Information & Broadcasting ಚಲನಚಿತ್ರ ಸಶಕ್ತ ಮಾಧ್ಯಮವಾಗಿದ್ದು, ಏಕಪರದೆಯ ಚಿತ್ರಮಂದಿರಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಕಳವಳದ ಸಂಗತಿಯಾಗಿದೆ, ಜಗತ್ತಿನ ಇತರೆ ರಾಷ್ಟ್ರಗಳಲ್ಲಿ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗುತ್ತಿರುವದನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿ, ಚಿತ್ರರಂಗದ ಉಳಿವು ಮತ್ತು ಬೆಳವಣಿಗೆಗೆ ಎಲ್ಲರೂ ಪಣತೊಡಬೇಕು.ಪೈರಸಿ ಹಾವಳಿ ತಡೆಯಬೇಕು ಎಂದು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿಂದು ವಾರ್ತಾಸೌಧದ ಸುಲೋಚನ ಸಭಾಂಗಣದಲ್ಲಿಂದು ಸಂಜೆ ಆಯೋಜಿಸಿದ್ದ 16 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು,
ಮಾಹಿತಿ,ಉದ್ಯೋಗ ಮತ್ತು ಆದಾಯ ತರುವ ಸಿನಿಮಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಸಾಮಾಜಿಕ ಭದ್ರತೆ ಒದಗಿಸಲು ಸಿನಿ ಮಸೂದೆ ಜಾರಿಗೊಳಿಸುವ ಅಗತ್ಯವಿದೆ.
ಇದಕ್ಕೆ ಸಿನೆಮಾ ರಂಗದ ಎಲ್ಲರ ಸಹಕಾರ ಬೇಕು.
ಸಣ್ಣ ಬಜೆಟ್ ಚಲನಚಿತ್ರಗಳಿಗೆ ಮುಖ್ಯ ವೇದಿಕೆ ಒದಗಿಸಬೇಕು ಎಂದರು.
ದೇಶದ ಅಭಿವೃದ್ಧಿಯನ್ನು ಮಹಿಳೆಯರ ಸಾಧನೆಗಳ ಮೂಲಕ ಅಳೆಯಬೇಕು ಎಂಬ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ನುಡಿಗಳನ್ನು ಸ್ಮರಿಸಿದ ಅವರು, ಮಹಿಳೆಗೆ ಆಸ್ತಿಯಲ್ಲಿ ಸಮಾನ ಹಕ್ಕು, ಸ್ವಾತಂತ್ರ್ಯ ಕಲ್ಪಿಸಲು,ಮಾತೃತ್ವ ರಜೆ, ವಿಚ್ಛೇದನ ಹಕ್ಕುಗಳನ್ನು ಸಂವಿಧಾನ ಮೂಲಕ ನೀಡಿದ ಶ್ರೇಯಸ್ಸು ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಎಲ್ಲ ಮಹಿಳೆಯರು ಅವರನ್ನು ಸ್ಮರಿಸಬೇಕು.ಹಿಂದೂ ಕೋಡ್ ಬಿಲ್ ಜಾರಿಗೆ ಆಗ್ರಹಿಸಿ ಕೇಂದ್ರದ ಮಂತ್ರಿಸ್ಥಾನಕ್ಕೆ ಅಂಬೇಡ್ಕರ್ ಅವರು ರಾಜೀನಾಮೆ ನೀಡಿದ್ದರು,ಅವರು ಕೇವಲ ಎಸ್ ಸಿ ಹಾಗೂ ಎಸ್ ಟಿ ಗಳಿಗೆ ಸೀಮಿತವಲ್ಲ ಎಂದು ಸಚಿವ ಸಂತೋಷ ಲಾಡ್ ಅಭಿಪ್ರಾಯ ಪಟ್ಟರು.
16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿ ನಟ ಕಿಶೋರ್‌ಕುಮಾರ್ ಜಿ ಮಾತನಾಡಿ ,ನಮಗೆಲ್ಲ ಇತಿಹಾಸ ಮತ್ತು ಐತಿಹಾಸಿಕ ಪುರುಷರ ಬಗ್ಗೆ ಹೆಮ್ಮೆಯಿದೆ, ಅವರ ಸಂದೇಶಗಳು ಮುಖ್ಯ ಎಂಬ ಹೇಳುವ ಧಾವಂತದಲ್ಲಿಯೇ ಅವರ ಆದರ್ಶಗಳ ಪಾಲನೆಯನ್ನು ಮರೆತು ಬಿಡುತ್ತೇವೆ.ಕನ್ನಡದ ಮೊದಲ ವಾಕ್ಚಿತ್ರ ಸತಿ ಸುಲೋಚನದ ಮೂಲಕ ಬೆಳ್ಳಾವೆ ನರಹರಿಶಾಸ್ತ್ರಿಗಳು ಯುದ್ಧ ಬೇಡ ಶಾಂತಿ ಬೇಕು ಎಂಬ ಮಹಾನ್ ಮಾನವತೆಯ ಸಂದೇಶ ಸಾರಿದ ಹಿನ್ನೆಲೆ ಕನ್ನಡ ಚಿತ್ರರಂಗಕ್ಕಿದೆ, ಬೇಡರ ಕಣ್ಣಪ್ಪ,ಸನಾದಿ ಅಪ್ಪಣ್ಣ ಮೊದಲಾದ ಚಿತ್ರಗಳ ಮೂಲಕ ಜಾತಿ ಪದ್ಧತಿ ವಿರುದ್ಧ ಸಮಾನತೆಯ ಧ್ವನಿ ಸಾರಿದ ಡಾ.ರಾಜ್‌ಕುಮಾರ್ ಅವರು, ಕಣ್ಣಪ್ಪನ ಮೂಲಕ ಧರ್ಮದ ಸರಿ ತಪ್ಪುಗಳನ್ನು ಒರೆಗೆ ಹಚ್ಚಿದ್ದರು ಎಂದರು. ಸತ್ಯವನ್ನು ಧೈರ್ಯವಾಗಿ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತಹ ನಾಯಕರು ಇಂದು ಬೇಕಾಗಿದ್ದಾರೆ.ಸವರ್ಣೀಯರೆಲ್ಲರೂ ಶೋಷಕರಲ್ಲ ಅಂತಹವರನ್ನು ಒಳಗೊಳ್ಳುವಿಕೆ ಆಗಬೇಕಿದೆ, ಪುರಾಣವನ್ನು ಪುರಾಣವಾಗಿ,ಇತಿಹಾಸವನ್ನು ಇತಿಹಾಸವಾಗಿ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ಸಾಧು ಕೋಕಿಲ ಮಾತನಾಡಿ , ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಯವರಿಗೆ ಮಾಡಿದ ಮನವಿಗೆ ಸರ್ಕಾರವು ಸ್ಪಂದಿಸಿದ್ದು ,2025-26 ನೇ ಸಾಲಿನ ಅಯವ್ಯಯದಲ್ಲಿ ಚಲನಚಿತ್ರ ಅಕಾಡೆಮಿಯ ಆವರಣದಲ್ಲಿ ಸಿನೆಮಾ ಸಂಕೀರ್ಣ ಹಾಗೂ ಚಲನಚಿತ್ರ ಭಂಡಾರ ಸ್ಥಾಪನೆಯ ಘೋಷಣೆ ಮಾಡಿದ್ದಾರೆ, ಕನ್ನಡ ಚಿತ್ರಪ್ರದರ್ಶನಕ್ಕೆ ಗರಿಷ್ಠ ಟಿಕೆಟ್ ದರ 200 ರೂ ನಿಗದಿಗೆ ಕ್ರಮವಹಿಸಿರುವುದು ಹಾಗೂ ಚಲನಚಿತ್ರರಂಗವನ್ನು ಉದ್ಯಮವೆಂದು ಪರಿಗಣಿಸಿ ಹಲವು ಸೌಲಭ್ಯ ಒದಗಿಸಲು ಮುಂದಾಗಿರುವುದನ್ನು ಸ್ವಾಗತಿಸಿದರು.ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಶೇ. 30 ರಿಂದ 40 ರಷ್ಟು ಪ್ರೇಕ್ಷಕರ ಹೆಚ್ಚಳ ಕಂಡುಬಂದಿದೆ, 52 ಸಾವಿರಕ್ಕೂ ಜನರು ಸಿನೆಮಾ ವೀಕ್ಷಿಸಿದ್ದಾರೆ. 4217 ಜನ ಸಿನೆಮಾಸಕ್ತರು ನೋಂದಣಿಯಾಗಿದ್ದರು ಎಂದರು
ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್. ವಿದ್ಯಾಶಂಕರ್ ಮಾತನಾಡಿ, ಚಿತ್ರೋತ್ಸವವು ಬೆಂಗಳೂರಿನಲ್ಲಿ ಜಗತ್ತನ್ನು ಬಿಂಬಿಸಿದೆ. ಸಾವಿರದ ಐನೂರು ವರ್ಷಗಳಷ್ಟು ಹಳೆಯದಾದ ಕನ್ನಡ ಸಂಸ್ಕೃತಿಯನ್ನು ಜಾಗತಿಕವಾಗಿ ಪಸರಿಸಲು ಚಿತ್ರೋತ್ಸವ ವೇದಿಕೆಯಾಗಿ ಬೆಳೆಯುತ್ತಿದೆ ಎಂದರು.
16 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾದ ಹೆಸರಾಂತ ನಟಿ ಶಬಾನಾ ಅಜ್ಮೀ ಪರವಾಗಿ ಅವರ ಬಾಲ್ಯದ ಗೆಳತಿ ಪ್ರತಿಭಾನ್ವಿತ ಕಲಾವಿದೆ ಅರುಂಧತಿ ನಾಗ್ ಪ್ರಶಸ್ತಿ ಸ್ವೀಕರಿಸಿದರು.ಪ್ರಶಸ್ತಿಯು ಹತ್ತು ಲಕ್ಷ ರೂ.ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.
ಅರುಂಧತಿ ನಾಗ್ ಮಾತನಾಡಿ, ಶಬಾನಾ ಆಜ್ಮೀ ಭಾರತೀಯ ಚಿತ್ರರಂಗದ ಮೇರುನಟಿ, ಅಕೆ ಕೇವಲ ಸಿನೆಮಾ ನಟಿ ಮಾತ್ರವಲ್ಲ ತುಳಿತಕ್ಕೊಳಗಾದವರ ಪರ ಧ್ವನಿ ಎತ್ತುವ,ಸತ್ಯವನ್ನು ನಿಷ್ಠುರವಾಗಿ ಹೇಳುವ ಮಹಾನ್ ವ್ಯಕ್ತಿತ್ವವಾಗಿದ್ದಾರೆ, ಅವರ ಅನುಪಸ್ಥಿತಿಯಲ್ಲಿ ಪ್ರಶಸ್ತಿ ಸ್ವೀಕರಿಸಿರುವುದು ಸಂತಸ ತಂದಿದೆ ಎಂದರು.
ಕನ್ನಡ ಸ್ಪರ್ಧಾ ವಿಭಾಗ,ಭಾರತೀಯ ಸ್ಪರ್ಧಾ ವಿಭಾಗ,ಏಷಿಯನ್ ಸ್ಪರ್ಧಾ ವಿಭಾಗಗಳ ತೀರ್ಪುಗಾರರನ್ನು ಸನ್ಮಾನಿಸಿ,ಗೌರವಿಸಲಾಯಿತು.
ತೀರ್ಪುಗಾರರ ವಿಶೇಷ ಮೆಚ್ಚುಗೆ ಚಿತ್ರ,ಏಷಿಯನ್ ಸ್ಪರ್ಧೆ,ಇಂಡಿಯನ್ – ಚಿತ್ರಭಾರತಿ ಸ್ಪರ್ಧೆ,ಕನ್ನಡ ಸ್ಪರ್ಧೆ ವಿಭಾಗದಲ್ಲಿ ಪ್ರಶಸ್ತಿಗಳನ್ನು ಪಡೆದ ಚಲನಚಿತ್ರಗಳ ನಿರ್ದೆಶಕರು ಹಾಗೂ ನಿರ್ಮಾಪಕರಿಗೆ ಪ್ರಶಸ್ತಿ ನೀಡಿ,ಗೌರವಿಸಲಾಯಿತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸರ್ಕಾರದ ಕಾರ್ಯದರ್ಶಿ ಬಿ.ಬಿ.ಕಾವೇರಿ,ಅಕಾಡೆಮಿಯ ರಿಜಿಸ್ಟ್ರಾರ್ ಹಿಮಂತ್‌ರಾಜು ವೇದಿಕೆಯಲ್ಲಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ಎಂ ನಿಂಬಾಳ್ಕರ್ ಸ್ವಾಗತಿಸಿದರು, ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ ವಂದಿಸಿದರು.ಉಷಾ ಕೋಕಿಲ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಿತು.