Guarantee Scheme ಕರ್ನಾಟಕ ಸರ್ಕಾರದ ಮಹತ್ವದ ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಹಾಗೂ ಯುವನಿಧಿ ಜಾರಿಗೊಂಡಾಗಿನಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಈ ಯೋಜನೆಗಳು ಹೀಗೆಯೆ ಮುಂದುವರೆಯಲಿವೆ. ಇವುಗಳನ್ನು ನಿಲ್ಲಿಸಲಾಗುವುದೆಂಬ ಊಹಾಪೋಹಗಳಿಗೆ ಸಾರ್ವಜನಿಕರು ಕಿವಿಗೊಡಬೇಡಿ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ತಿಳಿಸಿದ್ದಾರೆ.
ಡಿಸೆಂಬರ್ ತಿಂಗಳ ಬಾಕಿ ಇರುವ ಗೃಹಲಕ್ಷ್ಮಿ ಹಣವನ್ನು ಮಾರ್ಚ್ 3 ರಂದು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದು, ಜನವರಿ ತಿಂಗಳಿನ ಗೃಹಲಕ್ಷ್ಮೀ ಹಣ ಬಿಲ್ಲಿಂಗ್ ಆಗುತ್ತಿದೆ. ಈ ಬಾಕಿ ಹಣವನ್ನು ಕೂಡ ಶೀಘ್ರದಲ್ಲೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಆಗಲಿದ್ದು, ನಂತರ ಫೆಬ್ರವರಿ ತಿಂಗಳ ಹಣ ಬಿಡುಗಡೆಯಾಗಲಿದೆ. ಆದ್ದರಿಂದ ಫಲಾನುಭವಿಗಳು ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.
Guarantee Scheme ಅನ್ಯಭಾಗ್ಯ ಯೋಜನೆಯಡಿಯಲ್ಲಿ ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯರಿಗೆ ಮಾಸಿಕ 5 ಕೆ.ಜಿ. ಅಕ್ಕಿ ಬದಲಿಗೆ ತಲಾ ರೂ. 170 ನೀಡಲಾಗುತ್ತಿದೆ. ಈಗಾಗಲೇ ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಹಣವನ್ನು ಕುಟುಂಬದ ಮಹಿಳಾ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮೆಯಾಗಿದ್ದು, ಜನವರಿ ತಿಂಗಳ ಹಣ ಶೀಘ್ರದಲ್ಲೇ ಡಿಬಿಟಿ ಆಗಲಿದೆ. ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಇನ್ನು ಮುಂದೆ ನಗದು ಬದಲಿಗೆ 5 ಕೆ.ಜಿ ಅಕ್ಕಿ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಫೆಬ್ರವರಿ ತಿಂಗಳಿಂದಲೇ ಜಾರಿಗೆ ಬಂದಿದೆ. ಮಾರ್ಚ್ ತಿಂಗಳಿನಲ್ಲಿ ಒಟ್ಟು 15 ಕೆ.ಜಿ. ಅಕ್ಕಿ ಅನ್ನಭಾಗ್ಯ ಯೋಜನೆಯ ಪ್ರತಿ ಫಲಾನುಭವಿಗಳಿಗೆ ದೊರೆಯಲಿದೆ ಎಂದು ತಿಳಿಸಿದ್ದಾರೆ.
ತಾಂತ್ರಿಕ ಅನಾನುಕೂಲಗಳಿಂದ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳ ಫಲಾನುಭವಿಗಳಿಗೆ ದೊರೆಯಬೇಕಾದ ಹಣ ಕಳೆದ ಮೂರು ತಿಂಗಳಲ್ಲಿ ವಿಳಂಬವಾಯಿತು ಎಂಬ ಕಾರಣಕ್ಕೆ ಐದು ಗ್ಯಾರಂಟಿ ಯೋಜನೆಗಳ ನಿಲುಗಡೆ ಆಗುತ್ತದೆ ಎಂಬ ಊಹಾಪೋಹಗಳು ಶುರುವಾಗಿದೆ. ಇದು ಬಡವರಿಗಾಗಿ ಮಾಡಿದ ಯೋಜನೆಗಳು ಹಾಗಾಗಿ ಯಾವುದೇ ಕಾರಣಕ್ಕೂ ಈ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ನಿರಂತರವಾಗಿ ಮುನ್ನೆಡೆಯುತ್ತಿರುವ ಈ ಪಂಚ ಯೋಜನೆಗಳ ಲಾಭವನ್ನು ಫಲಾನುಭವಿಗಳಿಗೆ ದೊರೆಯುವಂತೆ ಮಾಡುವುದೇ ರಾಜ್ಯ ಸರ್ಕಾರದ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
Guarantee Scheme ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ. ಊಹಾಪೋಹಗಳಿಗೆ ಬೆಲೆಕೊಡಬೇಡಿ- ಸಿ.ಎಸ್.ಚಂದ್ರಭೂಪಾಲ್
Date: