JCI Shivamogga ಸಮಾಜಮುಖಿ ಚಟುವಟಿಕೆಗಳ ಜತೆಯಲ್ಲಿ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಜೆಸಿಐ ಮಹತ್ತರ ಪಾತ್ರ ವಹಿಸಿದೆ. ಯುವಜನರಿಗೆ ವ್ಯಕ್ತಿತ್ವ ವಿಕಸನ ಮಾರ್ಗದರ್ಶನ ನೀಡುತ್ತಿದೆ ಎಂದು ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಸೂರ್ಯನಾರಾಯಣ ವರ್ಮ ಹೇಳಿದರು.
ಶಿವಮೊಗ್ಗ ನಗರದ ಸರ್ಕಾರಿ ನೌಕರರ ಭವನದಲ್ಲಿ ಶಿವಮೊಗ್ಗ ನಗರದ 19 ಜೆಸಿಐ ಸಂಸ್ಥೆಗಳಿಂದ ಆಯೋಜಿಸಿದ್ದ ಅಧಿಕೃತ ಭೇಟಿ ಸಮಾರಂಭದಲ್ಲಿ ಮಾತನಾಡಿ, ಜೆಸಿಐ ಫೌಂಡೇಶನ್ ವತಿಯಿಂದ ಈಗಾಗಲೇ ಸಾಕಷ್ಟು ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವುದರ ಮುಖಾಂತರ ಶಿಕ್ಷಣದಲ್ಲಿ ಕ್ರಾಂತಿ ಮಾಡಿದೆ. ಯುವಜನರಿಗೆ ಶಾಲಾ ಕಾಲೇಜುಗಳಲ್ಲಿ ವ್ಯಕ್ತಿತ್ವ ವಿಕಸನದ ತರಬೇತಿ ನೀಡಿದೆ. ಇದರಿಂದ ಉತ್ತಮ ಸದೃಢ ಸಮಾಜ ನಿರ್ಮಾಣವಾಗುವುದರ ಜತೆಗೆ ದೇಶದ ಆಸ್ತಿಯಾಗುತ್ತಾರೆ ಎಂದು ತಿಳಿಸಿದರು.
ಈಗಾಗಲೇ ಶಿವಮೊಗ್ಗದಲ್ಲಿ ಅತಿ ಹೆಚ್ಚು ಜೆಸಿ ಘಟಕಗಳಿದ್ದು, ಇದರ ಮುಖಾಂತರ ಸಾಕಷ್ಟು ಸೇವಾ ಚಟುವಟಿಕೆಗಳನ್ನು ಮಾಡುತ್ತಿದ್ದು, ಜನಮಾನಸವನ್ನು ತಲುಪಿ ಒಳ್ಳೆಯ ಪ್ರಶಂಸೆಗೆ ಪಾತ್ರವಾಗಿದೆ. ಜೆಸಿಐ ಸಂಸ್ಥೆಯಲ್ಲಿ ತೊಡಗಿಸಿಕೊಂಡವರು ರಾಷ್ಟ್ರದ ಮುನ್ನಡೆಯಲ್ಲಿ ಪಾತ್ರ ವಹಿಸದ್ದಾರೆ. ಬಾಲ್ಯದಲ್ಲಿ ಜೆಸಿಐ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಪರಿಪೂರ್ಣ ವ್ಯಕ್ತಿಗಳಾಗಿ ನಿರ್ಮಾಣಗೊಳ್ಳುತ್ತಾರೆ. ಸಂಸ್ಕಾರದ ಜೊತೆಗೆ ಮಾನವೀಯ ಮೌಲ್ಯಗಳು ಹಾಗೂ ಜೀವನ ಕೌಶಲ್ಯಗಳು ವೃದ್ಧಿಯಾಗುತ್ತವೆ ಎಂದರು.
ಇದೇ ಸಂದರ್ಭದಲ್ಲಿ ವಲಯ ಅಧ್ಯಕ್ಷ ಗೌರೀಶ್ ಭಾರ್ಗವ್ ಮಾತನಾಡಿ, ಶಿವಮೊಗ್ಗ ಜಿಲ್ಲೆಗೆ ನಮ್ಮ ಜೆಸಿಐ ಸಂಸ್ಥೆಗಳು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ತನ್ನದೇ ಆದ ಛಾಪು ಮೂಡಿಸಿವೆ. ಇದರಿಂದ ಜೆಸಿಐ ಸಂಸ್ಥೆ ವಿಶ್ವದಲ್ಲಿ ವಿಶೇಷ ಸ್ಥಾನಮಾನ ಹೊಂದಿದೆ. ಇದರಿಂದ ಹೆಚ್ಚು ಹೆಚ್ಚು ಸದಸ್ಯರು ಸಂಸ್ಥೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
JCI Shivamogga ಇದೇ ಸಂದರ್ಭದಲ್ಲಿ ಸೂರ್ಯನಾರಾಯಣ ವರ್ಮ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ವಲಯ ಉಪಾಧ್ಯಕ್ಷ ಮಧುಸೂದನ್ ನಾವಡ, ಅನುಷ್ ಗೌಡ, ರೇಖಾ ರಂಗನಾಥ್, ತಾಯಿಮನೆ ಸುದರ್ಶನ್, ವಿನುತ್ ಶಿಕಾರಿಪುರ, ಜೆಸಿಐ ಸಹ್ಯಾದ್ರಿ ಘಟಕದ ಅಧ್ಯಕ್ಷ ಗಣೇಶ.ಜಿ ಹಾಗೂ ಜೆಸಿಐನ 19 ಜನ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು, ಸದಸ್ಯರು ಇದ್ದರು.