Indian Post ಭಾರತದಲ್ಲಿ ಸುಮಾರು 1,64,972 ಅಂಚೆ ಕಛೇರಿಗಳಿವೆ. ಪಟ್ಟಣ ಪ್ರದೇಶದಲ್ಲಿ 15,494 ಅಂಚೆ ಕಛೇರಿಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ 1,49,478 ಅಂಚೆ ಕಛೇರಿಗಳಿವೆ. ಹಿಮಾಚಲ ಪ್ರದೇಶದ ಹಿಕ್ಕಿಮ್ ಗ್ರಾಮದಲ್ಲಿ 1983 ರಲ್ಲಿ ಆರಂಭಗೊಂಡ ಅಂಚೆ ಕಛೇರಿಯು ಸಮುದ್ರ ಮಟ್ಟದಿಂದ ಅತ್ಯಂತ 14,567 ಅಡಿಗಳಷ್ಟು ಎತ್ತರದಲ್ಲಿದ್ದು ಇದು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಎತ್ತರದಲ್ಲಿರುವ ಅಂಚೆ ಕಛೇರಿಯಾಗಿದೆ.
ಭಾರತದಲ್ಲಿ ಅಂಚೆ ಸೇವೆಯಿಂದ ಹೊರತಾದ ಒಂದು ಚಿಕ್ಕ ಭೂಪ್ರದೇಶವೂ ಇಲ್ಲ. ಕಾಶ್ಮೀರವೇ ಇರಲಿ, ಥಾರ್ ಮರು ಭೂಮಿಯೇ ಇರಲಿ, ಕನ್ಯಾಕುಮಾರಿಯೇ ಇರಲಿ ಭಾರತದ ಯಾವ ಮೂಲೆಯಲ್ಲಿರುವ ಯಾವ ಹಳ್ಳಿಯೇ ಇರಲಿ, ಅಲ್ಲೆಲ್ಲ ಅಂಚೆ ಸೇವೆ ಲಭ್ಯವಿದೆ. ಅಲ್ಲೆಲ್ಲ ಅಂಚೆ ಅಣ್ಣನ ಪತ್ರ ಬಟವಾಡೆ, ಮನಿಯಾರ್ಡರ್ ಪಾವತಿ/ ಬ್ಯಾಕಿಂಗ್ ಸೇವೆಗಳು ನಿರಂತರವಾಗಿ ಜನರಿಗೆ ಲಭ್ಯವಾಗುತ್ತದೆ.
ಇಂತಹ ವಿಶಿಷ್ಟವಾದ ಭಾರತೀಯ ಅಂಚೆ ವ್ಯವಸ್ಥೆಗೆ ಅನೇಕ ಶತಮಾನಗಳ ಇತಿಹಾಸವಿದೆ. ಭಾರತದ ಮೊತ್ತ ಮೊದಲ ಅಂಚೆ ಕಛೇರಿ 1727 ರಲ್ಲಿ ಕಲ್ಕತ್ತಾದಲ್ಲಿ ಪ್ರಾರಂಭವಾಯಿತು. ನಂತರ ಇದು ಪ್ರೆಸಿಡೆನ್ಸಿ ಅಂಚೆ ಕಛೇರಿಯಾಗಿ 1774 ರಲ್ಲಿ ಉನ್ನತಿಕರಣಗೊಂಡಿತು. 1786 ರಲ್ಲಿ ಮದ್ರಾಸಿನಲ್ಲಿ ಅಂದರೆ ಈಗಿನ ಚನ್ನೈನಲ್ಲಿ ಮತ್ತು 1793 ರಲ್ಲಿ ಮುಂಬೈಯಲ್ಲಿ ಪ್ರೆಸಿಡೆನ್ಸಿ ಅಂಚೆ ಕಛೇರಿಗಳು ಆರಂಭಗೊAಡವು. ನಂತರ ದೇಶದೆಲ್ಲೆಡೆ ಅಂಚೆ ಕಛೇರಿಗಳು ಆರಂಭವಾಗುತ್ತ ಬಂದು, ಅಂಚೆ ಸೇವೆಯು ಒಂದು ಸಾಂಸ್ಥಿಕ ರೂಪವನ್ನು ಪಡೆಯುತ್ತಿದಂತೆ ಮೊದಲ ಅಂಚೆ ಕಚೇರಿ ಕಾಯಿದೆಯು 1837 ರಲ್ಲಿ ಜಾರಿಗೆ ಬಂದಿತು.
ನಂತರ 1854 ರಲ್ಲಿ ಹೊಸ ಕಾಯಿದೆಯು ಜಾರಿಗೆ ಬಂತು. ಆ ಕಾಯಿದೆಯು ಅನೇಕ ಬಾರಿ ಪರಿಷ್ಕರಣೆಗೊಂಡು, 1866 ರಲ್ಲಿ ಇನ್ನೂಂದು ಕಾಯಿದೆ ಜಾರಿಗೆ ಬಂತು. ಈ 1866 ರ ಕಾಯಿದೆಗೆ 1882, 1895 ಮತ್ತು 1896 ರಲ್ಲಿ ಅನೇಕ ಪರಿಷ್ಕರಣೆಗಳಾದವು.
ನಂತರ 1898 ರಲ್ಲಿ ಪರಿಷ್ಕೃತ ಅಂಚೆ ಕಛೇರಿ ಕಾಯಿದೆ ಜಾರಿಯಾಯಿತು. ನಂತರದ ವರ್ಷಗಳಲ್ಲಿ ಅಂಚೆ ಸೇವೆಯಲ್ಲಿ ಅನೇಕ ಮಾರ್ಪಾಡುಗಳಾದವು. ಇತ್ತೀಚಿನ ದಿನಗಳಲ್ಲಿ ಅನೇಕ ಹೊಸ ಸೇವೆಗಳ ಅಂಚೆ ಸೇವೆಯು ನಾವೀನ್ಯತೆಯನ್ನು ಪಡೆದು ಜನಜೀವನದ ಅವಿಭಾಜ್ಯ ಅಂಗವಾಗಿದೆ.
ಬದಲಾಗುತ್ತಿರುವ ಕಾಲದ ಅಗತ್ಯಕ್ಕೆ ತಕ್ಕಂತೆ ಜನರಿಗೆ ಅತ್ಯುತ್ತಮ ಸೇವೆಯನ್ನು ನೀಡಲು ಭಾರತ ಸರ್ಕಾರವು ನೂತನವಾಗಿ ‘ಅಂಚೆ ಕಛೇರಿ ಕಾಯಿದೆ 2023’ ನ್ನು ಜಾರಿಗೊಳಿಸಿದೆ. ಈ ಹೊಸ ಕಾಯಿದೆಯು 18 ನೇ ಜೂನ್ 2024 ರಿಂದ ಭಾರತದಾದ್ಯಂತ ಜಾರಿಗೊಂಡಿದ್ದು, 1898ರ ಹಳೆಯ ಕಾಯಿದೆಯು ರದ್ದುಗೊಂಡಿದೆ.
1898 ರ ಕಾಯಿದೆಯನ್ನು ಹೋಲಿಸಿದರೆ 2023 ರ ಕಾಯಿದೆಯಲ್ಲಿ ಅನೇಕ ವಿಶೇಷತೆಗಳಿವೆ ಹಳೆಯ ಕಾಯಿದೆಯಲ್ಲಿ 77 ಸೆಕ್ಷನ್‌ಗಳಿದ್ದವು. ಈಗಿನ ಕಾಯಿದೆಯಲ್ಲಿ 16 ಸಕ್ಷನ್‌ಗಳಿವೆ ಮತ್ತು ಸರಳವಾದ ಭಾಷೆಯಲ್ಲಿದೆ.
ಅಂಚೆ ಕಛೇರಿ ಕಾಯಿದೆ 2023 ರ ಅಡಿಯಲ್ಲಿ ಹೊಸದಾಗಿ ಅಂಚೆ ಕಚೇರಿ ರೆಗ್ಯುಲೇಷನ್ 2024 ಮತ್ತು ಅಂಚೆ ಕಚೇರಿ ರೆಗ್ಯುಲೇಷನ್ 2024 ಡಿಸೆಂಬರ್ 16,2024 ರಿಂದ ಜಾರಿಗೆ ಬಂದಿದೆ. ಇದರಿಂದಾಗಿ 1933 ರ ಅಂಚೆ ಕಛೇರಿ ನಿಯಮಾವಳಿ ರದ್ದುಗೊಂಡಿದೆ. ಅದರಲ್ಲಿ 225 ನಿಯಮಾವಳಿಗಳಿದ್ದವು.
ಈಗ ಕೇವಲ 19 ನಿಯಮಾವಳಿಗಳಿದ್ದು ಸರಳೀಕೃತಗೊಳಿಸಲಾಗಿದೆ. ಅಂಚೆ ಕಛೇರಿ ರೆಗ್ಯುಲೇಷನ್ 2024 ರಲ್ಲಿ 180 ರೆಗ್ಯುಲೇಷನ್‌ಗಳಿವೆ. ಅಂಚೆ ಸೇವೆಯನ್ನು ಇನ್ನಷ್ಟು ಜನಸ್ನೇಹಿಗೊಳಿಸಲು ಈ ಕಾಯಿದೆ, ನಿಯಮಾವಳಿ ಮತ್ತು ರೆಗ್ಯುಲೇಷನ್ ಸಹಕಾರಿಯಾಗಲಿದೆ. ಅಂಚೆ ಚೀಟಿಯನ್ನು ತಯಾರಿಸುವ, ಅದನ್ನು ಬಿಡುಗಡೆಗೊಳಿಸುವ ಅಧಿಕಾರ ಅಂಚೆ ಇಲಾಖೆಗೆ ಮಾತ್ರ ಇದೆ. ಈಗಿರುವ ‘ಪಿನ್ ಕೋಡ್’ ವ್ಯವಸ್ಥೆಯ ಜೊತೆಗೆ ವಿಳಾಸದಾರರನ್ನು ಕ್ಷಿಪ್ರವಾಗಿ ತಲುಪಲು ‘ಪೋಸ್ಟ್ ಕೋಡ್’ ಎಂಬ ಇನ್ನೂಂದು ಹೊಸ ವ್ಯವಸ್ಥೆ ಕೊಡ ಜಾರಿಗೆ ಬರಲಿದೆ.
ಭಾರತದಿಂದ ವಿದೇಶಗಳಿಗೆ ರವಾನಿಸಲ್ಪಡುವ ಮತ್ತು ವಿದೇಶಗಳಿಂದ ಭಾರತಕ್ಕೆ ರವಾನಿಸಲ್ಪಡುವ ಪತ್ರ, ಪಾರ್ಸೆಲ್‌ಗಳ ಬಟವಾಡೆಯಲ್ಲಿ ಉತ್ಕೃಷ್ಠ ಸೇವೆ ನೀಡಲು ವಿದೇಶಗಳೊಡನೆ ವಿಶೇಷ ಸಂವಹನ ಸಾಧಿಸಲು ಹೊಸ ಕಾಯಿದೆ ಅನುವು ಮಾಡಿಕೊಡಲಿದೆ.
Indian Post ಪತ್ರಗಳ ಮೇಲೆ, ಪಾರ್ಸೆಲ್‌ಗಳ ಮೇಲೆ ಅಂಚೆ ಕಛೇರಿಯಿಂದ ಮಾಡಲಾಗುವ ಗುರುತು ಅಥವಾ ಷರಾಗಳಿಗೆ ಕಾನೂನಿನಲ್ಲಿ ವಿಶೇಷ ಮಾನ್ಯತೆಯು ದೊರಕಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಕಚೇರಿ ಪಾವತಿಯಾಗಲು ಬಾಕಿಯಾದ ಮೊತ್ತವನ್ನು ಪಡೆಯಲು ಕಾನೂನಾತ್ಮಕ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ರಾಷ್ಟçದ ರಕ್ಷಣೆ ಮತ್ತು ಸಾರ್ವಜನಿಕ ಹಿತದೃಷ್ಠಿಯಿಂದ ಅಂಚೆ ಕಛೇರಿಯ ಮೂಲಕ ರವಾನೆಯಾಗುತ್ತಿರುವ ಯಾವುದೇ ವಸ್ತುವನ್ನು ಅಗತ್ಯ ಸಂದರ್ಭಗಳಲ್ಲಿ ಪ್ರತಿಬಂಧಿಸಿ, ಅದನ್ನು ಸಕ್ಷಮ ಪ್ರಾಧಿಕಾರದ ಮುಂದೆ ಹಾಜರುಪಡಿಸಿ ಮುಂದಿನ ತನಿಖೆಗೆ ಒಳಪಡಿಸುವ ಅವಕಾಶ ಈ ಕಾಯಿದೆಯಲ್ಲಿದೆ.
ಅದಕ್ಕೆ ನಿರ್ದಿಷ್ಠ ಅಂಚೆ ಪ್ರಾಧಿಕಾರದಿಂದ ಒಪ್ಪಿಗೆಯನ್ನು ಪಡೆಯಬೇಕು ಮತ್ತು ಸೂಚಿತ ವಿಧಾನವನ್ನು ಅನುಸರಿಸಬೇಕಾಗುತ್ತದೆ.
ಅಂಚೆ ಸೇವೆಗಳಲ್ಲೂ ಕೆಲವು ಬದಲಾವಣೆಗಳು 16 ನೇ ಡಿಸೆಂಬರ್ 2024 ರಿಂದ ಜಾರಿಗೆ ಬಂದಿದೆ. ಪತ್ರಗಳನ್ನು ಮೊದಲು 2 ಕಿ.ಲೋ ಗ್ರಾಂ ವರೆಗೆ ಕಳುಹಿಸಬಹುದಾಗಿತ್ತು ಈಗ 500 ಗ್ರಾಂ ವರೆಗೆ ಪತ್ರಗಳಿಗೆ ಅವಕಾಶವಿದೆ. ಅದಕ್ಕಿಂತ ಜಾಸ್ತಿ ಇದ್ದರೆ ಅದು ‘ಇಂಡಿಯಾ ಪೋಸ್ಟ್ ಪಾರ್ಸೆಲ್’ ಎಂದು ಪರಿಗಣಿತವಾಗುತ್ತದೆ. ಈ ಮೊದಲು ಇದ್ದ ‘ರಿಜಿಸ್ಟರ್ಡ್ ಪಾರ್ಸಲ್’ ಈಗ ‘ಇಂಡಿಯಾ ಪೋಸ್ಟ್ ಪಾರ್ಸೆಲ್’ ಎಂದು ಬದಲಾವಣೆಗೊಂಡಿದೆ. 35 ಕಿಲೋ ಗ್ರಾಂ ವರೆಗೂ ‘ಇಂಡಿಯಾ ಪೋಸ್ಟ್ ಪಾರ್ಸೇಲ್’ ಅಥವಾ ‘ಸ್ಪೀಡ್ ಪೋಸ್ಟ್ ಪಾರ್ಸೇಲ್’ ಗಳನ್ನು ಕಳುಹಿಸಬಹುದಾಗಿದೆ. ನೊಂದಾಯಿತವಲ್ಲದ ಅಂದರೆ ‘ಅನ್‌ರಿಜಿಸ್ಟರ್ಡ್ ಪಾರ್ಸೆಲ್ ಸೇವೆ’ ಈಗ ಇರುವುದಿಲ್ಲ. ಇಂಡಿಯಾ ಪೋಸ್ಟ್ ಪಾರ್ಸೆಲ್ ಅಥವಾ ಸ್ಪೀಡ್ ಪೋಸ್ಟ್ ಪಾರ್ಸೆಲ್‌ನ್ನು ಕಳುಹಿಸುವಾಗ ಒಂದು ಸ್ವಯಂ ಘೋಷಣೆಯ ಫಾರಂ ಅನ್ನು ಗ್ರಾಹಕರು ಭರ್ತಿ ಮಾಡಿ ಅಂಚೆ ಕಛೇರಿಗೆ ಸಲ್ಲಿಸಬೇಕಾಗುತ್ತದೆ.
ಈ ಮೊದಲು ‘ಬುಕ್ ಪೋಸ್ಟ್’ ಅಂದರೆ ‘ತೆರೆದ ಅಂಚೆ’ ಯಲ್ಲಿ 6 ವಿಧಗಳಿದ್ದವು. ಆದರೆ ಈಗ ನೋಂದಾಯಿತ ವೃತ್ತ ಪತ್ರಿಕೆ, ನಿಯತಕಾಲಿಕ, ಬ್ಲೆöÊಂಡ್ ಲಿಟರೇಚರ್ ಮತ್ತು ಸಾಮಾನ್ಯ ತೆರೆದ ಅಂಚೆ ಎಂಬ 4 ತರಹದ ಬುಕ್ ಪೋಸ್ಟ್ ಸೇವೆಗಳು ಲಭ್ಯವಿದೆ.
ಅಂಚೆ ಕಾರ್ಡಿನಲ್ಲಿ ಈ ಮೊದಲು 4 ವಿಧಗಳಿದ್ದು ಈಗ ಒಂದೇ ವಿಧವಿದೆ. ಅಂಚೆ ಕಾರ್ಡ್ನ್ನು ನೋಂದಾಯಿತ ಅಂಚೆಯಲ್ಲಿ ಕೂಡಾ ನಿಗಧಿತ ಶುಲ್ಕ ಪಾವತಿಸಿ ಕಳುಹಿಸಬಹುದಾಗಿದೆ.
ನೋಂದಾಯಿತ ವೃತ್ತ ಪತ್ರಿಕೆ ಅಂದರೆ ರಿಜಿಸ್ಟರ್ಡ್ ನ್ಯೂಸ್ ಪೇಪರ್ ಗರಿಷ್ಠ ವಾರಕ್ಕೂಮ್ಮೆಯಾದರೂ ಪ್ರಕಟವಾಗುತ್ತಿದಲ್ಲಿ ಮಾತ್ರ ಅಂಚೆ ಇಲಾಖೆಯಲ್ಲಿ ನೋಂದಾಯಿಸಿ ವಿನಾಯಿತಿ ದರದಲ್ಲಿ ರವಾನಿಸಬಹುದಾಗಿದೆ.
ಪಾಕ್ಷಿಕ, ಮಾಸಿಕ ತ್ರೈಮಾಸಿಕ, ವಾರ್ಷಿಕ ಇತ್ಯಾದಿ ಪತ್ರಿಕೆಗಳನ್ನು ತೆರೆದ ಅಂಚೆಯಲ್ಲಿ ನಿಯತಕಾಲಿಕ ವರ್ಗದಡಿ ಅದಕ್ಕೆ ಅನ್ವಯಿಸುವ ಅಂಚೆದರವನ್ನು ಪಾವತಿಸುವ ಮೂಲಕ ಕಳುಹಿಸಬಹುದು. ಇಂತಹ ಪತ್ರಿಕೆಗಳನ್ನು ಅಂಚೆ ಇಲಾಖೆಯಲ್ಲಿ ಪ್ರತ್ಯೇಕವಾಗಿ ನೋಂದಾಯಿಸುದಿಲ್ಲ.
ಆದರೆ ಆ ವೃತ್ತ ಪತ್ರಿಕೆಗಳು ಪ್ರೆಸ್ ಎಂಡ್ ರಿಜಿಸ್ಟೇಶನ್ ಆಫ್ ಪಿರಿಯಾಡಿಕಲ್ಸ್ ಆಕ್ಟ್ 2023 ರ ಅಡಿಯಲ್ಲಿ ನೋಂದಾಯಿತವಾಗಿರಬೇಕು.
ಈ ಮೂದಲು ಇದ್ದ ‘ವ್ಯಾಲ್ಯೂ ಪೇಯೇಬಲ್ ಪೋಸ್ಟ್’ ಅಂದರೆ ‘ವಿ.ಪಿ.ಪಿ’ ಸೇವೆಯು ಈಗ ಲಭ್ಯವಿರುವದಿಲ್ಲ. ಆದರ ಬದಲಾಗಿ ಹೆಚ್ಚು ಅನುಕೂಲತೆಗಳಿರುವ ‘ಕ್ಯಾಶ್ ಆನ್ ಡೆಲಿವರಿ’ ಅಂದರೆ ಬಟವಾಡೆಯ ಸಮಯದಲ್ಲಿ ಹಣ ಪಾವತಿ ಮಾಡಿ ತೆಗೆದುಕೊಳ್ಳುವ ಸೇವೆ ಲಭ್ಯವಿದೆ. ಈಗ ರಿಟೈಲ್ ಗ್ರಾಹಕರಿಗೂ ಈ ಸೇವೆ ಲಭ್ಯವಿದೆ. ಅಂಚೆ ಕಚೇರಿಗಳಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಮೊದಲು ರೂ. 1,2,5,7,10,20,50 ಮತ್ತು 100 ರೂ. ಮುಖ ಬೆಲೆಗಳಲ್ಲಿ ಲಭ್ಯವಿದ್ದವು. ಈಗ ರೂ. 10,20,50 ಮತ್ತು 100ರ ಮುಖ ಬೆಲೆಯಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಗಳು ಲಭ್ಯವಿದೆ.
ಈ ಮೊದಲು ಮನಿಯಾರ್ಡರ್‌ಗಳನ್ನು ಕಳುಹಿಸುವಾಗ ಪ್ರತಿ ಮನಿಯಾರ್ಡರಿನ ಮೊತ್ತ ರೂ.5000/- ಮೀರುವಂತಿರಲಿಲ್ಲ. ಆದರೆ ಈಗ ರೂ. 10,000/-ದ ವರೆಗೂ ಮನಿಯಾರ್ಡರ್‌ಗಳನ್ನು ಕಳುಹಿಸಬಹುದಾಗಿದೆ. ಅಲ್ಲದೇ ಯಾವುದೇ ವ್ಯಕ್ತಿಯು ಮನಿಯಾರ್ಡರ್ ಮೂಲಕ ಪ್ರತಿ ತಿಂಗಳು ಪಡೆಯಬಹುದಾದ ಹಣ ರೂ.25000/- ವನ್ನು ಮೀರುವಂತಿಲ್ಲ. ಇದು ವೈಯಕ್ತಿಕವಾಗಿ ಕಳುಹಿಸಲ್ಪಡುವ ಮನಿಯಾರ್ಡರಿಗೆ ಅನ್ವಯಿಸುತ್ತದೆ.
ಹೀಗೆ ಬದಲಾದ ಕಾಲಘಟ್ಟದಲ್ಲಿ ಗ್ರಾಹಕರ ಹಿತ, ಗ್ರಾಹಕರ ಸುರಕ್ಷತೆ ಹಾಗೂ ರಾಷ್ಟçದ ಸುರಕ್ಷತೆಗಳಿಗೆ ಪೂರಕವಾಗಿ ಅಂಚೆ ಕಛೇರಿ ಕಾಯಿದೆ 2023, ಅಂಚೆ ಕಚೇರಿ ನಿಯಾಮವಳಿ 2024 ಹಾಗೂ ಅಂಚೆ ಕಚೇರಿ ರೆಗ್ಯುಲೇಷನ್ 2024 ಜಾರಿಗೆ ಬಂದಿದೆ. ವಿಶಾಲವಾದ ಭಾರತ ದೇಶದಲ್ಲಿ ಬಹುದೊಡ್ಡ ಸೇವಾ ಜಾಲದ ಮೂಲಕ ಅಂಚೆ ಕಛೇರಿಗಳು ಜನರ ದೈನಂದಿನ ಜೀವನದಲ್ಲಿ ಅತ್ಯಮೂಲ್ಯವಾದ ಪಾತ್ರವನ್ನು ವಹಿಸುತ್ತದೆ. ಹೊಸ ಅಂಚೆ ಕಛೇರಿ ಕಾಯಿದೆ.
ನಿಯಮಾವಳಿ ಮತ್ತು ರೆಗ್ಯುಲೇಷನ್‌ಗಳ ಅಡಿಯಲ್ಲಿ ಅಂಚೆ ಕಚೇರಿಗಳು ಇನ್ನಷ್ಟು ಉತ್ತಮ ಸೇವೆಯನ್ನು ಜನರಿಗೆ ನೀಡಲಿದೆ ಎಂದು ಶಿವಮೊಗ್ಗ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.