Rangayana shimoga ಇಂತಹದೊಂದು ನಾಟಕ ನಮ್ಮ ಮಕ್ಕಳಿಂದ ಒಡಗೂಡಿ ಪೋಷಕರವರೆಗೂ ಈಗಿನ ಕಾಲಕ್ಕೆ ಬೇಕಾಗಿತ್ತು ಎಂದೆನಿಸಿದ ನಾಟಕವೇ ‘ ಮೈ ಫ್ಯಾಮಿಲಿ’. ಎಲ್ಲರೂ ನೋಡಲೇಬೇಕಾದ ನಾಟಕ ಏಕೆಂದರೆ ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಮೊಬೈಲ್ ಇತ್ಯಾದಿಗಳ ಲೋಕದಲ್ಲಿ ಬದುಕುವಂತೆ ಆಗಿದೆ. ಎಲ್ಲರೂ ಅದನ್ನೇ ತಮ್ಮ ಜಗತ್ತೆಂದೂ ಕಳೆದು ಹೋಗುತ್ತಿರುವ ಈ ಹೊತ್ತಿನಲ್ಲಿ, ಬದುಕಿನ ನಿಜವಾದ ಅರ್ಥ ಕಳೆದು ಹೋಗುವುದರಲ್ಲಿಲ್ಲ. ಬದಲಿಗೆ ಸಂತಸದಿಂದ ಬದುಕುವುದರಲ್ಲಿದೆ ಎಂದು ತಿಳಿಸಿದ ನಾಟಕವಾಗಿದೆ.
ಗಣೇಶ್ ಮಂದರ್ತಿಯವರು ನಿರ್ದೇಶಸಿದ ಮೈಸೂರು ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸಿದ ನಾಟಕವೇ ಮೈ ಫ್ಯಾಮಿಲಿ. ಪ್ರತಿಯೊಂದು ಕುಟುಂಬ ತಮ್ಮ ಮಕ್ಕಳೊಂದಿಗೆ ಕುಳಿತು ನೋಡಬೇಕಾದ ನಾಟಕವಾಗಿದೆ. ಏಕೆಂದರೆ ಈ ಕಥನವು ಆಧುನಿಕ ತಂತ್ರಜ್ಞಾನ ಮತ್ತು ವೇಗದ ನಗರ ನಾಗರೀಕರಣವು ಉಂಟುಮಾಡುವ ಸಾಂಸ್ಕೃತಿಕ ಪಲ್ಲಟಗಳು ಮಕ್ಕಳು, ಕುಟುಂಬ, ಸಮುದಾಯ ಮತ್ತು ಸಮಾಜದ ಸಂಬಂಧಗಳ ಮೇಲೆ ಬೀರುವ ಪರಿಣಾಮಗಳನ್ನು ಹುಡುಕುತ್ತಲೇ ಬಿಡುಗಡೆಯ ದಾರಿಗಳನ್ನು ಶೋಧಿಸುವ ಕಾರ್ಯ ಮಾಡಿದೆ. ಇಂದಿನ ದಿನಗಳಲ್ಲಿ ದುಡಿಮೆಯ ಹಿಂದೆ ಬಿದ್ದು ಅಂದರೆ ಹಣ ಸಂಪಾದನೆಯ ದಾರಿಯಲ್ಲಿಯೇ ಪ್ರಪಂಚ ಮರೆತು ಸಾಗಿ ಮಕ್ಕಳನ್ನು ಒಂಥರಾ ಅನಾಥರನ್ನಾಗಿ ಮಾಡುವ ಪೋಷಕರು ನಿಜಕ್ಕೂ ನೋಡಲೇಬೇಕಾದ ನಾಟಕ ಇದು. ಏಕೆಂದರೆ ಇಂದಿನ ಶಿಕ್ಷಣ ಹಣ ಗಳಿಕೆಗಾಗಿ ಅಷ್ಟೇ ಬಿಟ್ಟರೆ ಅದು ವಿವೇಕ ಕಲಿಸುತ್ತಿಲ್ಲ ಎಂಬುದು ನಾನೊಬ್ಬಳು ಉಪನ್ಯಾಸಕಿಯಾಗಿ ನನಗಾದ ಅನುಭವ. ಹಿಂದೆಲ್ಲಾ ಶಿಕ್ಷಣ ಎಂದರೆ ಶಿಸ್ತು, ಶ್ರದ್ಧೆ, ಸಂಸ್ಕಾರ, ಪ್ರಾಮಾಣಿಕತೆ, ಮೌಲ್ಯ ಇತ್ಯಾದಿಯಾಗಿ ಭಾವಿಸುತ್ತಿದ್ದ ನಾವು ಇಂದು ಶಿಕ್ಷಣ ಎಂದರೆ ಹಣ ಗಳಿಸುವ ಕೋರ್ಸ್ ಗಳನ್ನು ಓದಿ ಅದರಿಂದ ಹಣ ಸಂಪಾದಿಸುವುದು ಎನ್ನುವುದಕ್ಕಷ್ಟೇ ಸೀಮಿತವಾಗಿದೆ.
Rangayana shimoga ಈ ನಾಟಕದಲ್ಲಿನ ಎಲ್ಲ ಪಾತ್ರಗಳು ನಮ್ಮ ಹತ್ತಿರಕ್ಕೆ ಬಂದು ನಮ್ಮನ್ನಾವರಿಸಿಬಿಡುತ್ತವೆ. ಸ್ಯಾಮ್ ಸಾನ್ವಿಯರ ಬಾಲ್ಯ ಕೇವಲ ಮೊಬೈಲ್ ವಿಡಿಯೋ ಗೇಮ್ ಗಳ ಜೊತೆಗೆ ಕಳೆಯುವುದು. ತಂದೆ ಭಾರ್ಗವ್ ಕುಟುಂಬ ಚೆನ್ನಾಗಿರಬೇಕೆಂದೇ ಸದಾ ಆಫೀಸ್ ಆಫೀಸ್ ಎಂದು ಹೋಗುವುದು, ತಾಯಿ ಸೌಮ್ಯ ತನ್ನ ಆಫೀಸ್ ಹಾಗೂ ಪಾರ್ಟಿ ಇವುಗಳಲ್ಲಿಯೇ ಕಾಲ ಕಳೆಯುವುದು, ಮನೆ ಕೆಲಸದಾಕೆ ಸಿರಿ ಮಾತ್ರ ತನ್ನ ಸಮೃದ್ಧ ಬಾಲ್ಯ ಅನುಭವಿಸಿ ಅವುಗಳ ವರ್ಣನೆ ಮಾಡುವಾಗ ಮಕ್ಕಳಿಗೆ ಅಚ್ಚರಿಯೆನಿಸುವುದು, ಹಳ್ಳಿಯ ವಾತಾವರಣದಲ್ಲಿ ಬೆಳೆದ ಆಕೆಯ ಆಟ, ಪಾಠ, ಜಾತ್ರೆ, ನಾಟಕ ಇವುಗಳ ವಿವರಿಸುವಾಗ ಸಿರಿಯ ತಲ್ಲೀನತೆ, ನಂತರ ಸ್ಯಾಮ್ ಗೆ ಹಿಡಿಯುವ ಮೊಬೈಲ್ ಗೀಳು, ಅದರಿಂದ ಅವನು ಅನುಭವಿಸುವ ಯಾತನೆ, ಅವನಿಗೆ ಕನಸೆಂದರೆ ಘೋರ ಎನಿಸುವುದು, ಅದರ ಸ್ವರೂಪ, ಸತಿಪತಿಯರ ಕಲಹ ಎಲ್ಲವನ್ನು ನಮ್ಮ ಕಣ್ಣೆದುರಿಗೆ ತಂದ ರೀತಿ ಇದೆಯಲ್ಲ ಅದು ಬಹಳ ಚಂದವಿತ್ತು. ಸಂಬಂಧಗಳ ಪ್ರಾಮುಖ್ಯತೆ, ಹಣದ ಹಿಂದೆ ಹೋದರೆ ಹಾಳಾಗುವ ಬಾಳು. ಸುಖವ ಅರಸಿ ಹೋಗಿ ಎಲ್ಲವನ್ನು ಕಳೆದುಕೊಳ್ಳುವ ರೀತಿ ಇವೆಲ್ಲವೂ ಇಂದಿಗೆ ಪ್ರಸ್ತುತ.
ಇಲ್ಲಿ ಬರುವ ನಾಟಕದೊಳಗೊಂದು ನಾಟಕ, ರಾಗಿ ಬೋರನಕಥೆ, ಹಳ್ಳಿಯ ಬದುಕಿನ ಶೈಲಿ ಎಲ್ಲವನ್ನ ಕಟ್ಟಿಕೊಟ್ಟ ರೀತಿ ಅದ್ಭುತವಾಗಿತ್ತು. ಗೊಂಬೆಗಳ ದೃಶ್ಯಗಳಂತೂ ಒಳ್ಳೆಯ ರೂಪಕವಾಗಿ ನಾಟಕ ನೋಡುಗನ ಆಕರ್ಷಣೆ ಎಂದರೆ ಅದೇ ಎಂದಂತೆ ಆಗಿತ್ತು. ಅದರ ರೋಚಕತೆ ಮಾತುಗಳು ಮಾತ್ರ ತಲುಪಲು ಸಾಧ್ಯವಾಗದ ಸಂಗತಿಗಳನ್ನು ದೃಶ್ಯ ರೂಪ ಗಳಿಂದ ಅದರ ಭಾವನೆ ಸಹೃದಯ ಪ್ರೇಕ್ಷಕರ ಮನದಾಳಕ್ಕೆ ಉಳಿಯುವಂತೆ ಮಾಡುವಂತೆ ಆಯಿತು. ಮಕ್ಕಳಾಗಲಿ ದೊಡ್ಡವರಾಗಲಿ ತಮ್ಮ ಗಮನವನ್ನು ಸ್ವಲ್ಪವೂ ಬೇರೆಡೆಗೆ ಹೋಗದಂತೆ ಈ ನಾಟಕ ಹಿಡಿದಿಟ್ಟಿತ್ತು. ಆದ್ದರಿಂದಲೇ ಇದೊಂದು ಯಶಸ್ವಿ ರಂಗ ಪ್ರಯೋಗವಾಗಿದೆ. ಕುವೆಂಪುರವರ ಗೀತೆಯಾದ-“ಮಕ್ಕಳ ಸಂಘದೊಳೆಚ್ಚರಗೊಳ್ಳಲಿ ಆನಂದದ ಆ ದಿವ್ಯ ಶಿಶು…. ” ಎನ್ನುವುದನ್ನು ಸಂದರ್ಭಕ್ಕೆ ತಕ್ಕಂತೆ ಈ ನಾಟಕದಲ್ಲಿ ಬಳಸಿಕೊಳ್ಳಲಾಗಿದೆ. ನಿರ್ದೇಶಕರಾದ ಗಣೇಶ್ ಮಂದರ್ತಿಯವರು ಯಶಸ್ವಿಯಾಗಿ ಎಲ್ಲರ ಮನಗೆದ್ದಿದ್ದಾರೆ. ಅವರ ಕಲಾತ್ಮಕ ಆಲೋಚನೆ ನೋಡುಗನನ್ನು ಸೆಳೆದು ಚಿಂತನೆಗೆ ಒರೆಹಚ್ಚುವಂತಾಗಿದೆ. ಪ್ರತಿಯೊಬ್ಬನು ಸಹ ಒಂದಲ್ಲ ಒಂದು ರೀತಿಯಲ್ಲಿ ಕುಟುಂಬಕ್ಕೆ ಮಕ್ಕಳಿಗೆ ಮಹತ್ವ ಕೊಡದೆ ದುಡಿಮೆಯೇ ಬದುಕು ಎಂದು ಜೀವನ ಸಾಗಿಸುತ್ತಿರುವ ಈ ಹೊತ್ತಿನಲ್ಲಿ ಬದುಕು ಹೇಗೆ ಮುಖ್ಯವಾಗುತ್ತದೆ ಎಂಬುದನ್ನು ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಸ್ಕ್ರಿಪ್ಟ್, ಡ್ರಾಮೆಟರ್ಜಿ, ಪರಿಕಲ್ಪನೆ ವಿನ್ಯಾಸ ರಂಗ ವಿನ್ಯಾಸ ಪ್ರಸಾದನ ರಂಗ ಸಜ್ಜಿಕೆ ವಸ್ತ್ರಾಲಂಕಾರ ಬೆಳಕು ಈ ಎಲ್ಲವುಗಳು ಅತ್ಯದ್ಭುತ. ಸ್ವಲ್ಪ ಹೆಚ್ಚು ಎನಿಸದ ಕಡಿಮೆಯೂ ಆಗದ ಹದವಾಗಿ ಇಂಪೆನಿಸುವ ಸಂಗೀತ ಇದರ ಅಂದವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿತು. ಅಭಿನಯಿಸಿದ ನಟರಂತೂ ನಮ್ಮ ಸುತ್ತಲೇ ಇದು ನಡೆಯುತ್ತಿದೆ ಏನೋ ಎನ್ನುವಂತೆ ನಟಿಸಿ ಸಹೃದಯರ ಹೃದಯ ಗೆದ್ದರು.
ಈ ರೀತಿಯ ರಂಗ ಪ್ರಯೋಗಗಳು ಶಾಲೆಗಳಲ್ಲಿ ಪೋಷಕರುಗಳಿಗೆ ಪ್ರದರ್ಶನವಾಗಿ ಇನ್ನೂ ಹೆಚ್ಚು ಹೆಚ್ಚು ಎಲ್ಲರಿಗೂ ತಲುಪುವಂತೆ ಆಗಬೇಕು. ನಿಜಕ್ಕೂ ಈ ಕಾಲಘಟ್ಟದ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳೊಂದಿಗೆ ನೋಡಲೇಬೇಕಾದ ನಾಟಕ ಇದು ಎಂದು ಹೇಳುತ್ತಾ ಇಂತಹ ಒಂದು ಒಳ್ಳೆಯ ಕಲ್ಪನೆಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.