International Women’s Day ತಂತ್ರಜ್ಞಾನದ ಜೊತೆಗೆ ಜಗತ್ತು ಆಧುನಿಕವಾದರೂ ಕೂಡ ಸಮಾಜದಲ್ಲಿ ಮಹಿಳೆಗೆ ಸರಿಯಾದ ರಕ್ಷಣೆ ಸಿಗುತ್ತಿಲ್ಲ ಎಂದು ಭಾವಸಾರ ವಿಷನ್ ಇಂಡಿಯಾ ಸಂಸ್ಥೆ ಅಧ್ಯಕ್ಷೆ ನಂದಾ ಜಗದೀಶ್ ಕಳವಳ ವ್ಯಕ್ತಪಡಿಸಿದ್ದಾರೆ. ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಗುಡ್ ಲಕ್ ಆರೈಕೆ ಕೇಂದ್ರದ ಮಹಿಳಾ ನಿವಾಸಿಗಳಿಗೆ ಸಹಾಯ ಹಸ್ತ ಚಾಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಹಿಳೆಯರ ಸಮಸ್ಯೆ ಆಲಿಸಿ ಪರಿಹಾರ ಸೂಚಿಸುವ ಕಾರ್ಯಕ್ರಮಗಳು ರೂಪಿತವಾಗಬೇಕು. ಆದರೆ, ಎಷ್ಟೋ ಕಡೆಗೆ ಮಹಿಳೆ ಇಂದಿಗೂ ಕೂಡ ಸೂಕ್ತ ರಕ್ಷಣೆ ಸಿಗದೇ ನೊಂದು ಜೀವನ ಸಾಗಿಸುತ್ತಿದ್ದಾಳೆ.
ಅನೇಕ ಮನೆಗಳಲ್ಲಿ, ಕಚೇರಿಗಳಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಅಂತಹ ಮಹಿಳೆಯನ್ನು ಸಮಾಜದಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದು ಸರಿ ಅಲ್ಲ. ನೊಂದ ಮಹಿಳೆಯರು ಇಂಥಹ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದು, ಗುಡ್ ಲಕ್ ಆರೈಕೆ ಕೇಂದ್ರದಲ್ಲಿ ನೊಂದ ಮಹಿಳೆಯರಿಗೆ ಮನೋಬಲ ತುಂಬುತ್ತಿರುವುದು ಶ್ಲಾಘನೀಯ ಎಂದರು. ಪ್ರಸ್ತುತ ಜಾರಿಗೆ ತಂದಿರುವ ಕಾನೂನುಗಳು ಮಹಿಳೆಯರ ಪರವಾಗಿದ್ದು, ನೊಂದವರು ಸೂಕ್ತ ನ್ಯಾಯ ದೊರಕಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಇನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರತಿವರ್ಷ ಜಾಗತಿಕವಾಗಿ ಆಚರಣೆ ಮಾಡಲಾಗುತ್ತದೆ. ಪ್ರತಿ ಕುಟುಂಬ, ದೇಶದ ದೊಡ್ಡ ಸೈನಿಕ ಶಕ್ತಿ ಎಂದೇ ಮಹಿಳೆಯರನ್ನು ಬಣ್ಣಿಸಲಾಗುತ್ತದೆ. ಇಂದು ಅವರ ಕೊಡುಗೆಗಳನ್ನು ನೆನೆದು ಸ್ಮರಿಸುವ ದಿನವಾಗಿಯೂ ಈಗ ಈ ದಿನವನ್ನು ಆಚರಣೆ ಮಾಡಲಾಗುತ್ತಿದ್ದು, ಬಿವಿಐ ಸಂಸ್ಥೆಯೂ ಕೂಡ ಮಹಿಳಾ ದನಾಚರಣೆಯಂದು ಸಹಾಯ ಹಸ್ತ ಚಾಚುತ್ತಿದೆ ಎಂದರು.
ಈ ವೇಳೆ ಬಿವಿಐ ಮಹಿಳಾ ಕಲ್ಯಾಣ ನಿರ್ದೇಶಕಿ ಕೋಮಲ್ ನವಲೆ, ಕಾರ್ಯದರ್ಶಿ ಸುನಿಲ್ ಗುಜ್ಜರ್, ಖಜಾಂಚಿ ಸ್ವಪ್ನ ಹರೀಶ್, ಅರ್ಚನಾ ನಾಜ್ರೆ, ಸುನಿಲ್, ಜಗದೀಶ್, ಗುಡ್ ಲಕ್ ಆರೈಕೆ ಕೇಂದ್ರದ ಅಧ್ಯಕ್ಷ ರವೀಂದ್ರನಾಥ್ ಐತಾಳ್, ಶಿವಪ್ಪಗೌಡ, ಕಾರ್ಯದರ್ಶಿ ಪಂಚಾಕ್ಷರಿ ಹಿರೇಮಠ್, ನಿರ್ದೇಶಕರಾದ ಸುರೇಶ್, ಜಿ. ವಿಜಯಕುಮಾರ್ ಸೇರಿದಂತೆ ಹಲವರಿದ್ದರು.