Navule Govt Senior Primary School ಕನ್ನಡಕ್ಕಾಗಿ ದುಡಿದ ಮಹನೀಯರು ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ನಮ್ಮ ಮಕ್ಕಳಿಗೆ ಪರಿಚಯಿಸುವ ಅಗತ್ಯವಿದೆ ಎಂದು ಸಹ್ಯಾದ್ರಿ ಅಧ್ಯಕ್ಷ ಜಿ.ಗಣೇಶ್ ಅಭಿಮತ ವ್ಯಕ್ತಪಡಿಸಿದರು. ನವುಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿಶ್ವ ಮಾತೃಭಾಷಾ ದಿನಾಚರಣೆ ಅಂಗವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ಮಕ್ಕಳು ಕೇವಲ ಪುಸ್ತಕಕ್ಕೆ ಸೀಮಿತವಾಗದೆ ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಇಂದು ಕನ್ನಡ ಉಳಿಸಿ ಬೆಳೆಸಿ ಎನ್ನುವುದಕ್ಕಿಂತ ಕನ್ನಡವನ್ನು ಹೆಚ್ಚಾಗಿ ಬಳಸಿ ಎಂದರೆ ಒಳ್ಳೆಯದು. ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಅನ್ಯ ಭಾಷೆಯನ್ನು ಗೌರವಿಸೋಣ ಕನ್ನಡ ಭಾಷೆ ಉಳಿಸೋಣ ಎಂದು ನುಡಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಜಿ ವಿಜಯಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕನ್ನಡ ಶಾಲೆಗಳು ಇಂದು ಅವಸಾನದ ಅಂಚಿನಲ್ಲಿವೆ. ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಸವಲತ್ತುಗಳಿದ್ದರೂ ದಾಖಲಾತಿಯಲ್ಲಿ ಕನ್ನಡ ಶಾಲೆಗಳು ಸೊರಗುತ್ತಿವೆ. ಕನ್ನಡದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳು ನಮ್ಮಲ್ಲಿ ಇದ್ದಾರೆ. ಈ ನಿಟ್ಟಿನಲ್ಲಿ ನಾವುಗಳು ಮನೆಗಳಲ್ಲಿ ವ್ಯಾಪಾರ ಸ್ಥಳಗಳಲ್ಲಿ ಕನ್ನಡವನ್ನು ಹೆಚ್ಚು ಹೆಚ್ಚು ಬಳಸಬೇಕು ಎಂದು ವಿನಂತಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಅನ್ನಪೂರ್ಣ ಎಲ್ ಆರ್ ಮಾತನಾಡಿ ಜೆಸಿಐ ಸಹ್ಯಾದ್ರಿ ಶಿವಮೊಗ್ಗ ಸಂಸ್ಥೆ ವತಿಯಿಂದ ಈಗಾಗಲೇ ನಮ್ಮ ಶಾಲೆಗೆ ಬ್ಯಾಂಡ್ ಸೆಟ್ ಹಾಗೂ ಗೋಡೆ ಬರಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದ್ದನ್ನು ನಾವು ಸ್ಮರಿಸುತ್ತೇವೆ. ಇಂದು ಬಹಳ ಅಗತ್ಯವಾಗಿ ಬೇಕಾಗಿರುವ ವಸ್ತುಗಳನ್ನು ನೀಡಿ ಸಹಕರಿಸಿದ್ದಾರೆ ಎಂದು ಗೌರವಿಸಿದರು. ಸಮಾರಂಭದಲ್ಲಿ ಸಿ ಆರ್ ಪಿ ವೀರು ಆರ್ ಆಚಾರ್ಯ, ಶಿಕ್ಷಕರಾದ ಪ್ರೇಮಲತಾ.ಬಿ.ಜಿ, ಜಿ.ಕೆ.ಮಾಲ, ಆಂಜನೇಯ.ಬಿ, ಶ್ರೀಲತಾ.ಟಿ.ಸಿ, ಹಂಸ.ಹೆಚ್.ಎಂ, ವೀಣಾ.ಆರ್, ಜೆ ಸಿ ಐ ಸಹ್ಯಾದ್ರಿ ಘಟಕದ ನಿತಿನ್, ಸಿಂಚನ ಹಾಗೂ ಮಕ್ಕಳು ಉಪಸ್ಥಿತರಿದ್ದರು.