ಕ್ರೀಡೆ ಮಾನಸಿಕವಾಗಿ ಸದೃಢರಾಗಲು ಸಹಕಾರಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಹೇಳಿದರು.
ಅವರು ಥ್ರೋಬಾಲ್ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಬಿಎಸ್‌ವೈ ಕಪ್ ಥ್ರೋಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಎಂದು ಕ್ರೀಡಾಪಡುಗಳಿಗೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯ ವಾಲಿಬಾಲ್ ಸಂಸ್ಥೆಯ ಖಜಾಂಚಿ ಕೆ.ಎಸ್.ಶಶಿ ಮಾತನಾಡುತ್ತಾ, ಸತತವಾಗಿ ನಾಲ್ಕು ವರ್ಷಗಳಿಂದ ಬಿ.ಎಸ್.ಯಡಿಯೂರಪ್ಪ ಜನ್ಮದಿನದ ಪ್ರಯುಕ್ತ ಥ್ರೋಬಾಲ್ ಪಂದ್ಯಾವಳಿಯನ್ನು ಆಯೋಜಿಸುತ್ತಾ ಬರುತ್ತಿದ್ದು, ಕಳೆದ ಬಾರಿಗಿಂತ ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿರುವುದು ಸಂತಸದ ಸಂಗತಿ ಎಂದರು.
ಅಂತಿಮ ಪಂದ್ಯದಲ್ಲಿ ಮಹಿಳೆಯರ ಜೆಎನ್‌ಎನ್‌ಇ ಕಾಲೇಜಿನ ಮಹಿಳೆಯರು ಮತ್ತು ಶಿವಮೊಗ್ಗದ ನಿಸರ್ಗ ಮಹಿಳಾ ತಂಡದ ಪಂದ್ಯಾವಳಿ ಅತ್ಯಂತ ರೋಚಕವಾಗಿತ್ತು ಎಂದು ತಿಳಿಸಿದರು.
ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಜೆಎನ್‌ಎನ್‌ಇ ಕಾಲೇಜು, ದ್ವಿತೀಯ ಸ್ಥಾನ ನಿಸರ್ಗ ಮಹಿಳಾ ತಂಡ ಪಡೆದುಕೊಂಡರೇ ತೃತೀಯ ಸ್ಥಾನ ಶಿವಮೊಗ್ಗ ಫ್ರೇಂಡ್ಸ್ ಗ್ರೂಪ್, ಚತುರ್ಥ ಸ್ಥಾನ ಸೃಷ್ಠಿ ಮಹಿಳಾ ತಂಡ ಯಲವಟ್ಟಿ, ಪುರುಷರ ವಿಭಾಗದಲ್ಲಿ ಶಿವಮೊಗ್ಗ ಸಹ್ಯಾದ್ರಿ ತಂಡ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಹೊಸನಗರ ತಂಡ, ತೃತೀಯ ನವುಲೆ ಬಾಯ್ಸ್, ಚತುರ್ಥ ಸ್ಥಾನ ಪೆಸಿಟ್ ಕಾಲೇಜು ಬಾಲಕರು ಪಡೆದುಕೊಂಡರು. ನಗದು, ಟ್ರೋಫಿಯನ್ನು ವಿತರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖ್ಯಾನಾಯ್ಕ್, ದೈಹಿಕ ಶಿಕ್ಷಣ ತಾಲ್ಲೂಕು ಅಧಿಕಾರಿಗಳಾದ ನಿರಂಜನಮೂರ್ತಿ, ಪತ್ರಕರ್ತ ಗಾ.ರಾ.ಶ್ರೀನಿವಾಸ್, ಜಯನಗರ ಪಿಎಸ್‌ಐ ಕೋಮಲ, ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷ ವಿಕಾಸ್, ಪುಟ್ಬಾಲ್ ಜಿಲ್ಲಾ ಸಂಸ್ಥೆಯ ಅಧ್ಯಕ್ಷ ಶ್ರೀನಾಥ್, ತುಂಗಾ ತರಂಗ ಪತ್ರಿಕೆಯ ವರದಿಗಾರ ರಾಕೇಶ್ ಸೋಮಿನಕೊಪ್ಪ, ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾ.ಹ.ತಿಮ್ಮೇನಹಳ್ಳಿ, ಥ್ರೋಬಾಲ್ ಸಂಸ್ಥೆಯ ಕಾರ್ಯದರ್ಶಿ ಕೆ.ಜಿ. ಮಠಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
