Friday, March 14, 2025
Friday, March 14, 2025

Klive Special Article ಸಿಹಿಮೊಗೆಯ ಸನಾತನ ಸಾರಥಿಗಳ ಸಾಲಿನಲ್ಲಿ ಕಂಗೊಳಿಸಿದ ವಿನಾಯಕ‌ ಬಾಯಿರಿ

Date:

ಡಾ.ಮೈತ್ರೇಯಿ‌ ಪ್ರಸಾದ್.ಶಿವಮೊಗ್ಗ

Klive Special Article ಒಂದು ವ್ಯವಸ್ಥೆಯನ್ನು ಒಬ್ಬರ ಕಾಲಾನಂತರ ಏನೂ ಕುಂದು ಬರದಂತೆ ಅಥವಾ ಅವರ ಇಲ್ಲದಿರುವಿಕೆಯ ಅರಿವೇ ಆಗದಂತೆ ಸಮರ್ಥವಾಗಿ ನಿಭಾಯಿಸುವುದು ತುಸು ಕಷ್ಟದ ಕೆಲಸವೇ ಸರಿ. ಆದರೆ ಆ ಕೆಲಸವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದು ನಮ್ಮ ವಿನಾಯಕ ಬಾಯರಿ ಅವರು. ಏಕೆಂದರೆ ಪುರೋಹಿತ ಬರಿ ದೇವಾಲಯಕ್ಕಾಗಿ ಅಷ್ಟೇ ಸೀಮಿತನಾಗದೆ ಪುರದ ಹಿತಕ್ಕಾಗಿ ಇರುವವನು ಮತ್ತು ದೇವಾಲಯವು ಬರಿಯ ಧಾರ್ಮಿಕ ಶ್ರದ್ಧಾ ಕೇಂದ್ರವಸ್ಥೆ ಅಲ್ಲ ಅದು ಸಮಾಜಮುಖಿಯಾಗಿ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳುವಂತಹ ತಾಣವೆಂಬ ವಿಚಾರದಲ್ಲಿ ಬಹು ಕೆಲಸಗಳನ್ನು ಮಾಡಿದ್ದ ಆ. ಪ. ರಾಮ ಭಟ್ಟರು ಎಲ್ಲರನ್ನೂ ಅಗಲಿದ ಸಂದರ್ಭದಲ್ಲಿ ಆ ಜಾಗಕ್ಕೆ ಒಬ್ಬ ಸಮರ್ಥ ವ್ಯಕ್ತಿಯಾಗಿ ನಿಂತು ತನ್ನ ಗುರು ಹಾಕಿಕೊಟ್ಟ ಹಾದಿಯಲ್ಲಿ ಬಂದು ನಿಂತು ಲೋಪ ಬಾರದಂತೆ ಅನೇಕರಿಗೆ ಆಯೋಜಿಸಿದ ಹಲವು ಕಾರ್ಯಕ್ರಮಗಳಲ್ಲಿ ರಾಮಭಟ್ಟರ ಅಗಲಿಕೆಯ ನೆನಪೇ ಬಾರದಂತೆ ಕಾರ್ಯಕ್ರಮದ ಸಿದ್ಧತೆ ಆಯೋಜನೆ ಆಗಿರುತ್ತಿತ್ತು ಎನ್ನುವಲ್ಲಿ ಸಂಶಯವೇ ಇಲ್ಲ. ರಾಮ ಭಟ್ಟರು ಅಗಲಿದಾಗ ಸತತ ಒಂದು ವರ್ಷಗಳ ಕಾಲ ಅವರ ಸಂಸ್ಮರಣೆಯ ಕಾರ್ಯಕ್ರಮ ಮಾಡಲೇಬೇಕೆಂದು ಮುಂಚೂಣಿಯಲ್ಲಿ ನಿಂತವರು ಶ್ರೀ ಬಾಯಿರವರು. ನಿಜಕ್ಕೂ ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟವೇ ಸರಿ.

ಜಾತಸ್ಯ ಹಿ ದ್ರೂ ಮೃತ್ಯುಃ ಎನ್ನುವುದು ಗೀತೆಯಲ್ಲಾದರೂ ಹುಟ್ಟಿದವನು ಖಂಡಿತವಾಗಿಯೂ ಮರಣ ಹೊಂದುತ್ತಾನೆ ಎನ್ನುವುದು ಸತ್ಯ. ಆ ಮರಣ ಇಷ್ಟು ಬೇಗ ಬಾಯರ್ ಅವರನ್ನ ಅರಸೀ ಬರಬಾರದಿತ್ತು ಎಂದೆನಿಸುವುದು ಸಹ ಅಷ್ಟೇ ಸತ್ಯ. ಆದರೆ ಅವರು ಬದುಕಿದ್ದು ಹೇಗೆಂದರೆ, ಹುಟ್ಟಿನಿಂದಲೇ ಜನ್ಮ ಸಾರ್ಥಕತೆ ಕಂಡು ಕೊಂಡವರು ಅವರು. ಅದನ್ನೇ ಸುಭಾಷಿತದಲ್ಲಿ “ಪರಿವರ್ತಿನಿ ಸಂಸಾರೆ ಮೃತಃ ಕೋ ವಾ ನ ಜಾಯತೆ। ಸ ಜಾತೋ ಯೇನ ಜಾತೇನ ಯಾತಿ ವಂಶಃ ಸಮುನ್ನತಿಮ್॥”
ಈ ಜಗತ್ತಿನಲ್ಲಿ, ಯಾರ ಜನ್ಮವು ಅವನ ವಂಶದ ಪ್ರಗತಿಗೆ ಕಾರಣವಾಗುತ್ತದೆಯೋ, ಅಂತಹ ವ್ಯಕ್ತಿಯ ಜನ್ಮವನ್ನು ತೆಗೆದುಕೊಳ್ಳುವುದು ಯೋಗ್ಯವಾಗಿದೆ. ಇಲ್ಲದಿದ್ದರೆ ಈ ಸದಾ ಬದಲಾಗುವ ಜಗತ್ತಿನಲ್ಲಿ ಯಾರು ಹುಟ್ಟಿಲ್ಲ ಮತ್ತು ಸತ್ತಿಲ್ಲ? ಎಂಬುದು ಬಾಯರ್ ಅವರಿಗೆ ಹೋಲುವ ಸತ್ಯವಾದ ಮಾತಾಗಿದೆ.

ವಿನಾಯಕ ಬಾಯಿರಿಯವರ ಸ್ವಭಾವ ಹೇಗೆಂದರೆ ಯಾರು ಯಾವ ವಿಷಯವನ್ನೇ ಕೇಳಿಕೊಂಡು ಬಂದರೂ ಅವರಿಗೆ ಬೇಕಾದಂತಹ ಸಮಾಧಾನವನ್ನು ನೀಡುವಂತಹವರಾಗಿದ್ದರು. ಮತ್ತೆ ನಮ್ಮ ಸಂಸ್ಕೃತಿ, ಸಂಸ್ಕಾರ ಇವುಗಳ ವಿಷಯದಲ್ಲಿ ಅಪಾರ ಶ್ರದ್ಧೆ ಉಳ್ಳವರಾಗಿದ್ದರು. ದೇವಸ್ಥಾನದಲ್ಲಿ ಆಯೋಜಿತವಾಗುವ ಎಲ್ಲ ಕಾರ್ಯಕ್ರಮಗಳಲ್ಲೂ ಸಹ ಹಿಂದೂ ಸನಾತನ ಸಂಸ್ಕೃತಿಯ ಮಹತ್ವವನ್ನು ಹೇಳದೇ ಇರುತ್ತಿರಲಿಲ್ಲ. ನವರಾತ್ರಿಯ ಮೊದಲುಗೊಂಡು ಎಲ್ಲ ಕಾರ್ಯಕ್ರಮಗಳು ಅದ್ಭುತವಾಗಿಯೇ ಆಯೋಜಿಸಲಾಗುತ್ತಿತ್ತು. ಅಧಿಕ ಮಾಸದ ಸಂದರ್ಭದಲ್ಲಂತೂ ಅಧಿಕ ಫಲವೆಂಬ ಹೆಸರಿನಡಿಯಲ್ಲಿ ಭಜನೆ, ಆರೋಗ್ಯ, ಸದ್ವಿಚಾರ ಇತ್ಯಾದಿಗಳ ಕುರಿತಾಗಿ ಬರೋಬ್ಬರಿ ಒಂದು ತಿಂಗಳು ಕಾರ್ಯಕ್ರಮ ಮಾಡಿ ಯಶಸ್ವಿಯಾಗಲು ಇವರ ಪಾಲು ಹೆಚ್ಚಿದೆ. ಪ್ರತಿ ಸಂದರ್ಭದಲ್ಲಿ ನಗುನಗುತ್ತಲೇ ಎದುರುಗೊಳ್ಳುವ ಇವರ ಮಾತೇ ಬಲು ಚಂದ. ಸದಾ ನಗುಮೊಗದ ಬಾಯರವರು ಇನ್ನಿಲ್ಲ ಎನ್ನುವುದನ್ನು ಯಾರೂ ನಂಬಲಾರದ ಸ್ಥಿತಿಯಲ್ಲಿದ್ದೇವೆ.

Klive Special Article ಸಂಸ್ಕೃತೋತ್ಸವದ ಸಂದರ್ಭದಲ್ಲಿ ಒಂದು ವಾರಗಳ ಕಾಲ ಅದ್ಭುತವಾದಂತಹ ಕಾರ್ಯಕ್ರಮಗಳನ್ನ ಆಯೋಜನೆ ಮಾಡಿ, ಅಲ್ಲಿಗೆ ಬಂದಂತಹ ಮಕ್ಕಳು ಮತ್ತು ಪೋಷಕರನ್ನ ಸಂಸ್ಕೃತ ಭಾಷೆಯ ಆಕರ್ಷಣೆಗೆ ಒಳಗಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅಷ್ಟೇ ಅಲ್ಲದೆ ಹಿಮಾಲಯದ ಚಾರಣದ ಸಂದರ್ಭದಲ್ಲಿ ದಂಪತಿಗಳು ಇರ್ವರು ನನ್ನ ಮಗನಿಗೆ ಜೊತೆಯಾಗಿ ನಿಂತಿದ್ದರು. ಮೊನ್ನೆಮೊನ್ನೆಯಷ್ಟೇ ಪ್ರಯಾಗ್ರಾಜ್ ನಿಂದ ಬಂದಂತಹ ಅವರನ್ನು ಎದುರುಗೊಂಡ ಸಂದರ್ಭ ಸದಾ ಕಣ್ಣಲ್ಲಿ ಹಸಿರಾಗಿದೆ.
ಸಮಾಜಮುಖಿಯಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡುವಲ್ಲಿ ಮುಂದಿರುತ್ತಿದ್ದ ಅವರದು ಒಂಥರ ನಾಯಕತ್ವದ ಸ್ವಭಾವ. ವಿನಾಯಕ ನಾಯಕನಾಗಿ ಎಲ್ಲವನ್ನೂ ಸಾಂಗವಾಗಿ ಮುನ್ನಡೆಸುತ್ತಿರುವಾಗಲೇ ವಿಧಿ ಸೆಳೆದೊಯ್ದದ್ದು ನಮ್ಮ ಶಿವಮೊಗ್ಗದ ಪಾಲಿಗೆ ದುರ್ವಿಧಿಯೇ ಸರಿ. ಅದು ಹೇಗೆಂದರೆ, ಜವರಾಯ ಬಂದರೆ ಬರಿ ಕೈಗೈಲಿ ಬರಲಿಲ್ಲ ,
ಕುಡುಗೊಲು ಕೊಡಲ್ಯೊಂದು ಹೆಗಲೇರಿ ಜವರಾಯ ಒಳ್ಳೊಳ್ಳೆ ಮರನ ಕಡಿ ಬಂದ ,
ಫಲ ಬಿಟ್ಟ ಮರನ ಕಡಿ ಬಂದ – ಎಂಬ ಜನಪದ ಗೀತೆಯ ಸಾಲಿನಂತೆ ಕಾಡಿನಲ್ಲಿರುವ ನೇರವಾದ ಗಟ್ಟಿಮುಟ್ಟಾದ ಮರವನ್ನೇ ಪೀಠೋಪಕರಣಗಳಿಗೆಂದು ಆಯ್ದು ತರುವಂತೆ, ಜವರಾಯನೂ ಸಹ ಸಮಾಜಕ್ಕೆ ಅಗತ್ಯವಾದ ಕುಟುಂಬದ ಜವಾಬ್ದಾರಿ ಹೊತ್ತ ಸ್ನೇಹಮಯಿ ವ್ಯಕ್ತಿಗಳನ್ನು ಮೊದಲು ಆಯ್ಕೆ ಮಾಡಿಕೊಳ್ಳುತ್ತಾನೆ ಎಂಬಂತೆ ಆಗಿ ಹೋಗಿದೆ.

ಏನೇ ಆಗಲಿ ಕಡೆಯಲ್ಲಿ ಹೇಳುವುದಿಷ್ಟೇ ಮನುಷ್ಯ ಹುಟ್ಟಿದ ಮೇಲೆ ಸಾವು ನಿಶ್ಚಿತ. ಅಂತಹ ಸಾವು ಸುಖಮರಣವಾಗಿ ವಿನಾಯಕ ಬಾಯರಿ ಅವರನ್ನು ಕೊಂಡೊಯ್ದಿದೆ. ಆದರೆ ಈಗ ಅವರು ಹಾಕಿಕೊಟ್ಟ ಹಾದಿಯನ್ನು ಅವರ ಅಭಿಮಾನಿಗಳು, ಜೊತೆಗಾರರಾದ ನಾವು ಮುನ್ನಡೆಸಬೇಕಾಗಿದೆ. ಅಲ್ಲದೆ ಯಾರೇ ಕಷ್ಟ ಬಂದರೂ ಸಹಾಯ ಹಸ್ತ ಚಾಚುತ್ತಿದ್ದ ವಿನಾಯಕ ಬಾಯಿರಿಯವರು ತಮ್ಮ ಕುಟುಂಬವನ್ನು ಅನಾಥವಾಗಿಸಿ ಹೋಗಿದ್ದಾರೆ. ಈಗ ನಾವೆಲ್ಲ ಅವರ ಕುಟುಂಬದ ಜೊತೆ ನಿಲ್ಲಬೇಕಾದ ಅಗತ್ಯ ಇದೆ. ವಿಶ್ವಾಸದೊಂದಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾಯಕ ಮಾಡಬೇಕಿದೆ.

ಡಾ. ಮೈತ್ರೇಯಿ ಹೆಚ್. ಎಲ್ .
ಸಂಸ್ಕೃತ ಉಪನ್ಯಾಸಕರು
ಪೇಸ್ ಕಾಲೇಜ್, ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Legislative Council ಇಡೀ ರಾಷ್ಟ್ರವೇ ಮೆಚ್ಚುವ ‌ಕಾನೂನು ಶಿಕ್ಷಣ ಸಿಗಲಿ- ಮಾಜಿ ನ್ಯಾ.ಎಂ.ಎನ್.ವೆಂಕಟಾಚಲಯ್ಯ

Karnataka Legislative Council ಪ್ರವಾಹೋಪಾದಿಯಲ್ಲಿ ಸಾಧನೆ ಮಾಡುವ ಹಂಬಲ ಉಳ್ಳವರನ್ನು ತಡೆಯಲು...

District Consumer Disputes Redressal Commission ರೆಫ್ರಿಜಿರೇಟರ್ ಸೇವಾನ್ಯೂನತೆ. ಜಿಲ್ಲಾ ವ್ಯಾಜ್ಯ ಪರಿಹಾರ ಆಯೋಗದಿಂದ ಗ್ರಾಹಕರಿಗೆ ಸಿಕ್ಕಿತು ನ್ಯಾಯ

District Consumer Disputes Redressal Commission ದೂರುದಾರರಾದ ಎಸ್.ವಿ.ಲೋಹಿತಾಶ್ವ ಇವರು ಎದುರುದಾರರಾದ...

Senior Chamber International Organization ಪುಷ್ಪ ಎಸ್ ಶೆಟ್ಟಿಅವರಿಗೆ ‌ಸೀನಿಯರ್ ಚೇಂಬರ್ ಉನ್ನತ ಪ್ರಶಸ್ತಿ

Senior Chamber International Organization ಬ್ರಹ್ಮಾವರದಲ್ಲಿ ನಡೆದ ಸೀನಿಯರ್ ಚೇಂಬರ್ ಇಂಟರ್...

State Film Awards 2020 ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಘೋಷಣೆ

State Film Awards 2020ನೇ ಸಾಲಿನ ಆಯ್ಕೆ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ...