Rotary Shimoga ಉತ್ತಮ ಆಹಾರ ಪದ್ಧತಿ, ಸರಿಯಾದ ಜೀವನಶೈಲಿ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಡಾ. ನಿರಂಜನ್ ಪ್ರಭು ಅಭಿಮತ ವ್ಯಕ್ತಪಡಿಸಿದರು.
ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರೋಗ್ಯ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಆಯುರ್ವೇದಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದ್ದು, ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಋಷಿಮುನಿಗಳ ಕಾಲದಿಂದ ಇಂದಿನವರೆಗೂ ಆಯುರ್ವೇದ ಪದ್ಧತಿ ಪ್ರಸ್ತುತವಾಗಿದೆ. ಕರೋನಾ ಸಂದರ್ಭದಲ್ಲಿ ಆಯುರ್ವೇದ ಚಿಕಿತ್ಸೆ ಲಕ್ಷಾಂತರ ಪ್ರಾಣಗಳನ್ನು ಉಳಿಸಿದೆ ಎಂದು ತಿಳಿಸಿದರು.
ಇಂದಿನ ಬದಲಾದ ಪದ್ಧತಿ, ಒತ್ತಡ ಜೀವನಶೈಲಿ ಇರುವುದರಿಂದ ಆರೋಗ್ಯ ಕಾಳಜಿ ಬಗ್ಗೆ ಆಸಕ್ತಿ ವಹಿಸಬೇಕು. ಪ್ರತಿ ನಿತ್ಯ ಯೋಗ, ಪ್ರಾಣಾಯಾಮ, ಧ್ಯಾನವು ನಮ್ಮನ್ನು ಒತ್ತಡದಿಂದ ಮುಕ್ತಗೊಳಿಸುವ ಜತೆಗೆ ಸದಾ ಆತ್ಮವಿಶ್ವಾಸ ವೃದ್ಧಿಸಿ ಲವಲವಿಕೆಯಿಂದ ಇಡಲು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಪೌಷ್ಟಿಕಾಂಶ ಇರುವ ಉತ್ತಮ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಮಾತನಾಡಿ, ರಾಸಾಯನಿಕ ಬಳಕೆಯ ಆಹಾರ ಪದಾರ್ಥದಿಂದ ದೇಹದ ಮೇಲೆ ಪರಿಣಾಮ ಬೀರುತ್ತದೆ. ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ. ಸಾಮಾಜಿಕ ಜಾಲತಾಣದ ಒತ್ತಡ ಹೆಚ್ಚಾಗುತ್ತಿದೆ. ಸಕಾಲದಲ್ಲಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಮುಖ್ಯ ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಗಣೇಶ್, ಚಂದ್ರಶೇಖರಯ್ಯ, ರಾಮಚಂದ್ರ, ನಾಗರಾಜ್, ಕಿಶೋರ್‌ಕುಮಾರ್, ಗೀತಾ ಚಿಕ್ಕಮಠ್, ಪ್ರತಾಪ್, ಡಾ. ಧನಂಜಯ, ಕೇಶವಪ್ಪ, ಶ್ರೀನಿವಾಸ್, ಕೃಷ್ಣಮೂರ್ತಿ, ಸಾಧ್ವಿ, ರೋಟರಿ ಸದಸ್ಯರು ಉಪಸ್ಥಿತರಿದ್ದರು.
Rotary Shimoga ಸೂಕ್ತ ಜೀವನ ಶೈಲಿ.ಉತ್ತಮ ಆಹಾರ ಪದ್ಧತಿಯಿಂದ ಸದೃಢ ಆರೋಗ್ಯ-ಡಾ.ನಿರಂಜನ ಪ್ರಭು
Date: