CM Siddaramaiah 2024-25ನೇ ಆರ್ಥಿಕ ವರ್ಷ ಮುಕ್ತಾಯಗೊಳ್ಳುವ ಹಂತದಲ್ಲಿದ್ದರೂ 11 ತಿಂಗಳಲ್ಲಿ ಬಜೆಟ್ ವೆಚ್ಚ ಪ್ರಮಾಣ ಶೇ.68ರಷ್ಟು ಮೀರಿಲ್ಲ. ಪರಿಣಾಮವಾಗಿ 2024ರ ಮಾರ್ಚ್ 31ರೊಳಗೆ ಬಾಕಿ ಶೇ.32ರಷ್ಟು ಅಂದರೆ 1.02 ಲಕ್ಷ ಕೋಟಿ ರೂ. ವೆಚ್ಚ ಮಾಡಬೇಕಿದ್ದು, ದೊಡ್ಡ ಪ್ರಮಾಣದಲ್ಲಿ ಅನುದಾನ ಬಳಕೆಯಾಗದೆ ಉಳಿಯುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ಎರಡನೇ ಬಾರಿಗೆ ಮಂಡಿಸಿದ 2024-25ನೇ ಸಾಲಿನ ಬಜೆಟ್‌ನಲ್ಲಿ ಇಲಾಖೆಗಳಿಗೆ ಒಟ್ಟು 3.79 ಲಕ್ಷ ಕೋಟಿ ರೂ. ಹಂಚಿಕೆಯಾಗಿತ್ತು. ಆರಂಭಿಕ ಶಿಲ್ಕು ರೂಪದಲ್ಲಿ14,142 ಕೋಟಿ ರೂ. ಸೇರಿದಂತೆ ಒಟ್ಟು 3.22 ಲಕ್ಷ ಕೋಟಿ ರೂ.ಗಳನ್ನು ಇಲಾಖೆಗಳ ಮೂಲಕ ವೆಚ್ಚ ಮಾಡುವ ಗುರಿಯಿತ್ತು. ಆದರೆ ಆರ್ಥಿಕ ವರ್ಷದ 11 ತಿಂಗಳಲ್ಲಿ ವೆಚ್ಚ ಮಾಡಿರುವುದು ಶೇ.68.29ರಷ್ಟು ಅನುದಾನ ಮಾತ್ರ.
ಪ್ರಸಕ್ತ ವರ್ಷದಲ್ಲಿ ಫೆಬ್ರವರಿ ಅಂತ್ಯದವರೆಗೆ ಸರಕಾರ ಇಲಾಖೆಗಳಿಗೆ ಬಿಡುಗಡೆ ಮಾಡಿರುವ ಒಟ್ಟು ಮೊತ್ತ2.50 ಲಕ್ಷ ಕೋಟಿ ರೂ. ಅಂದರೆ ಒಟ್ಟು ಹಂಚಿಕೆ ಮೊತ್ತದಲ್ಲಿ ಶೇ.77ರಷ್ಟು ಹಣವಷ್ಟೇ ಬಿಡುಗಡೆಯಾಗಿತ್ತು. ಅದರಲ್ಲಿ ಶೇ.87ರಷ್ಟು ಅಂದರೆ 2.19 ಲಕ್ಷ ಕೋಟಿ ರೂ. ವೆಚ್ಚವಾಗಿದೆ. ಮಾರ್ಚ್ನಲ್ಲಿ ಸರಕಾರ ಒಟ್ಟು 71,401 ಕೋಟಿ ರೂ. ಬಿಡುಗಡೆ ಮಾಡಬೇಕಿದ್ದು, ಅಷ್ಟು ಹಣವನ್ನೂ ಇಲಾಖೆಗಳು 15 ದಿನದೊಳಗೆ ವೆಚ್ಚ ಮಾಡಬೇಕಿದೆ.