕರು ಉಪಸ್ಥಿತರಿದ್ದರು.