Karnataka State Co-op Credit Societies Federation ltd ಶಿವಮೊಗ್ಗ ಸಹಕಾರ ಸಂಘಗಳಲ್ಲಿ ಸೇವೆ ಸಲ್ಲಿಸಬೇಕೆಂಬ ಆಸೆಯಿಂದ ಗೆದ್ದು ನಂತರ ಯಾವುದೇ ರೀತಿಯ ಸಭೆಗಳನ್ನು ಜರುಗಿಸದೆ ಸಹಕಾರ ಸಂಘಗಳ ಉಪವಿಧಿಯನ್ನು ತಿಳಿದುಕೊಳ್ಳದೆ ಮನಸ್ಸಿಗೆ ಬಂದಂತೆ ಸಹಕಾರಿಗಳು ವರ್ತಿಸಿದರೆ ಸಂಘಗಳು ಅವನತಿಯನ್ನು ಕಾಣಬೇಕಾಗುತ್ತದೆ.
ಅಲ್ಲದೆ ಕೆಲಸ ನಿರ್ವಹಿಸುತ್ತಿರುವ ಕಾರ್ಯದರ್ಶಿಗಳು ಕೂಡ ಕಾನೂನಾತ್ಮಕವಾಗಿ ಕಛೇರಿ ಟಿಪ್ಪಣಿಯನ್ನು ಸಲ್ಲಿಸಿ, ಮಾಸಿಕ ಸಭೆಗಳನ್ನು ಜರುಗಿಸಿ ಸಭೆಯು ತೆಗೆದುಕೊಂಡ ತೀರ್ಮಾನದಂತೆ ಜಂಟಿ ನಿಬಂಧಕರು, ಸಹಕಾರ ಸಂಘಗಳ ಉಪನಿಬಂಧಕರು, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಇವರುಗಳ ಕಾನೂನು ಸಲಹೆ ಪಡೆದು ಕೆಲಸ ನಿರ್ವಹಿಸಿದರೆ ಮಾತ್ರ ಸಹಕಾರ ಸಂಘಗಳು ಬೆಳೆಯಲು ಮತ್ತು ಉಳಿಯಲು ಸಾಧ್ಯ ಎಂದು ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷರು ಹಾಗೂ ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ನಿನ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಶ್ರೀ ಎಸ್.ಕೆ.ಮರಿಯಪ್ಪನವರು ಅಭಿಮತ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ., ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್ ನಿ., ಶಿವಮೊಗ್ಗ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಶಿವಮೊಗ್ಗ ಹಾಗೂ ಸಹಕಾರ ಇಲಾಖೆ, ಶಿವಮೊಗ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಉನ್ನತ ಮಟ್ಟದ ಒಂದು ದಿನದ ವಿಶೇಷ ತರಬೇತಿ ಶಿಬಿರವನ್ನು ದಿನಾಂಕ:28-02-2025ರಂದು ಶುಕ್ರವಾರ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಬಾಲರಾಜಅರಸ್ ರಸ್ತೆ, ಶಿವಮೊಗ್ಗ ಇದರ ಸಹ್ಯಾದ್ರಿ ಸಭಾಂಗಣದಲ್ಲಿ ಸದರಿ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿರುವ ಡಿ.ಸಿ.ಸಿ.ಬ್ಯಾಂಕ್‌ಗಳು ಮತ್ತು ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ಗಳು ಆರ್.ಬಿ.ಐ ನಿರ್ದೇಶನದಲ್ಲಿ ನಡೆಸಲಾಗುತ್ತಿದೆ ಆದರೆ ಸಹಕಾರ ಸಂಘಗಳು ಸಹಕಾರ ಇಲಾಖೆಯ ಅಡಿಯಲ್ಲಿ ನಡೆಯಬೇಕಾಗಿರುವುದರಿಂದ ಇಲಾಖಾ ಅಧಿಕಾರಿಗಳ ಮಾರ್ಗದರ್ಶನ ಮತ್ತು ಸಂಘದ ಆಡಳಿತ ಮಂಡಳಿ ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಹೆಚ್ಚಿನ ಲಾಭ ಮಾಡಿದರೆ ೬ನೇ ವೇತನ ಅಥವಾ 7ನೇ ವೇತನ ಶ್ರೇಣಿಯಂತೆ ಮಾಸಿಕ ಸಂಬಳವನ್ನು ಪಡೆಯಲು ಅರ್ಹರಾಗುತ್ತೀರಿ ಇಲ್ಲವಾದರೆ ಪ್ರತಿಯೊಂದು ತಪ್ಪಿಗೂ ಸಂಪೂರ್ಣ ಕಾರ್ಯದರ್ಶಿಗಳು ಹೊಣೆಗಾರರಾಗಬೇಕಾಗುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕರಾದ ಶ್ರೀ ತೇಜೋಮೂರ್ತಿ ಆರ್. ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತ ಸಹಕಾರ ಸಂಘಗಳ ಕಾಯಿದೆಯು ಆಗಿಂದಾಗ್ಗೆ ಬದಲಾವಣೆಗೆ ಅವಕಾಶವಿದ್ದು ಅದರಂತೆ ಬದಲಾದ ಕಾಯಿದೆಯಂತೆ ತಮ್ಮ ಸಂಘಗಳ ಬೈಲಾವನ್ನು ತಿದ್ದುಪಡಿ ಮಾಡಿಕೊಳ್ಳಬೇಕಾಗುತ್ತದೆ 2024-2025ನೇ ಸಾಲಿನ ಲೆಕ್ಕಪರಿಶೋಧಕರನ್ನು ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಿಕೊಂಡು ವಾರ್ಷಿಕ ಮಹಾಸಭೆ ಮುಗಿದ 07 ದಿನಗಳ ಒಳಗಾಗಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಗೆ ಮಾಹಿತಿಯನ್ನು ಸಲ್ಲಿಸಬೇಕು ಮತ್ತು ಮಾರ್ಚ್ -30ಮುಗಿದ ನಂತರ ಆಗಸ್ಟ್ -31ರೊಳಗೆ ಲೆಕ್ಕಪರಿಶೋಧನೆ ಮಾಡಿಸಿಕೊಂಡು ಸೆಪ್ಟೆಂಬರ್ -25ರೊಳಗೆ ವಾರ್ಷಿಕ ಮಹಾಸಭೆ ಮುಗಿಸಿಕೊಳ್ಳಬೇಕು ಇದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು ಇಂತಹ ತರಬೇತಿ ಪಡೆಯುವುದರ ಮೂಲಕ ತಮ್ಮ ತಮ್ಮ ಸಹಕಾರ ಸಂಘಗಳ ಶ್ರಯೋಭಿವೃದ್ಧಿಗೆ ಶ್ರಮಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಉಧ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷರಾದ ಶ್ರೀ ವಾಟಗೋಡು ಸುರೇಶ್‌ವಹಿಸಿ ಮಾತನಾಡುತ್ತ ಯೂನಿಯನ್ ಮತ್ತು ಮಹಾ ಮಂಡಳದ ವತಿಯಿಂದ ಜರುಗುವ ತರಬೇತಿ ಕಾರ್ಯಕ್ರಮದಲ್ಲಿ ನೀಡುವ ತರಬೇತಿಯನ್ನು ಮತ್ತು ಉಪಯುಕ್ತತೆಯನ್ನು ಹೆಚ್ಚಿನ ಮಟ್ಟದಲ್ಲಿ ಪಡೆದುಕೊಳ್ಳಬೇಕು ತಾವು ನೀಡುವ ಸಹಕಾರ ಶಿಕ್ಷಣ ನಿಧಿ ಈ ರೀತಿಯ ತರಬೇತಿಗಳಿಗೆ ಉಪಯುಕ್ತತೆ ಆಗುತ್ತಿದ್ದು, ಇದರ ಉಪಯೋಗ ಸರ್ವರಿಗೂ ಮತ್ತು ಸರ್ವ ಸಹಕಾರಿಗಳಿಗೆ ಮನಮುಟ್ಟುವಂತೆ ಆಗಬೇಕು ಶಿಕಾರಿಪುರ ತಾಲ್ಲೂಕು ರಾಜ್ಯಕ್ಕೆ, ರಾಷ್ಟ್ರಕ್ಕೆ ಮಾದರಿಯಾಗುವಂತೆ ಕಾರ್ಯರ್ವಹಿಸುವಂತಾಗಲಿ ಎಂದು ತಿಳಿಸಿದರು.
ಕಾರ್ಯಕ್ರಮದ ಮೊದಲಿಗೆ ಶಿಕಾರಿಪುರ ಬಣಜಿಗಬಂಧು ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀಮತಿ ಶ್ವೇತಾರವರು ಪ್ರಾರ್ಥನೆ ಸಲ್ಲಿಸಿದರು. ನಂತರ ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಯಶವಂತ ಕುಮಾರ್ ಹೆಚ್.ರವರು ಸರ್ವರನ್ನು ಸ್ವಾಗತಿಸಿದರು. ನಂತರ ಕೊನೆಯಲ್ಲಿ ಯೂನಿಯನ್ನಿನ ವ್ಯವಸ್ಥಾಪಕರಾದ ಶ್ರೀ ಕೆ.ಸಿ.ಹನುಮಂತಪ್ಪ ಇವರು ವಂದಿಸಿ ನಿರೂಪಿಸಿದರು.
ಉದ್ಘಾಟನಾ ಕಾರ್ಯಕ್ರಮದ ನಂತರ ಹಣಕಾಸು ನಿರ್ವಹಣೆ ಮತ್ತು ಕಾಯ್ದೆ ಪಾಲನೆ ವಿಷಯ ಕುರಿತು ಶ್ರೀ ಬಿ.ವಿ.ರವೀಂದ್ರನಾಥ್, ಸನ್ನದು ಲೆಕ್ಕಪರಿಶೋಧಕರು, ಸಾಗರ. ಮತ್ತು ಗುಣಾತ್ಮಕ ಸಾಲ ಮಂಜೂರಾತಿ ಕ್ರಮಗಳು ಮತ್ತು ಸಾಲ ವಸೂಲಾತಿ ನಿರ್ವಹಣೆ ವಿಷಯ ಕುರಿತು ಶ್ರೀ ಕೆ.ಸುಬ್ರಮಣ್ಯ, ನಿವೃತ್ತ ಪ್ರಧಾನ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಬೆಂಗಳೂರು ಇವರು ಉಪನ್ಯಾಸ ನೆರವೇರಿಸಿದರು.
ತರಬೇತಿ ಶಿಬಿರದಲ್ಲಿ 78ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿ ತರಬೇತಿ ಶಿಬಿರದ ಉಪಯೋಗ ಪಡೆದುಕೊಂಡಿರುತ್ತಾರೆ.