Department of Kannada and Culture ಬಳೆ ತೊಡೆಸುವುದು ಒಂದು ಸಂಸ್ಕೃತಿ. ಬಳೆ ಹೆಣ್ಣು ಮಕ್ಕಳ ದೊಡ್ಡ ಆಸ್ತಿ. ಬಳೆ ತೊಡೆಸುವ ಮಲಾರ ವೃತ್ತಿಯ ಜೊತೆ ಎಲ್ಲ ಹೆಣ್ಣು ಮಕ್ಕಳನ್ನು ತಾಯಂದಿರಂತೆ ಗೌರವಿಸಿದ, ಸಮಾಜ ಸುಧಾರಣೆಯಲ್ಲಿ ತೊಡಗಿದ್ದ ಮಹಾನ್ ಪುರಷ ಕೈವಾರ ತಾತಯ್ಯ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ ಎಸ್ ಚಂದ್ರಭೂಪಾಲ ಬಣ್ಣಿಸಿದರು.
ಜಿಲ್ಲಾಡಳಿ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಬಲಿಜ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ಯೋಗಿನಾರೇಯಣ ಯತೀಂದ್ರ(ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೈವಾರ ತಾತಯ್ಯ ನವರು ಅತ್ಯಂತ ಶ್ರೇಷ್ಠರು. ಅವರೊಬ್ಬ ಆದರ್ಶ ಪುರುಷ. ಮಹಾನ್ ವ್ಯಕ್ತಿ. ಅವರ ವೃತ್ತಿ ಬಳೆ ವ್ಯಾಪಾರ. ಕಷ್ಟದಿಂದಲೇ ಬದುಕಿದವರು. ಮನೆ ಮನೆಗೆ ಹೋಗಿ ಬಳೆ ತೊಡಿಸುವುದರೊಂದಿಗೆ ಎಲ್ಲರನ್ನೂ ಗೌರವಿಸುತ್ತಿದ್ದರು. ಇಂತಹ ವೃತ್ತಿಯಲ್ಲಿ ಬಂದಿರುವ ಬಲಿಜ ಸಮಾಜದವರು ಅತ್ಯಂತ ಪ್ರೀತಿ, ವಿಶ್ವಾಸಾರ್ಹ ಉಳ್ಳವರು.
ತಾತಯ್ಯನವರು ತಮ್ಮ ನುಡಿಗಳ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. 110 ವರ್ಷ ಕಾಲ ಬದುಕಿದ್ದ ಇವರಿಗೆ ಜನರು ಋಣಾತ್ಮಕತೆ ಹೆಚ್ಚು ವಾಲುವುದರ ಬಗ್ಗೆ ಅಸಮಾಧಾನವಿತ್ತು. ದುಷ್ಟರನ್ನು ದೂರವಿಡಬೇಕೆಂದು ಹೇಳುತ್ತಾ, ತಾವೂ ನುಡಿದಂತೆ ನಡೆಯುತ್ತಿದ್ದರು. ಕೈವಾರ ತಾತಯ್ಯ ಸೇರಿದಂತೆ ಮಹನೀಯರು ಯಾವುದೇ ಜಾತಿಗೆ ಸೀಮಿತರಲ್ಲ. ಸಮಾನತೆಯನ್ನು ಪ್ರತಿಪಾದಿಸಿದ್ದಾರೆ.
ನಮ್ಮಲ್ಲಿ ಹಿಂದುಳಿದ ಸಮಾಜಗಳು ಸಾಕಷ್ಟಿವೆ. ಬಲಿಜ ಸಮಾಜ 2 ಎ ಪ್ರವರ್ಗಕ್ಕೆ ಸೇರಬೇಕು. ಅವಕಾಶ ಸಿಕ್ಕರೆ ತಾವೂ ಸಹ ನಾಯಕರ ಹತ್ತಿರ ಈ ಬಗ್ಗೆ ಪ್ರಸ್ತಾಪಿಸುತ್ತೇನೆ ಎಂದ ಅವರು ನಾವೆಲ್ಲರೂ ಶ್ರೇಷ್ಠರು. ಒಗ್ಗಾಟ್ಟಾಗಬೇಕು.ಆಗ ಅಭಿವೃದ್ಧಿ ಸಾಧ್ಯ ಎಂದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕಿ ಡಾ.ಛಾಯಾಕುಮಾರಿ.ಇ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಗುರುವಿದ್ದಲ್ಲಿ ಮೋಕ್ಷವಿದೆ. ಗುರುವಿಲ್ಲದೆ ಗೋವಿಂದನನ್ನೂ ಪಡೆಯಲು ಸಾಧ್ಯವಿಲ್ಲ. ಕೈವಾರ ತಾತಯ್ಯನವರನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅವರೊಂದು ಅಗಾಧವಾದ ಸಮುದ್ರ. ತಾತಯ್ಯ ಎಂದರೆ ದೇವರು ಕುಣಿಸುವ ತಾಳಕ್ಕೆ ತಕ್ಕಂತೆ ಕುಣಿಯುವವನು ಎಂದರ್ಥ ಎಂದು ತಾತಯ್ಯ ನಂಬಿದ್ದರು. ಅವರು ದೈವಾಂಶ ಸಂಭೂತರು ಎಂದು ತಿಳಿಸಿದ ಅವರು ತಾತಯ್ಯನವರ ಬಾಲ್ಯ, ತಾರುಣ್ಯ ಸೇರಿದಂತೆ ಜೀವನದ ವಿವಿಧ ಘಟ್ಟಗಳನ್ನು ವಿವರಿಸಿದರು.
Department of Kannada and Culture ಸಾಮಾನ್ಯ ವ್ಯಕ್ತಿಯಾಗಿದ್ದ ತಾತಯ್ಯನವರು ಸಂಸಾರದ ಕ್ಲೇಷಗಳಿಂದ ಹೊರಬರಲು ಗುರುಗಳೋರ್ವರು, ಸಾಕಷ್ಟು ವಿದ್ಯೆ ಇಲ್ಲದ ತಾತಯ್ಯನವರಿಗೆ ಬೆಣಚು ಕಲ್ಲನ್ನು ನೀಡಿ, ಈ ಕಲ್ಲು ಕಲ್ಲು ಸಕ್ಕರೆಯಾಗಿ ಬಾಯಲ್ಲಿ ಕರಗುವ ತನಕ ಇದನ್ನು ಬಾಯಲ್ಲಿಟ್ಟುಕೊಂಡು ನಾರಾಯಣನ ಧ್ಯಾನ ಮಾಡುವಂತೆ ತಿಳಿಸುತ್ತಾರೆ. ಅದರಂತೆ ತಾತಯ್ಯನವರು ಓಂ ನಾರೇಯಣ ನಮಃ ಎಂದು ನಾರಾಯಣನ ಧ್ಯಾನದಲ್ಲಿ ತಲ್ಲೀನರಾದರು. ಸುಮಾರು 3 ವರ್ಷ ಕಳೆದ ನಂತರ ಗುರುಗಳು ನೀಡಿದ ಕಲ್ಲು, ಕಲ್ಲು ಸಕ್ಕರೆಯಾಗಿ ಕರಗಲು ಆರಂಭವಾಗುತ್ತದೆ. ಹೀಗೆ ಮುಂದೆ ಅವರು ಪವಾಡ ಪುರುಷರಾಗುತ್ತಾರೆ. ಮನುಷ್ಯನ ಅಹಂ ಎಂಬ ಅಂಧಕಾರ ಸಕ್ಕರೆಯಂತೆ ಕರಗಬೇಕು. ಜ್ಞಾನ ಜ್ಯೋತಿ ಬೆಳಗಬೇಕು ಎಂದು ಪ್ರತಿಪಾದಿಸುತ್ತಾರೆ. ಸಮಾಜ ಸುಧಾರಕನಾಗಿ ಬೆಳೆಯಬೇಕು, ಜನರನ್ನು ಮೌಢ್ಯದಿಂದ ಹೊರತರಬೇಕೆಂಬ ಉದ್ದೇಶದಿಂದ ಅವರು ಜನರನ್ನು ಪ್ರೇರೇಪಿಸಲು ಆರಂಭಿಸುತ್ತಾರೆAದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಸಾಧನೆ ಮಾಡಿದ ಸಮಾಜದ ಸ್ನೇಹಾ ಹಾಗೂ ಕೆಯುಡಬ್ಲುö್ಯಜೆ ದತ್ತಿನಿಧಿ ವಾರ್ಷಿಕ ಪ್ರಶಸ್ತಿ ಪುರಸ್ಕೃತೆ ಪತ್ರಕರ್ತೆ ಕವಿತಾ ಇವರನ್ನು ಸನ್ಮಾನಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಸ್ವಾಗತಿಸಿದರು, ಜಿಲ್ಲಾ ಬಲಿಜ ಸೇವಾ ಸಂಘದ ಅಧ್ಯಕ್ಷ ಜಿ. ರಾಘವೇಂದ್ರ, ಜಿಲ್ಲಾ ಬಲಿಜ ಸೇವಾ ಸಂಘದ ಕಾರ್ಯದರ್ಶಿ ಬಿ. ಆರ್. ಶಿವಕಯಮಾರ್, ಜಿಲ್ಲಾ ಬಲಿಜ ಸೌಹಾರ್ಧ ಪತ್ತಿನ ಸಹಕಾರ ಸಂಘದ ವೆಂಕಟೇಶ ನಾಯ್ಡು, ಆದಿಲಕ್ಷ್ಮಿ ಬಲಿಜ ಮಹಿಳಾ ಸಮಾಜದ ಸ್ಮಿತಾ ಶಿವಕುಮಾರ್, ತಹಶೀಲ್ದಾರ್ ಎಂ ಲಿಂಗರಾಜು, ಸಮಾಜದ ಮುಖಂಡರು ಉಪಸ್ಥಿತರಿದ್ದರು.